ಬೆಂಗಳೂರಿನ ವಿಜಯ ನಗರ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು. ರಕ್ಷಿತ್ ಶೆಟ್ಟಿ ಆ ದಿನದ ಅತಿಥಿ. ಅವರೇ ಚಿತ್ರದ ಚಿತ್ರೀಕರಣಕ್ಕೆ ಆರಂಭ ಫಲಕ ತೋರಿ ಚಾಲನೆ ನೀಡಿದರು. 

ನಾಥೂರಾಮ್ ಎನ್ನುವ ಹೆಸರು ಭಾರತೀಯ ಚರಿತ್ರೆಯಲ್ಲಿ ಬಹಳಷ್ಟು ವಿವಾದಕ್ಕೆ, ಚರ್ಚೆಗೆ, ಜಿಜ್ಞಾಸೆಗೆ ಒಳಗಾದ ಹೆಸರು. ರಾಷ್ಟ್ರಪಿತ ಗಾಂಧೀಜಿ ಹೆಸರು ಪ್ರಸ್ತಾಪಕ್ಕೆ ಬಂದ ಕಡೆಯೆಲ್ಲಾ ನಾಥೂರಾಮ್ ಗೋಡ್ಸೆ ಹೆಸರು ಗೊತ್ತಿಲ್ಲದೆ ನೆನಪಾಗುತ್ತೆ. ಅದೇ ಹೆಸರಲ್ಲೊಂದು ಸಿನಿಮಾ ಬರುತ್ತಿದೆ ಅಂದಾಗ ಅದು ನಾಥೂರಾಮ್ ಗೋಡ್ಸೆ ಕುರಿತ ಸಿನಿಮಾನಾ ಎನ್ನುವ ಪ್ರಶ್ನೆ ಮೂಡುವುದು ಸಹಜ. 

ಮುಹೂರ್ತ ಮುಗಿಸಿಕೊಂಡು ಮಾಧ್ಯಮದವರ ಮುಂದೆ ಮಾತಿಗೆ ಕುಳಿತ ನಿರ್ದೇಶಕ ವಿನು ಬಳಂಜ, ‘ನಾಥೂರಾಮ್ ನನ್ನ ಚಿತ್ರದ ಕಥಾ ನಾಯಕನ ಹೆಸರು. ಆತ ಒಬ್ಬ ಕಾಲೇಜ್ ಲೆಕ್ಚರರ್. ಹಾಗೆಯೇ ಗಾಂಧೀಜಿಯವರ ಪರಮ ಭಕ್ತ, ಅಭಿಮಾನಿ, ಅನುಯಾಯಿ. ಆತನ ಸುತ್ತಲ ಕತೆಯೇ ಈ ಚಿತ್ರ’ ಎನ್ನುವ ಒನ್‌ಲೈನ್ ಎಳೆಯನ್ನು ಬಿಡಿಸಿಟ್ಟರು. ನಾಥೂರಾಮ್ ಗೋಡ್ಸೆಗೂ, ತಮ್ಮ ಚಿತ್ರದ ಕಥಾ ನಾಯಕ ನಾಥೂರಾಮ್‌ಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. 

‘ಬೆಲ್ ಬಾಟಂ’ ಚಿತ್ರದ ದಿವಾಕರ ಪಾತ್ರಧಾರಿ ರಿಷಬ್ ಶೆಟ್ಟಿ ಗೆಟಪ್ ಇಲ್ಲಿ ಕಂಪ್ಲೀಟ್ ಬದಲಾಗಿತ್ತು. ‘ನಾನಿಲ್ಲಿ ನಾಥೂರಾಮ್. ಆ ಪಾತ್ರದಲ್ಲಿ ನಾನು ಹೇಗೆ ಕಾಣಿಸಿಕೊಳ್ಳಬಹುದು ಎನ್ನುವುದಕ್ಕೆ ಉತ್ಸುಕನಾಗಿದ್ದೇನೆ’ ಎಂದರು. ಸದ್ಯಕ್ಕೆ ಐದು ಹಾಡು ಅಂತಿದ್ದಾರೆ. ಆ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಅಂತ ಅಜನೀಶ್ ಲೋಕನಾಥ್ ಹೇಳಿದರು. ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವ ಮಾಸ್ತಿ, ಚಿತ್ರದ ಕತೆಗೆ ತಕ್ಕಂತೆ ಒಂದಷ್ಟು ಗಟ್ಟಿ ಮಾತುಗಳೇ ಬೇಕೆನಿಸುತ್ತಿದೆ
ಎಂದರು. ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿರುವ ಅರವಿಂದ್ ಕಶ್ಯಪ್, ಮಾತಿಗಿಂತ ಕೃತಿಯೇ ಲೇಸು ಅಂತ ಮೈಕ್ ಮುಟ್ಟಲಿಲ್ಲ. ನಿರ್ಮಾಪಕ ಪ್ರಕಾಶ್, ‘ಇಂತಹದೊಂದು ಕತೆಗಾಗಿ ಕಾಯುತ್ತಿದ್ದೆ. ವಿನು ಬಳಂಜ ಕತೆ ಹೇಳಿದಾಗ ಥ್ರಿಲ್ ಆದೆ. ಆ ಕಾರಣಕ್ಕೆ ನಿರ್ಮಾಣಕ್ಕೆ ಮನಸ್ಸು ಮಾಡಿದೆ’ ಅಂದರು.

ಜನವರಿಯಿಂದ ಚಿತ್ರೀಕರಣ ಶುರು. ಶ್ರೀರಂಗ ಪಟ್ಟಣ, ಬೆಂಗಳೂರು ಹಾಗೂ ಕಾರ್ಕಳ ಸಮೀಪದ ನೆಲ್ಲಿಕಾರ್ ಸುತ್ತಮುತ್ತ ಒಟ್ಟು ೬೦ ದಿನಗಳಲ್ಲಿ ಚಿತ್ರೀಕರಣ. ಚಿತ್ರದಲ್ಲಿ ಶಿವಮಣಿ, ಅಚ್ಯುತ್ ಕುಮಾರ್, ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಶಿವಮಣಿ ಹೇಳುವ ಪ್ರಕಾರ ಇದೊಂದು ಮೈಂಡ್ ಬ್ಲೋಯಿಂಗ್ ಕತೆ.