- ಸಹ ಸ್ಪರ್ಧಿ ಮೇಲೆ ಕೈ ಮಾಡಿ ಮನೆಯಿಂದ ಸಂಯುಕ್ತಾ ಹೊರ ನಡೆದಾಗ ಕೃಷಿ ನಡವಳಿಕೆ ಹೇಗಿತ್ತು?-ಹಾಡಿನ ಬಗ್ಗೆ ಕಿಚ್ಚ ಕೇಳಿದ ಪ್ರಶ್ನೆಗೆ, ಚಂದನ್ ಶೆಟ್ಟಿ ತನ್ನ ಮನದನ್ನೆಯ ಮೇಲೆ ಹೇಳಿದ್ದೇನು?- ಅಷ್ಟಕ್ಕೂ ಶೃತಿ ಮನಸ್ಸಿನಲ್ಲಿ ಇರೋದು ಯಾರು?

ಬೆಂಗಳೂರು: ಸುಮಾರು 70 ದಿನಗಳನ್ನು ಪೂರೈಸಿದ ಕನ್ನಡದ ಬಿಗ್ ಬಾಸ್‌ ಮನೆಯಲ್ಲಿ ನಟಿ ಸಂಯುಕ್ತಾ ಹಿಗಡೆ, ಸಹ ಸ್ಪರ್ಧಿ ಮೇಲೆ ಕೈ ಮಾಡಿದ್ದರಿಂದ ಕಳೆದ ವಾರ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕಳೆದ ವಾರದ ಘಟನೆಯನ್ನು 'ವೀಕೆಂಡ್ ವಿತ್ ಕಿಚ್ಚ'ದಲ್ಲಿ ನೆನಪಿಸಿದ ಸುದೀಪ್, ಸ್ಪರ್ಧಿಗಳ ನಡವಳಿಕೆಗಳನ್ನು ಗಮನಿಸಿ, ಟೀಕಿಸಿ, ಬುದ್ಧಿವಾದ ಹೇಳಿದರು.

ಸಂಯುಕ್ತಾ ಗಲಾಟೆಯಲ್ಲಿ ಯಾರ ನಡವಳಿಕೆ ಹೇಗಿತ್ತು, ಎಂಬುದನ್ನು ವಿಶ್ಲೇಷಿಸಿದ ಸುದೀಪ್, ಕೃಷಿ ತಾಪಂಡ ಅವರಿಗೆ 'ನಿಮ್ಮ ನಡೆ ಸತ್ತವರ ಮನೇಲಿ ಐಸ್‌ಕ್ರೀಂ ಕೇಳಿದ ಹಾಗಿತ್ತು..,' ಎಂದರು. 

ಏಕೆ ಗೊತ್ತಾ? ಸಹ ಸ್ಪರ್ಧಿ ಮೇಲೆ ಕೈ ಮಾಡಿದ ಸಂಯುಕ್ತಾಳನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿದಾಗ, ದುಃಖದಿಂದಲೇ ಮನೆಯಿಂದ ಹೊರ ನಡೆದಿದ್ದರು. ಮನೆಯ ಸದಸ್ಯರನ್ನು ಬೀಳ್ಕೊಡುವ ವೇಳೆ, ಸಂಯುಕ್ತಾ ಚಪ್ಪಲಿಯನ್ನು ಕೃಷಿ ಕೇಳಿ ಪಡೆದಿದ್ದರು. ಈ ಸಂದರ್ಭದಲ್ಲಿ ಕೃಷಿ ಸಂಯುಕ್ತಾ ಮುಂದಿಟ್ಟ ಬೇಡಿಕೆ ವಿಚಿತ್ರವೆನಿಸಿತು, ಎಂದು ಸುದೀಪ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶೃತಿ ಮೇಲಿದೆ ಕ್ರಷ್ ಎಂದ ಚಂದನ್ ಶೆಟ್ಟಿ....

ಆಗಾಗ ಸಹ ಸ್ಪರ್ಧಿಗಳ ಮೇಲೆ ಒಂದಲ್ಲ ಒಂದು ಗೀತೆಯನ್ನು ರಚಿಸುತ್ತಾ, ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿರುವುದು ಗಾಯಕ ಚಂದನ್ ಶೆಟ್ಟಿ. ಇತ್ತೀಚೆಗೆೊಂದು ಗೀತೆ ರಚಿಸಿ, ಮಧುರವಾದ ಸಂಗೀತ ಸಂಯೋಜಿಸಿದ ಹಾಡೊಂದು ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಸುದೀಪ್ ಕಾಲೆಳೆದಾಗ ಚಂದನ್ ತಮ್ಮ ಕ್ರಷ್ ಬಗ್ಗೆ ಮನ ಬಿಚ್ಚಿ ಮಾತನಾಡಿದರು.

'ನನ್ನ ಮನಸ್ಸಿನಲ್ಲಿ, ಕಲ್ಪನೆಯಲ್ಲಿರುವ ಹೆಣ್ಣಿನ ಎಲ್ಲ ಗುಣಗಳೂ ಶೃತಿಯಲ್ಲಿವೆ. ಅವರ ಕ್ಯೂಟ್‌ನೆಸ್ ಸಹ ನನಗೆ ಇಷ್ಟವಾಗಿದೆ. ಆದರೆ, ನಂಗವರು ಸಿಗೋಲ್ಲ ಅಂತ ಗೊತ್ತು,' ಎಂದು ತಮ್ಮ ಮನದಾಳದ ಮಾತನ್ನು ಎಲ್ಲರ ಮುಂದೆಯೇ ಅಭಿವ್ಯಕ್ತಗೊಳಿಸಿದರು. ಆ ಮೂಲಕ ಚಂದನ್‌ಗೆ ಶೃತಿ ಮೇಲೆ ಕ್ರಷ್ ಇರೋದು ಸತ್ಯವೆಂಬುವುದು ಜನರಿಗೂ ಗೊತ್ತಾಯಿತು.

ಚಂದನ್ ಮನದಾಳದ ಮಾತಿಗೆ ಶೃತಿ ಮಾತ್ರ ಯಾವ ರೀತಿಯೂ ಪ್ರತಿಕ್ರಿಯೆ ತೋರಲಿಲ್ಲ. ಅವರಿಗೆ ಜೆಕೆ ಮೇಲೆ ಒಲವಿದೆಯಾ ಎಂಬುವುದು ಪ್ರೇಕ್ಷಕರ ಅನುಮಾನ.