ಬೆಳ್ಳಿ ತೆರೆಮೇಲೆ ಬರಲಿದ್ದಾರೆ ಉರಿಗೌಡ ನಂಜೇಗೌಡ: ಒಕ್ಕಲಿಗ ವೀರರ ಬಗ್ಗೆ ಮುನಿರತ್ನ ಸಿನಿಮಾ ನಿರ್ಮಾಣ
ಮಂಡ್ಯದ ಒಕ್ಕಲಿಗ ವೀರರ ಸಿನಿಮಾ ನಿರ್ಮಾಣಕ್ಕೆ ಮುಂದಾದ ಮುನಿರತ್ನ
ಟಿಪ್ಪುವನ್ನು ಕೊಂದಿದ್ದಾರೆನ್ನಲಾದ ಉರಿಗೌಡ- ನಂಜೇಗೌಡರಿಗೆ ಗೌರವಾರ್ಪಣೆ
ರಾಜ್ಯ ಫಿಲಂ ಚೇಂಬರ್‌ನಲ್ಲಿ ಸಿನಿಮಾ ಹೆಸರು ನೋಂದಣಿ ಪೂರ್ಣ
ಬೆಂಗಳೂರು (ಮಾ.16): ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ- ಕಾಂಗ್ರೆಸ್, ಜೆಡಿಎಸ್ ಮಧ್ಯೆ ವಾಗ್ವಾದಕ್ಕೆ ಕಾರಣವಾದ ಹೆಸರುಗಳಾದ "ಉರಿಗೌಡ ಮತ್ತು ದೊಡ್ಡ ನಂಜೇಗೌಡ"ರ ಕುರಿತು ಸಚಿವ ಮುನಿರತ್ನ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಹೌದು, ರಾಜ್ಯ ರಾಜಕಾರಣದಲ್ಲಿ ಪ್ರಸ್ತುತ ಭಾರಿ ಮುನ್ನೆಲೆಯಲ್ಲಿರುವ ಹೆಸರುಗಳು ಎಂದರೆವ ಉರಿಗೌಡ, ನಂಜೇಗೌಡ. ಬಿಜೆಪಿ ನಾಯಕರು ಹಿಂದೂ ವಿರೋಧಿ ಹಾಗೂ ಧರ್ಮಾಂಧನಾಗಿದ್ದ ಟಿಪ್ಪು ಸುಲ್ತಾನ್‌ನನ್ನು ಒಕ್ಕಲಿಗ ವೀರರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರೇ ಕೊಂದು ಹಾಕಿದ್ದಾರೆ. ದೇಶಕ್ಕೆ ಮತ್ತು ಮೈಸೂರು ಸಾಮ್ರಾಜ್ಯವನ್ನು ಉಳಿಸಲು ಇವರ ಪಾತ್ರ ಹಿರಿದಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ವಿಪಕ್ಷಗಳು ಉರಿಗೌಡ, ನಂಜೇಗೌಡ ಟಿಪ್ಪು ಕೊಂದಿದ್ದು ಸುಳ್ಳು ಎಂದು ಹೇಳುತ್ತಿವೆ. ಹಳೆ ಮೈಸೂರು ಪ್ರಾಂತ್ಯಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಸೇರಿ ಇತರೆ ಭಾಗಗಳಲ್ಲಿ ಒಕ್ಕಲಿಗರ ಮತಗಳನ್ನು ಓಲೈಕೆ ಮಾಡಲು ಬಿಜೆಪಿ ಸೃಷ್ಟಿಸಿದ್ದ ಪಾತ್ರಗಳು ಎಂದು ಕಾಂಗ್ರೆಸ್ ಆರೋಪ ಮಾಡುತ್ತಿವೆ.
