'ಅರ್ಜುನ್ ರೆಡ್ಡಿ' ಚಿತ್ರದ ರೆಬೆಲ್ ಬಾಯ್ ವಿಜಯ್ ದೇವರಕೊಂಡ ಒಂದಾದ ನಂತರ ಮತ್ತೊಂದು ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಇದೀಗ ಫೋರ್ಬ್ಸ್ ಸೆಲೆಬ್ರಿಟಿ 100ರ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದಿದ್ದಾರೆ. ಕೈ ತುಂಬಿರುವ ಈ ದಿನದಲ್ಲಿ ಆ ನೋವಿನ ದಿನಗಳನ್ನು ಅವರು ನೆನಪಿಸಿಕೊಂಡಿದ್ದು ಹೀಗೆ....

'ಅರ್ಜುನ್ ರೆಡ್ಡಿ', 'ಗೀತಾ ಗೋವಿಂದಂ'ಗಳಂತಹ ಹಿಟ್ ಚಿತ್ರಗಳ ಮೂಲಕವೇ ಹುಡುಗಿಯರ ಮೊಬೈಲ್ ವಾಲ್ ಪೇಪರ್ ಆದವರು ಲವ್ಲಿ ಬಾಯ್ ವಿಜಯ್ ದೇವರಕೊಂಡ. ತಮ್ಮ ಆಂಗಿಕ ಭಾಷೆ, ನಟನೆಯೊಂದಿಗೆ ಹ್ಯಾಂಡ್ಸಮ್ ಲುಕ್‌ನಿಂದಲೇ ಚಿತ್ರ ರಸಿಕರ ಮನ ಗೆದ್ದ ನಟ ಇವರು. ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಇವರು ತಮ್ಮ ಹಳೆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಾಮರ್ಸ್ ಪದವಿ ಪಡೆಯುತ್ತಿದ್ದಾಗ ದೇವರಕೊಂಡ ಅವರಿಗೆ ಓದಿಗಿಂತ ನಾಟಕ-ಸಿನಿಮಾ ಕಡೆಗೇ ಹುಚ್ಚು ಹೆಚ್ಚಿತ್ತಂತೆ. ಎಲ್ಲ ಯುವಕರಂತೆ ಇವರೂ ಸಿನಿ ನಟನಾಗಬೇಕೆಂಬ ಕನಸು ಕಂಡವರು. ಆದರೆ, ಗಾಡ್ ಫಾದರ್ ಅಂತ ಯಾರೂ ಇರಲಿಲ್ಲ. ಅಲ್ಲದೇ ಹೇಳಿಕೊಳ್ಳುವಂಥ ಆರ್ಥಿಕ ಪರಿಸ್ಥಿತಿಯೂ ಅವರದ್ದಾಗಿರಲಿಲ್ಲ.

‘ನಾನು 25 ವರ್ಷದವನಾಗಿದ್ದಾಗ ನನ್ನ ಆಂಧ್ರ ಬ್ಯಾಂಕ್‌ನಲ್ಲಿದ್ದ ಅಕೌಂಟ್‌ನಲ್ಲಿ 500 ರೂ. ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳುವುದೂ ಕಷ್ಟವಾಗಿತ್ತು. ಆಗ ನನ್ನ ತಂದೆ ಹೇಳುತ್ತಿದ್ದರು 30 ವರ್ಷ ಆಗುವಷ್ಟರಲ್ಲಿ ಮೊದಲು ಸೆಟಲ್ ಆಗು. ನಿನ್ನ ಪೋಷಕರು ಆರೋಗ್ಯವಾಗಿದ್ದಾಗ ನೀನು ಯಂಗ್ ಇದ್ದಾಗ ಯಶಸ್ಸು ಕಾಣಬೇಕು... ’ ಎಂದು ಹೇಳುತ್ತಲೇ ಇದ್ದರು. ಈಗ ನಾಲ್ಕು ವರ್ಷಗಳು ಕಳೆದಿವೆ. ನಾನೀಗ ಫೋರ್ಬ್ಸ್ ಸೆಲೆಬ್ರಿಟಿ 100ರಲ್ಲಿ 30ನೇ ಸ್ಥಾನ ಪಡೆದಿದ್ದೇನೆ. 30 ವರ್ಷದೊಳಗಿರುವ ಸಾಧಕರಲ್ಲಿ ನನ್ನ ಹೆಸರಿದೆ,' ಎಂದು ಫೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

ತಂದೆಯ ಕನಸು ಈಡೇರಿಸುವುದಕ್ಕಿಂತ ಸಂತೋಷ ಮಕ್ಕಳಿಗೆ ಬೇರೆ ಏನಿದೆ? ನಿಜವಾದ ಸಾಧನೆ ಹಾಗೂ ಸಂತೋಷ ಇದಲ್ಲವೇ?

Scroll to load tweet…