Veteran Actress Saritha: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್‌ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು.
ಬಹುಭಾಷಾ ನಟಿ ಸರಿತಾ ಅವರ ಸಿನಿ ಪಯಣ ಗ್ಲಾಮರ್‌ಗೆ ಮೀರಿದ್ದು. ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರಂತಹ ದಿಗ್ಗಜರಿಗೆ ಅವರ ಅಭಿನಯವೇ ಪ್ರಮುಖ ಅಸ್ತ್ರವಾಗಿತ್ತು. ಬಾಲ್ಯವಿವಾಹದಿಂದ ಹಿಡಿದು ವಿಚ್ಛೇದನದವರೆಗೆ ವೈಯಕ್ತಿಕ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಸರಿತಾ, ನಟಿಯಾಗಿ ಮಾತ್ರವಲ್ಲದೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ತಮ್ಮ ಅಪ್ರತಿಮ ಪ್ರತಿಭೆ ಮೆರೆದಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್‌ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು. ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅವರು, ವೈಯಕ್ತಿಕ ಜೀವನದಲ್ಲಿ ಮಾತ್ರ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.
12-13ರ ವಯಸ್ಸಿನಲ್ಲೇ ಬಾಲ್ಯವಿವಾಹ!
ಸರಿತಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ, ಅಂದರೆ 12-13ನೇ ವಯಸ್ಸಿನಲ್ಲಿ ಬಾಲ್ಯವಿವಾಹ ನಡೆದಿತ್ತು ಎನ್ನಲಾಗಿದೆ. ಆ ಕಾಲದ ಪರಿಸ್ಥಿತಿಯಲ್ಲಿ ಇದು ಸಾಮಾನ್ಯವಾಗಿದ್ದರೂ, ಸರಿತಾ ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿ ಆ ವಿವಾಹವನ್ನು ರದ್ದುಗೊಳಿಸಿಕೊಂಡರು. ನಂತರ ಚಿತ್ರರಂಗಕ್ಕೆ ಕಾಲಿಡುವ ಆಸೆಯಿಂದ ಮದ್ರಾಸ್‌ಗೆ ಬಂದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಕೆ. ಬಾಲಚಂದರ್ ತಮ್ಮ ‘ಮರೋ ಚರಿತ್ರ’ ಸಿನಿಮಾಗಾಗಿ ನಾಯಕಿಯ ಹುಡುಕಾಟದಲ್ಲಿದ್ದರು.
ಅವರು ನಾಯಕಿಯ ಆಯ್ಕೆಯಲ್ಲಿ ಸೌಂದರ್ಯ, ಎತ್ತರ, ಮೈಬಣ್ಣಕ್ಕಿಂತ ಪಾತ್ರಕ್ಕೆ ತಕ್ಕ ಅಭಿನಯ ಸಾಮರ್ಥ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಆ ಸಂದರ್ಭದಲ್ಲಿ ದೇಹದ ತೂಕ ಹೆಚ್ಚಿದ್ದು, ಎತ್ತರ ಕಡಿಮೆ ಇದ್ದ ಸರಿತಾ ಅವರನ್ನು ಬರೋಬ್ಬರಿ 162 ಮಂದಿಯ ಆಡಿಷನ್‌ನಿಂದ ಆಯ್ಕೆ ಮಾಡಲಾಯಿತು. ಕಮಲ್ ಹಾಸನ್ ಜೊತೆ ‘ಮರೋ ಚರಿತ್ರ’ ಸಿನಿಮಾದಲ್ಲಿ ನಟಿಸಿದ ಸರಿತಾ ಅವರ ಅಭಿನಯ ತೆಲುಗು ಮತ್ತು ತಮಿಳು ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಬಾಲಚಂದರ್ ಜೊತೆ ಬರೋಬ್ಬರಿ 23 ಸಿನಿಮಾಗಳು!
