ಬೆಂಗಳೂರು (ಜ. 23):  ಮೊಟ್ಟ ಮೊದಲ ಬಾರಿಗೆ ‘ನೆಟ್‌ಫ್ಲಿಕ್ಸ್‌ ’ ಡಿಜಿಟಲ್‌ ತಾಣಕ್ಕೆ ಕನ್ನಡದ ವೆಬ್‌ ಸೀರಿಸ್‌ವೊಂದು ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ಗುರುದತ್‌ ಗಾಣಿಗ ಅದರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆನ್ನುವುದು ವಿಶೇಷ. ಅಂಬರೀಷ್‌ ಅಭಿನಯದ ‘ಅಂಬಿ ನಿಂಗ್‌ ವಯಸ್ಸಾಯ್ತೋ!’ ಚಿತ್ರ ನಿರ್ದೇಶಿಸಿದ್ದು ಇದೇ ಹುಡುಗ.

ಇದು ಕನ್ನಡದ ದೊಡ್ಡ ನಿರ್ಮಾಣದ ಸಂಸ್ಥೆಯಿಂದಲೇ ನಿರ್ಮಾಣವಾಗುತ್ತಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಯಾವುದೇ ಮಾಹಿತಿಗಳು ಅಧಿಕೃತವಾಗಿ ಹೊರ ಬಂದಿಲ್ಲ. ಆದರೆ ನೆಟ್‌ಫ್ಲಿಕ್ಸ್‌ ಡಿಜಿಟಲ್‌ ತಾಣಕ್ಕೆ ತಾವು ವೆಬ್‌ ಸೀರಿಸ್‌ ನಿರ್ಮಾಣ ಮಾಡುತ್ತಿರುವುದು ಸತ್ಯ ಎನ್ನುತ್ತಾರೆ ಗುರುದತ್‌ ಗಾಣಿಗ.

‘ನಿಜ, ಇಂತಹದೊಂದು ಪ್ರಯತ್ನ ನಡೆಯುತ್ತಿರುವುದು ಸತ್ಯ. ಸದ್ಯಕ್ಕೆ ಅದಿನ್ನು ಫೈನಲ್‌ ಆಗಿಲ್ಲ. ನೆಟ್‌ಫ್ಲಿಕ್ಸ್‌ಗೆ ನಾವಿನ್ನು ಪೈಲೆಟ್‌ ಎಪಿಸೋಡ್‌ ನಿರ್ಮಿಸಿ, ಕೊಡಬೇಕಿದೆ. ಆಮೇಲೆ ಅವರಿಂದ ಪ್ರತಿಕ್ರಿಯೆ ಬರಬೇಕಿದೆ. ಆಗಲೇ ಎಲ್ಲವೂ ಫೈನಲ್‌ ಅಂತಾಗುವುದು. ಅಲ್ಲಿ ತನಕ ಯಾವುದು ಕೂಡ ಅಧಿಕೃತ ಎನ್ನುವುದಕ್ಕಾಗದು’ ಎನ್ನುತ್ತಾರೆ ಗುರುದತ್‌.

ಕನ್ನಡದ ದೊಡ್ಡ ನಿರ್ಮಾಣ ಸಂಸ್ಥೆಯೇ ಈ ವೆಬ್‌ ಸೀರೀಸ್‌ ನಿರ್ಮಾಣದ ಜವಾಬ್ದಾರಿ ಹೊತ್ತು ಕೊಂಡಿದೆ. ಅದು ಕೂಡ ಆಮೇಲೆ ಗೊತ್ತಾಗಿದೆ ಎನ್ನುವುದು ಗುರುದತ್‌ ಮಾತು. ಆ ಪ್ರಕಾರ ಹೇಳುವುದಾದರೆ ಸುದೀಪ್‌ ಹೋಮ್‌ ಬ್ಯಾನರ್‌ ಕಡೆಯಿಂದಲೇ ಈ ವೆಬ್‌ ಸೀರೀಸ್‌ ನಿರ್ಮಾಣವಾಗುತ್ತಿರುವ ಸಾಧ್ಯತೆಗಳೇ ಹೆಚ್ಚಿವೆ. ಈ ಕುರಿತು ಮಾತನಾಡಲು ಗುರುದತ್‌ ನಿರಪಾಕರಿಸುತ್ತಾರೆ. ಎಲ್ಲವೂ ಶುಕ್ರವಾರದ ನಂತರವೇ ಗೊತ್ತಾಗಲಿವೆ ಎನ್ನುತ್ತಾರೆ.