ಮತಾಂಧ ಟಿಪ್ಪುವನ್ನು ಕೊಂದ ದೊಡ್ಡ ನಂಜೇಗೌಡ, ಉರಿಗೌಡರ ಹೆಸರು ತೆರವುಗೊಳಿಸಿದ್ದು ತಪ್ಪು: ಸಿ.ಟಿ.ರವಿ
ಆಡಳಿತ - ವಿಪಕ್ಷಗಳ ವಾಗ್ವಾದಕ್ಕೆ ಕಾರಣವಾದ ಪಾತ್ರ: ಈಗ ಬಿಜೆಪಿ- ಕಾಂಗ್ರೆಸ್, ಜೆಡಿಎಸ್ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿರುವ ಹೆಸರುಗಳಾದ ಮಂಡ್ಯದ ಉರಿಗೌಡ ಮತ್ತು ನಂಜೇಗೌಡ ಪಾತ್ರಗಳು ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸುಲ್ತಾನನಾಗಿ ಆಡಳಿತ ಮಾಡುತ್ತಿದ್ದ ಟಿಪ್ಪುವನ್ನು ಮಂಡ್ಯದ ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಸಚಿವರೂ ಆಗಿರುವ ಚಿತ್ರ ನಿರ್ಮಾಪಕ ಮುನಿರತ್ನ ಅವರು ಈಗ ‘ಉರಿಗೌಡ ನಂಜೇಗೌಡ’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಪಿಲಂ ಚೇಂಬರ್‌ನಲ್ಲಿ ಹೆಸರು ನೋಂದಣಿ: ಉಡಿಗೌಡ ಮತ್ತು ನಂಜೇಗೌಡ ಸಿನಿಮಾ ನಿರ್ಮಾಣದ ಬಗ್ಗೆ ಕರ್ನಾಟಕ ಫಿಲಂ ಚೇಂಬರ್ನಲ್ಲಿಯೂ ಟೈಟಲ್ ನೊಂದಣಿಯನ್ನೂ ಮಾಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಕುರುಕ್ಷೇತ್ರ ಸಿನಿಮಾವನ್ನು ನಿರ್ಮಿಸುವ ಮೂಲಕ ಹಲವು ನಾಯಕರಿಗೆ ಚಿತ್ರರಂಗ ಹಾಗೂ ರಾಜಕೀಯ ನಂಟಿನ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿತ್ತು. ಈಗ ಕುರುಕ್ಷೇತ್ರದ ಮಾದರಿಯಲ್ಲಿಯೇ ಉರಿಗೌಡ- ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಉರಿಗೌಡ, ನಂಜೇಗೌಡ ಕಾಲ್ಪನಿಕ ಸೃಷ್ಟಿ : ಬಿಜೆಪಿಯಿಂದ ಒಕ್ಕಲಿಗರಿಗೆ ಅವಮಾನ
ರಾಕ್ ಲೈನ್ ವೆಂಕಟೇಶ್ ಅರ್ಪಿಸುವ ಸಿನಿಮಾ: ಮಂಡ್ಯದ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಅವರು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಭೇಟಿ ನೀಡುವ ಮುನ್ನ ಬಿಜೆಪಿಗೆ ಬೆಂಬಲ ನೀಡಿದ್ದರು. ಈಗ ಸುಮಲತಾ ಅವರ ಬಲಗೈ ಬಂಟರಾದ ರಾಕ್ ಲೈನ್ ವೆಂಕಟೇಶ್ ಅರ್ಪಿಸುವ ಉರಿಗೌಡ ನಂಜೇಗೌಡ ಸಿನಿಮಾ ಬೆಳ್ಳಿ ತೆರೆಗೆ ಬರಲಿದೆ. ಇನ್ನು ಮುನಿರತ್ನ ಅವರಿಂದ ಉರಿಗೌಡ ನಂಜೇಗೌಡ ಕಥೆ, ಚಿತ್ರಕಥೆ ಸಿದ್ಧವಾಗಲಿದೆ. ಸಿನಿಮಾ ನಿರ್ಮಾಣವಾಗಿ ಬೆಳ್ಳಿ ತೆರೆಗೆ ಬರುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಅಷ್ಟರೊಳಗೆ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಮುಗಿದು ಹೋಗಬಹುದು. ಆದರೆ, ಈಗ ಮಂಡ್ಯ ರಾಜಕೀಯದಲ್ಲಿ ಉರಿಗೌಡ ನಂಜೇಗೌಡ ಹೆಸರು ಮಾತ್ರ ಭಾರಿ ಪ್ರಮಾಣದ ಸಂಚಲನವನ್ನು ಸೃಷ್ಟಿಮಾಡಿದೆ.