Asianet Suvarna News Asianet Suvarna News

'ನಾಗರಹಾವು' ಮರು ಬಿಡುಗಡೆ ಮಾಡುತ್ತಿರುವುದೇಕೆ?

ಮತ್ತೆ ಕನ್ನಡ ಚಿತ್ರರಂಗದಲ್ಲಿ ನಾಗರಹಾವು ಚಿತ್ರದ ಸದ್ದು. ಸುಮಾರು 160 ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಹೊಸ ತಂತ್ರಜ್ಞಾನದಲ್ಲಿ ರೂಪಿಸಿ ಪ್ರೇಕ್ಷಕರ ಮುಂದಿಡುತ್ತಿರುವ ನಟ ಬಾಲಾಜಿ ಇಲ್ಲಿ ಮಾತನಾಡಿದ್ದಾರೆ.

Why nagarahavu film was released again
Author
Bengaluru, First Published Jul 19, 2018, 1:54 PM IST

- ಈ ಚಿತ್ರವನ್ನು ಹೊಸ ತಂತ್ರಜ್ಞಾನದಲ್ಲಿ ಮರು ಬಿಡುಗಡೆ ಮಾಡುವ ಯೋಚನೆ ಬಂದಿದ್ದು ಯಾಕೆ?

ನನಗೆ ನಾಗರಹಾವು ಚಿತ್ರದ ಕತೆ ಮೇಲಿದ್ದ ನಂಬಿಕೆ. ಆ ಚಿತ್ರದ ಪಾತ್ರಗಳು ನನ್ನ ಕಾಡಿದ ರೀತಿ. ಎಷ್ಟು ಸಲ ನೋಡಿದರೂ ಮರೆಯಾಗದ ಕಲಾವಿದರ ನಟನೆ. ಮತ್ತೆ ಮತ್ತೆ ನೋಡಬೇಕು ಎನಿಸುವ ಸಿನಿಮಾ. ನನ್ನ ಹಾಗೆ ಇಂಥ ಅಭಿಪ್ರಾಯ ತುಂಬಾ ಜನಕ್ಕೆ ಇರಬಹುದಲ್ಲ ಎನ್ನುವ ಕುತೂಹಲದಲ್ಲಿ ಹುಟ್ಟಿಕೊಂಡ ಯೋಜನೆ ಮತ್ತು ಕನಸು ಇದು.

- ನಾಗರಹಾವು ಚಿತ್ರಕ್ಕೆ ಹೊಸ ರೂಪ ಕೊಡುವ ಯೋಚನೆ ಬಂದಾಗ ನೀವು ಮೊದಲು ಹೇಳಿಕೊಂಡಿದ್ದು ಯಾರಿಗೆ, ಅವರ ಪ್ರತಿಕ್ರಿಯೆ ಹೇಗಿತ್ತು?

ನನ್ನ ಅಣ್ಣ ರವಿಚಂದ್ರನ್ ಅವರ ಬಳಿ ಹೇಳಿಕೊಂಡೆ. ಅವರು ನನ್ನ ಮಾತು ಕೇಳಿ ಏನೂ ಮಾತನಾಡದೆ ಶೇಕ್ ಹ್ಯಾಂಡ್ ಮಾಡಿ ಗುಡ್ ಅಂದ್ರು. ಆ ನಂತರ ಅದರ ಕಷ್ಟಗಳನ್ನು ಮಾತನಾಡಿದರು. ಯೋಚನೆ ಮಾಡಿ ಮುಂದುವರಿ ಎಂದರು. ನಾನು ಆಗಲೇ ನಿರ್ಧಾರ ಮಾಡಿ ಆಗಿತ್ತು. ಹೀಗಾಗಿ ಅಣ್ಣನ ಅಶೀರ್ವಾದ ಪಡೆದು ನಾಗರಹಾವು ಚಿತ್ರವನ್ನು ಕೈಗೆತ್ತಿಕೊಂಡೆ.

- ಕ್ರೇಜಿಸ್ಟಾರ್ ಅವರಿಗೆ ನಾಗರಹಾವು ಚಿತ್ರದ ಬಗ್ಗೆ ಏನು ಅಭಿಪ್ರಾಯವಿತ್ತು?

ಇದು ಅವರ ಅಚ್ಚುಮೆಚ್ಚಿನ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ‘ನಾನು ಎಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ, ರಾಮಾಚಾರಿಯಂತಹ ಪಾತ್ರ ಸಿಕ್ಕಿಲ್ಲ. ನನಗೆ ಮಾತ್ರವಲ್ಲ, ಬೇರೆ ಯಾರಿಗೂ ಸಿಗದ ಪಾತ್ರ ಅದು. ಅಂಥ ಅದ್ಭುತವಾದ ಪಾತ್ರ ಮತ್ತು ಕತೆಗಾಗಿ ನಾನು ಸೇರಿದಂತೆ ಎಲ್ಲಾ ಕಲಾವಿದರು ಕಾಯುತ್ತಿರುತ್ತೇವೆ. ಆದರೆ, ವಿಷ್ಣುವರ್ಧನ್ ಅವರಿಗೆ ಮೊದಲ ಚಿತ್ರದಲ್ಲೇ ಸಿಕ್ಕಿದೆ.’ ಇದು ನನ್ನ ಬಳಿ ನಾಗರಹಾವು ಚಿತ್ರದ ಕುರಿತು ರವಿಚಂದ್ರನ್ ಅವರು ಹೇಳಿದ ಮಾತು. ಒಂದು ಚಿತ್ರವನ್ನು ಮರು ಬಿಡುಗಡೆ ಮಾಡುವುದಕ್ಕೆ ಇದಕ್ಕಿಂತ ಮತ್ತೊಂದು ಉತ್ಸಾಹದ ಮಾತುಗಳು ಬೇಕಾ?

