Asianet Suvarna News Asianet Suvarna News

ವಿವಾದ ಸೃಷ್ಟಿಸಿದ ಪ್ರಿಯಾ ವಾರಿಯರ್ ನಟಿಸಿದ ಹಾಡಿನ ಕನ್ನಡ ಅರ್ಥವೇನು..?

ಕಣ್ ಮಿಟುಕಿಸಿ, ಹುಬ್ಬೇರಿಸಿ, ಎಲ್ಲರ ಹೃದಯ ಕದ್ದ ಪ್ರಿಯಾ ವಾರಿಯರ್ ಹಾಡು, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಈ ಹಾಡಿನ ಅರ್ಥವೇನು? ಇದನ್ನು ಬರೆದವರು ಯಾರು? ಇಲ್ಲಿದೆ ಕನ್ನಡ ಭಾವಾನುವಾದ.

What Is Kannada Meaning Of Priya Prakash Song

'ಜುಮಕಿ ಕಮ್ಮಲ್' ಗಿಂತಲೂ ಇದೀಗ ಮತ್ತೊಂದು ಮಲಯಾಳಂ ಹಾಡು ಸಾಮಾಜಿಕ ಜಾಲತಾಣದಲ್ಲಿಯೂ ಸದ್ದು ಮಾಡಿದೆ.  ಪ್ರಿಯಾ ಪ್ರಕಾಶ್ ಮತ್ತು ಕ್ಯೂಟಾಗಿ ನಾಚಿಕೊಳ್ಳುವ ಹುಡುಗ ರೋಷನ್ ಅಬ್ದುಲ್ ರವೂಫ್ ನಟಿಸಿರುವ ಮಾಣಿಕ್ಯ ಮಲರಾಯ ಪೂವಿ'  ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈ ಹಾಡು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು, ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದು, ನಟಿ, ನಿರ್ದೇಶಕರ ವಿರುದ್ಧವೂ ದೂರು ದಾಖಲಾಗಿವೆ. ಆದರೆ,  ಕವಿ, ಕಥೆಗಾರ ಸುನೈಫ್ ಈ ಹಾಡನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  'ಮಾಣಿಕ್ಯ ಮಲರಾಯ ಪೂವಿ' ಕವನವನ್ನು ಮೂಲವಾಗಿ ಬರೆದಿದ್ದು, ಮಾಪಿಳ ಹಾಡುಗಳ ಕವಿ ಪಿಎಂಎ ಜಬ್ಬಾರ್. ಇದೀಗ ಇವರು ರಿಯಾದಿನಲ್ಲಿದ್ದಾರೆ. 1978ರಲ್ಲಿಯೇ ಬರೆದ ಈ ಕವನಕ್ಕೆ ರಫೀಕ್ ತಲಶೇರಿ ಎಂಬ ಇನ್ನೊಬ್ಬ ಮಾಪಿಳ ಕವಿ ಸಂಗೀತ ಸಂಯೋಜಿಸಿದ್ದಾರೆ. ಆ ಕಾಲದಲ್ಲಿ ಆಕಾಶವಾಣಿ ಮತ್ತು ಕ್ಯಾಸೆಟ್‌ಗಳ ಮೂಲಕ ಜನಮನ ಗೆದ್ದಿದ್ದ ಈ ಹಾಡು ಈಗ ಹುಬ್ಬಿನ ಹುಡುಗಿಯ ಮೂಲಕ ವೈರಲ್ ಆಗಿದೆ. ಆಗ ಬರೆದ ಹಾಡು ಈ ಶತಮಾನದ ಯುವಕರನ್ನೂ ತಲುಪಿದೆ.

