Bollywood ಹಿರಿಯ ನಟಿ ಜೀನತ್ ಅಮಾನ್ ತಮ್ಮ ಹಿಂದೂ ಹೆಸರು 'ಲಲಿತೇಶ್ವರಿ' ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿ ಹಿಂದೂ, ತಂದೆ ಮುಸ್ಲಿಂ ಎಂದು ಹೇಳಿರುವ ನಟಿ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಒಂದು ಕಾಲದ ಖ್ಯಾತ ನಟಿ ಜೀನತ್ ಅಮಾನ್ ಇದೀಗ ತಮ್ಮ ಹಿಂದೂ ಹೆಸರೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ತಂದೆ-ತಾಯಿ, ಧಾರ್ಮಿಕ ನಂಬಿಕೆ ಹಾಗೂ ಬಾಲಿವುಡ್ ವೃತ್ತಿಜೀವನದ ಬಗ್ಗೆ ಅವರು ಹಲವು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಿಂದೊಮ್ಮೆ ಬಾಲಿವುಡ್‌ನಲ್ಲಿ ಮಿಂಚಿದ್ದ ಖ್ಯಾತ ನಟಿ ಜೀನತ್ ಅಮಾನ್ ಈಗ ಸಿನಿಮಾಗಳಿಂದ ದೂರವಿದ್ದರೂ, ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅವರು ಸಖತ್ ಆ್ಯಕ್ಟೀವ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಸಂದರ್ಶನವೊಂದರಲ್ಲಿ ಜೀನತ್ ತಮ್ಮ ಹಿಂದೂ ಹೆಸರನ್ನು ಬಹಿರಂಗಪಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಜೊತೆಗೆ, ತಮ್ಮ ತಂದೆ-ತಾಯಿಯ ಬಗ್ಗೆಯೂ ಕೆಲವು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಜೀನತ್ ಅಮಾನ್ ಅವರು ಅಮಿತಾಭ್ ಬಚ್ಚನ್, ಶಶಿ ಕಪೂರ್, ಧರ್ಮೇಂದ್ರ, ರಿಷಿ ಕಪೂರ್, ವಿನೋದ್ ಖನ್ನಾ, ದೇವ್ ಆನಂದ್, ಶತ್ರುಘ್ನ ಸಿನ್ಹಾ ಅವರಂತಹ ಹಲವಾರು ಸೂಪರ್‌ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡವರು.

ಏನಿದು ಜೀನತ್ ಅಮಾನ್‌ರ ಹಿಂದೂ ಹೆಸರು?

ಹಿರಿಯ ನಟಿ ಜೀನತ್ ಅಮಾನ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕೆಲವು ದೊಡ್ಡ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. 70-80ರ ದಶಕದಲ್ಲಿ ತಮ್ಮ ಗ್ಲಾಮರಸ್ ಶೈಲಿಗೆ ಹೆಸರುವಾಸಿಯಾಗಿದ್ದ ಜೀನತ್, ಇದೇ ಮೊದಲ ಬಾರಿಗೆ ತಮ್ಮ ಹಿಂದೂ ಹೆಸರನ್ನು ಬಹಿರಂಗಪಡಿಸಿದ್ದಾರೆ. ನ್ಯೂಸ್18 ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಜೀನತ್ ಅಮಾನ್' ಎಂಬ ಹೆಸರು ತಂದೆಯಿಂದ ಬಂದಿದ್ದು, ತಾಯಿಯ ಕಡೆಯಿಂದ ತಮಗೆ 'ಲಲಿತೇಶ್ವರಿ' ಎಂಬ ಹೆಸರಿತ್ತು ಎಂದು ತಿಳಿಸಿದ್ದಾರೆ. ಅವರ ತಾಯಿಯ ಹೆಸರು ವರ್ಧಿನಿ. ಅವರು ಪ್ರತಿದಿನ ಎರಡು-ಮೂರು ಗಂಟೆಗಳ ಕಾಲ ಪೂಜೆ ಮಾಡುತ್ತಿದ್ದ ಧಾರ್ಮಿಕ ಹಿಂದೂ ಮಹಿಳೆಯಾಗಿದ್ದರು. ಜೀನತ್ ಅವರನ್ನು ಹೆಚ್ಚಾಗಿ ಬೆಳೆಸಿದ್ದು ಅವರ ತಾಯಿಯೇ.