- ಹಳೆಯ ವರ್ಷನ್ ಮತ್ತು ಹೊಸ ವರ್ಷನ್ ಎರಡನ್ನೂ ನೋಡಿರುವ ನಿಮಗೆ ಈಗ ಏನನಿಸುತ್ತಿದೆ?

ನನಗೆ ಹಳೆಯ ವರ್ಷನ್ ಇಷ್ಟವಾಗಿದ್ದಕ್ಕೆ ಅದನ್ನು ಹೊಸ ರೂಪದಲ್ಲಿ ನೋಡಲು ಬಯಸುತ್ತಿದ್ದೇನೆ. ಒಂದು ಎವರ್ ಗ್ರೀನ್ ಚಿತ್ರವನ್ನು ಯಾವಾಗ ನೋಡಿದರೂ ಮೂಡುವ ಅಭಿಪ್ರಾಯ ಒಂದೇ ‘ನೆಚ್ಚಿನ ಸಿನಿಮಾ’.

- ಹಳೆಯ ಚಿತ್ರಕ್ಕೆ ಹೊಸ ತಂತ್ರಜ್ಞಾನ ಎಂದ ಮೇಲೆ ಖರ್ಚು ತುಂಬಾ ಆಗಿರಬೇಕಿಲ್ಲ?

ತುಂಬಾ ಜನ ಖರ್ಚಿನ ಬಗ್ಗೆಯೇ ಕೇಳಿದ್ದಾರೆ. ನಾನು ಅದರ ವೆಚ್ಚದ ಕುರಿತು ಮಾತನಾಡಿ ನಾಗರಹಾವು ಚಿತ್ರದ ತೂಕವನ್ನು ಕಳೆಯಲಾರೆ. ಅದು ಏನೇ ಖರ್ಚಾಗಿದ್ದರೂ ನಾನು ಪ್ರೀತಿಯಿಂದ ಮಾಡಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಇದುನನ್ನ ತಂದೆ ಎನ್. ವೀರಾಸ್ವಾಮಿ ಅವರು ನಿರ್ಮಿಸಿ ಬಿಡುಗಡೆ ಮಾಡಿದ ಸಿನಿಮಾ. ಅವರು ಯಶಸ್ಸು ಕಂಡ ಚಿತ್ರಕ್ಕೆ ನಾನು ಅಳಿಲು ಸೇವೆ ಮಾಡಿ ಬಿಡುಗಡೆ ಮಾಡುತ್ತಿದ್ದೇನೆ.

- ರಾಮಾಚಾರಿ ಹೆಸರು ಅಥವಾ ಅದರ ನೆರಳಿನಲ್ಲಿ ಒಂದಿಷ್ಟು ಸಿನಿಮಾ, ಕ್ಯಾರೆಕ್ಟರ್‌ಗಳು ಹುಟ್ಟಿಕೊಳ್ಳುತ್ತಿವೆಯಲ್ಲ?

ಯಾರೂ ಏನೇ ಮಾಡಿದರೂ ಕನ್ನಡಕ್ಕೆ ಒಬ್ಬರೇ ರಾಮಾಚಾರಿ. ಅದು ವಿಷ್ಣುವರ್ಧನ್. ಕನ್ನಡಕ್ಕೆ ಒಬ್ಬರೇ ಜಲೀಲ. ಅದು ರೆಬೆಲ್ ಸ್ಟಾರ್ ಅಂಬರೀಶ್. ಹಾಗೆ ಕನ್ನಡಕ್ಕೆ ಒಂದೇ ನಾಗರಹಾವು. ಅದು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿ, ಎನ್ ವೀರಾಸ್ವಾಮಿ ನಿರ್ಮಿಸಿದ ಚಿತ್ರ. ಹೀಗಾಗಿ ಇಂಥ ಚಿತ್ರಗಳನ್ನು ಮತ್ತು ಅಲ್ಲಿ ಬರುವ ಪಾತ್ರಗಳನ್ನು ದೂರದಿಂದ ನೋಡಿ ಸಂಭ್ರಮಿಸಬೇಕು. ಅವುಗಳನ್ನು ನಕಲು ಮಾಡುವುದಕ್ಕೆ ಹೋಗಬಾರದು.

- ಸರಿ, ಮತ್ತೆ ನೀವು ಹೀರೋ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಯಾವಾಗ?

ಖಂಡಿತ ನಾನು ಚಿತ್ರರಂಗ ಬಿಟ್ಟು ಹೋಗಿಲ್ಲ. ಎರಡು ವರ್ಷ ನಾಗರಹಾವು ಚಿತ್ರದಲ್ಲಿ ಮುಳುಗಿದ್ದೆ. ನಾನೇ ಖುದ್ದಾಗಿ ಕೂತು ಪೋಸ್ಟರ್ ಡಿಸೈನ್ ಮಾಡಿದೆ. ನಾಗರಹಾವು ಚಿತ್ರದಲ್ಲಿ ನಟಿಸಿರುವ ಕಲಾವಿದರು ಸೇರಿದಂತೆ ಬೇರೆ ಬೇರೆಯವರ ಸಂದರ್ಶನಗಳನ್ನು ಮಾಡಿಕೊಂಡು ಬಂದೆ. ಪ್ರಚಾರ ಹೇಗಿರಬೇಕೆಂದು ನಾನೇ ರೂಪಿಸಿದ್ದು. ಹೀಗಾಗಿ ನನ್ನ ಚಿತ್ರಗಳತ್ತ ಗಮನ ಕೊಡಲಿಲ್ಲ. ಆಗಸ್ಟ್ ನಂತರ ತೆರೆ ಮೇಲೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

Follow Us:
Download App:
  • android
  • ios