'ಒರುಅಡಾರ್ ಲವ್' ಎಂಬ ಸಿನಿಮಾದಲ್ಲಿ ಶಾನ್ ರಹ್ಮಾನ್ ಎಂಬ ಪ್ರತಿಭಾವಂತ ಸಂಗೀತಗಾರ ಹಾಡನ್ನು ಮತ್ತೆ ತೆರೆಗೆ ತಂದು, ಯಶ ಕಂಡಿದ್ದಾರೆ. ಹಾಡನ್ನು ಹಾಡಾಗಿ, ಪ್ರೇಮವನ್ನು ಪ್ರೇಮವಾಗಿ, ಸಿನಿಮಾವನ್ನು ಸಿನಿಮಾ ಆಗಿ ನೋಡಿದರೇನೆ ಚೆಂದ ಎಂದು ಹೇಳುವ ಜಬ್ಬಾರ್ ಈ ಹಾಡಿನ ವಿವಾದಗಳನ್ನು ತಳ್ಳಿ ಹಾಕಿದ್ದಾರೆ.

ಜಬ್ಬಾರ್ ಬರೆದಿರುವ ಸುಮಾರು 500ಕ್ಕೂ ಹೆಚ್ಚು ಮಾಪಿಳ ಹಾಡುಗಳಲ್ಲಿ ಮಾಣಿಕ್ಯ ಮಲರ್ ಅತ್ಯಂತ ಜನಪ್ರಿಯವಾದದ್ದು. ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರಿನಲ್ಲಿ ಪಿಯುಸಿ ಮುಗಿಸಿದ ಜಬ್ಬಾರ್, ಕೆಲಕಾಲ ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದು ಮದರಸವೊಂದರಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಹಾಗಾಗಿಯೇ ಆಪ್ತರು ಈಗಲೂ ಜಬ್ಬಾರ್ ಉಸ್ತಾದ್ ಎಂದೇ ಇವರನ್ನು ಕರೆಯುತ್ತಾರೆ.

ಮಾಣಿಕ್ಯ ಮಲರಾಯ ಪೂವಿ ಹಾಡಿನ ಭಾವಾನುವಾದ ಇಲ್ಲಿದೆ:

ಹೂವಾದಳು ಮುತ್ತರಳಿ ಮಹನೀಯಳು ಖದೀಜಾ ಬೀವಿ

ಪಾವನ ಭೂಮಿ ಮಕ್ಕದಲ್ಲಿ ಬಾಳಿದಳು ರಾಣಿಯಂತೆ

ಅಂತ್ಯ ದೂತರನ್ನು ಕರೆದು ವ್ಯಾಪಾರ ಒಪ್ಪಿಸುವ ಭರದಲ್ಲಿ ಪ್ರೇಮಾಂಕುರವಾಯಿತು

ಮೊದಲ ನೋಟದಲ್ಲಿ ಮಾರಾಟದ ವಹಿವಾಟು ಮುಗಿಸಿ

ಪ್ರಿಯ ಪ್ರವಾದಿ ಮರಳುವ ಹೊತ್ತು ಕಾತರಳಾಗಿರುವಳು ಬೀವಿ

ಮದುವೆಯ ಹಂಬಲ ಹೊತ್ತು ಕರೆದಳು

ತನ್ನ ಗೆಳತಿಯನ್ನು ಅರುಹಿದಳು ಮನದಿಚ್ಚೆಯನ್ನು ಕಳಿಸಿದಳು

ಅಬೂತಾಲಿಬರನ್ನು ಬಳಿಗೆ ಮದುವೆಯ ಸಂಗತಿಯಿದು

ಪಾರವಿಲ್ಲದ ಸಂತೋಷವಿದು ಅಬೂತಾಲಿಬರಿಗೆ ಒಪ್ಪಿತವಿದು

ಬೀವಿ ಖದೀಜಾ ಮದುಮಗಳು ಮದುಮಗನ ಗತ್ತಿನಲ್ಲಿ ಅಂತ್ಯ ದೂತರು ಅವನಿಚ್ಚೆಯಂತೆ ಸೂರ್ಯನುದಿಸಿದನು ಮಾದರಿ ದಂಪತಿಗೆ ಮಂಗಳ ಕೋರಿದನು

ಮೂಲ ಮಲಯಾಳಂ: ಪಿ.ಎಂ.ಎ ಜಬ್ಬಾರ್ ಕರುಪಡನ್ನ ಕನ್ನಡ ಭಾವಾನುವಾದ: ಸುನೈಫ್

 

 

Follow Us:
Download App:
  • android
  • ios