ನೀವು ಧಾರ್ಮಿಕರೇ ಎಂದು ಕೇಳಿದಾಗ, "ನಾನು ಧಾರ್ಮಿಕ ವ್ಯಕ್ತಿಯಲ್ಲ, ಯಾಕಂದ್ರೆ ಎಲ್ಲವನ್ನೂ ನಾನು ಹತ್ತಿರದಿಂದ ನೋಡಿದ್ದೇನೆ. ನಮ್ಮಮ್ಮ ಹಿಂದೂ, ನಮ್ಮಪ್ಪ ಮುಸ್ಲಿಂ. ನನ್ನ ಮಕ್ಕಳ ತಂದೆಯೂ ಮುಸ್ಲಿಂ. ನನ್ನ ಮಲತಂದೆ ಜರ್ಮನ್ ಆಗಿದ್ದರು. ಹೀಗಾಗಿ ನನಗೆ ಯಾವುದೇ ಒಂದು ಧರ್ಮವನ್ನು ಪಾಲಿಸುವ ಅಗತ್ಯ ಬರಲಿಲ್ಲ. ಎಲ್ಲಾ ಧರ್ಮಗಳೂ ಒಳ್ಳೆಯವೇ. ನಾನು ಮಾನವೀಯತೆ, ದಯೆ, ಶಾಂತಿ, ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದೇನೆ, ಅದೇ ನನ್ನ ಧರ್ಮ," ಎಂದು ಅವರು ಹೇಳಿದ್ದಾರೆ.

ಜೀನತ್ ಅಮಾನ್ ವೃತ್ತಿಬದುಕು

ಜೀನತ್ ಅಮಾನ್ ಅವರು 1970ರಲ್ಲಿ 'ಫೆಮಿನಾ ಮಿಸ್ ಇಂಡಿಯಾ' ಮತ್ತು 'ಮಿಸ್ ಏಷ್ಯಾ ಪೆಸಿಫಿಕ್ ಇಂಟರ್‌ನ್ಯಾಷನಲ್' ಸ್ಪರ್ಧೆಗಳನ್ನು ಗೆದ್ದು ಮೊದಲು ಗುರುತಿಸಿಕೊಂಡರು. ಅದೇ ವರ್ಷ 'ದಿ ಈವಿಲ್ ವಿದಿನ್' (1970), 'ಹಂಗಾಮ' (1971) ಮತ್ತು 'ಹಲ್‌ಚಲ್' (1971) ಚಿತ್ರಗಳ ಮೂಲಕ ನಟನೆಗೆ ಕಾಲಿಟ್ಟರು. ಆದರೆ, ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು 1971ರಲ್ಲಿ ತೆರೆಕಂಡ ದೇವ್ ಆನಂದ್ ಅವರ 'ಹರೇ ರಾಮ ಹರೇ ಕೃಷ್ಣ' ಚಿತ್ರ.

ನಂತರ 'ಯಾದೋಂ ಕೀ ಬಾರಾತ್' (1973), 'ರೋಟಿ ಕಪಡಾ ಔರ್ ಮಕಾನ್' (1974), 'ಅಜನಬೀ' (1974), 'ವಾರಂಟ್' (1975), 'ಚೋರಿ ಮೇರಾ ಕಾಮ್' (1975), 'ಧರಮ್ ವೀರ್' (1977), 'ಛೈಲಾ ಬಾಬು' (1977), 'ಹಮ್ ಕಿಸಿಸೇ ಕಮ್ ನಹೀ' (1977) ಮತ್ತು 'ದಿ ಗ್ರೇಟ್ ಗ್ಯಾಂಬ್ಲರ್' (1979) ನಂತಹ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. 90ರ ದಶಕದಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದ ಜೀನತ್, 2003ರಲ್ಲಿ ಮತ್ತೆ ಕಮ್‌ಬ್ಯಾಕ್ ಮಾಡಿದರು. ಅವರು ಕೊನೆಯದಾಗಿ 'ದಿ ರಾಯಲ್ಸ್' ಎಂಬ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದು, ಅದು 2025ರಲ್ಲಿ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.