ವಿಜಯ ರಾಘವೇಂದ್ರ ಇದೇ ಮೊದಲು ಸಿಕ್ಸ್‌ಪ್ಯಾಕ್‌ ಮಾಡಲು ಮುಂದಾಗಿದ್ದಾರೆ. 22 ಕೆಜಿ ತೂಕ ಇಳಿಸುವ ಸಾಹಸಕ್ಕೆ ಕೈ ಹಾಕಿದ್ದು, ನಿತ್ಯವೂ ಈಗ ಜಿಮ್‌ನಲ್ಲಿ ಎರಡು ತಾಸು ವರ್ಕೌಟ್‌ ಮಾಡುತ್ತಿದ್ದಾರೆ. ಈಗಾಗಲೇ 8 ಕೆಜಿ ತೂಕ ಇಳಿಸಿದ್ದಾರೆ.

ದಿನಕ್ಕೆರಡು ಬಾರಿ ವರ್ಕೌಟ್‌ ಮಾಡಿ ದೇಹ ಹುರಿಗೊಳಿಸುತ್ತಿದ್ದಾರೆ. ಇದೆಲ್ಲಕ್ಕೂ ಕಾರಣ ‘ಮಾಲ್ಗುಡಿ ಡೇಸ್‌’ ಸಿನಿಮಾ.

ಕಿಶೋರ್‌ ಮೂಡಬಿದ್ರೆ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಹೆಸರಿನ ಚಿತ್ರಕ್ಕೆ ವಿಜಯ್‌ ರಾಘವೇಂದ್ರ ನಾಯಕ. ಅದರ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನೇನು ಎರಡನೇ ಹಂತದ ಚಿತ್ರೀಕರಣ ಆರಂಭವಾಗಬೇಕಿದೆ.

‘ನನ್ನ ಸಿನಿಬದುಕಿನಲ್ಲಿ ಇದೊಂದು ವಿಶೇಷ ಪ್ರಯತ್ನ. ಚಿತ್ರದಲ್ಲಿನ ಪಾತ್ರಕ್ಕೆ ನಾನು ಸಣ್ಣವನಾಗಬೇಕಿದೆ ಅಂತ ನಿರ್ದೇಶಕರು ಸೂಚನೆ ಕೊಟ್ಟರು. ಆ ಪಾತ್ರಕ್ಕೆ ಅದು ಅಗತ್ಯವೂ ಇತ್ತು. ಹಾಗಾಗಿ ವರ್ಕೌಟ್‌ ಶುರು ಮಾಡಿದ್ದೇನೆ. ಆ ಪಾತ್ರಕ್ಕೆ ಕನಿಷ್ಟ22 ಕೆ.ಜಿ ತೂಕ ಇಳಿಸಿಕೊಳ್ಳಬೇಕು.

ದಿನಕ್ಕೆರಡು ಬಾರಿ ಅದರಲ್ಲೂ ಹೆವಿ ವರ್ಕೌಟ್‌ ಮಾಡುವುದು ಅಂದಾಜಿದಷ್ಟುಸುಲಭವಲ್ಲ. ಪಾತ್ರ ಚೆನ್ನಾಗಿದೆ. ಈ ಸಿನಿಮಾ ಗೆಲುವು ತಂದುಕೊಡುವ ವಿಶ್ವಾಸವಿದೆ. ಸಿನಿಮಾದ ಕತೆ, ಚಿತ್ರಕತೆ ನಿಜವಾಗಿಯೂ ಭಿನ್ನವಾಗಿದೆ. ಹಾಗಾಗಿ ಈ ಸಿನಿಮಾಗೋಸ್ಕರ ಅರ್ಧ ವರ್ಷದಿಂದ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೆ ಸಂಪೂರ್ಣವಾಗಿ ಇದರಲ್ಲೇ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ವಿಜಯ ರಾಘವೇಂದ್ರ.

ಇದು ನನ್ನ ನಿರ್ದೇಶನದ ಮೊದಲ ಕನ್ನಡ ಸಿನಿಮಾ. ಅತ್ಯಂತ ಎಚ್ಚರಿಕೆಯಿಂದ ಹಾಗೂ ಪ್ರೀತಿಯಿಂದ ನಿರ್ದೇಶಿಸುತ್ತಿದ್ದೇನೆ. ಇಲ್ಲಿ ವಿಜಯ ರಾಘವೇಂದ್ರ ಅವರ ಪಾತ್ರ ತುಂಬಾ ವಿಶೇಷವಾದದ್ದು. ಹಾಗಾಗಿಯೇ ಆ ಪಾತ್ರದ ಅಗತ್ಯಕ್ಕೆ ತಕ್ಕಂತೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ಬದ್ಧತೆ ಖುಷಿ ಕೊಟ್ಟಿದೆ. ಅವರ ಜತೆಗೆ ಕೆಲಸ ಮಾಡುವುದೇ ಒಂದು ಸೌಭಾಗ್ಯ.

ಕಿಶೋರ್‌ ಮೂಡಬಿದ್ರೆ, ನಿರ್ದೇಶಕ