‘ಮರೋ ಚರಿತ್ರ’ ಯಶಸ್ಸಿನ ಬಳಿಕ ಸರಿತಾ ಅಲ್ಲಿಗೇ ನಿಲ್ಲಲಿಲ್ಲ. ನಿರ್ದೇಶಕ ಕೆ. ಬಾಲಚಂದರ್ ಅವರೊಂದಿಗೆ ಬರೋಬ್ಬರಿ 23 ಸಿನಿಮಾಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು. ಒಬ್ಬ ನಿರ್ದೇಶಕ ಒಂದೇ ನಟಿಯೊಂದಿಗೆ ಇಷ್ಟೊಂದು ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ಅಪರೂಪ. ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡಿದ್ದೂ ಇದೆ. ಕ್ಯಾನ್ಸರ್ ರೋಗಿಯ ಪಾತ್ರ, ಗ್ರಾಮೀಣ ಮಹಿಳೆಯ ಪಾತ್ರ, ‘ತಣ್ಣೀರ್ ತಣ್ಣೀರ್’ ಸಿನಿಮಾದಲ್ಲಿ ಹಳ್ಳಿಯ ಮಹಿಳೆಯ ಪಾತ್ರ-ಹೀಗೆ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಚಿರಂಜೀವಿ ಜೊತೆಗಿನ ‘47 ಡೇಸ್’, ‘ಕಲಿಯುಗ ಪಾಂಡವರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸರಿತಾ, ಮಹೇಶ್ ಬಾಬು ಅಭಿನಯದ ‘ಅರ್ಜುನ್’ ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲೂ ಗಮನ ಸೆಳೆದಿದ್ದರು. ಈ ಅಭಿನಯಕ್ಕಾಗಿ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿಯೂ ದೊರೆತಿತ್ತು. ಡಾ. ರಾಜ್‌ಕುಮಾರ್, ಶ್ರೀನಾಥ್, ವಿಷ್ಣುವರ್ಧನ್, ಶ್ರೀಧರ್, ಶಿವಾಜಿ ಗಣೇಶನ್ ಸೇರಿದಂತೆ ವಿವಿಧ ಭಾಷೆಗಳ ಹಲವು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿರುವ ಸರಿತಾ, ತಮ್ಮ ನೈಜ ಹಾಗೂ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಇನ್ನು ಕನ್ನಡದಲ್ಲಿ ‘ಚಲಿಸುವ ಮೋಡಗಳು’, ‘ಹೊಸ ಬೆಳಕು’, ‘ಕೆರಳಿದ ಸಿಂಹ’ ಮುಂತಾದ ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿ ಪ್ರಶಂಸೆ ಪಡೆದರು. ಶ್ರೀನಾಥ್ ಜೊತೆ ಎರಡು ರೇಖೆಗಳಲ್ಲಿ ನಟಿಸಿ ಜನಮನ ಗೆದ್ದರು. ಶ್ರೀಧರ್ ಜೊತೆ ಬ್ರಹ್ಮಗಂಟು ಸಿನಿಮಾದ ಮುಗ್ಧ ಹುಡುಗಿ ಪಾತ್ರದಲ್ಲಿ ಮಿಂಚಿದ್ದರು.
ನಟಿಯಾಗಿ ಮಾತ್ರವಲ್ಲ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಮಿಂಚು!
ಸರಿತಾ ಬಹುಮುಖ ಪ್ರತಿಭೆಯ ಕಲಾವಿದೆ. ನಟನೆಯ ಜೊತೆಗೆ ಡಬ್ಬಿಂಗ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಸುಹಾಸಿನಿ, ವಿಜಯಶಾಂತಿ, ರಮ್ಯಕೃಷ್ಣ, ಶ್ರೀದೇವಿ, ಭಾನುಪ್ರಿಯಾ, ರಾಧಾ ಸೇರಿದಂತೆ ಹಲವು ಖ್ಯಾತ ನಾಯಕಿಯರಿಗೆ ಸಿನಿಮಾಗಳಲ್ಲಿ ಸರಿತಾ ಧ್ವನಿ ನೀಡಿದ್ದಾರೆ. ವಿಶೇಷವಾಗಿ ನಟಿ ವಿಜಯಶಾಂತಿ ಅವರ ಪಾತ್ರಗಳಿಗೆ ಸರಿತಾ ಅವರ ಧ್ವನಿ ಮತ್ತಷ್ಟು ಶಕ್ತಿ ನೀಡಿತ್ತು ಎನ್ನಲಾಗುತ್ತದೆ. ‘ಅಮ್ಮೋರು’, ‘ಅಂತಃಪುರಂ’, ‘ಮಾವಿಚಿಗುರು’, ‘ಮಾ ಆಯನ ಬಂಗಾರಂ’ ಸಿನಿಮಾಗಳಿಗೆ ಅತ್ಯುತ್ತಮ ಡಬ್ಬಿಂಗ್ ಆರ್ಟಿಸ್ಟ್ ಆಗಿ ಸರಿತಾ ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರ ಜೊತೆಗೆ ಕಲೈಮಾಮಣಿ ಹಾಗೂ ಸೈಮಾ ಪ್ರಶಸ್ತಿಗಳ ಗೌರವವೂ ಅವರ ಪ್ರತಿಭೆಗೆ ಸಂದಿದೆ.
ಮದುವೆ ಜೀವನದಲ್ಲಿ ಮಾತ್ರ ಎದುರಾದ ಕಹಿ ಅನುಭವ?
ಮಲಯಾಳಂ ನಟ ಮುಖೇಶ್ ಅವರನ್ನು ಸರಿತಾ ವಿವಾಹವಾಗಿದ್ದರು. ಆದರೆ ಈ ಮದುವೆ ತಮ್ಮ ಜೀವನದ ತಪ್ಪು ನಿರ್ಧಾರವಾಗಿತ್ತು ಎಂದು ಸರಿತಾ ಹೇಳಿಕೊಂಡಿರುವುದಾಗಿ ವರದಿಗಳಿವೆ. ತಾವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮುಖೇಶ್ ತಮ್ಮನ್ನು ಕಾಲಿನಿಂದ ಒದ್ದಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಘಟನೆಯ ಬಳಿಕ ಮಕ್ಕಳೊಂದಿಗೆ ದುಬೈಗೆ ತೆರಳಿ ಅಲ್ಲಿಯೇ ನೆಲೆಸಿದರು ಎನ್ನಲಾಗಿದೆ.
ಇನ್ನು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದ ಸರಿತಾ, ಅವರನ್ನು ಉತ್ತಮವಾಗಿ ಓದಿಸಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುವಂತೆ ಮಾಡಿದ್ದಾರೆ. ಆದರೆ ವಿಚ್ಛೇದನದ ವಿಚಾರದಲ್ಲಿಯೂ ಅವರು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಬಾಲ್ಯದಲ್ಲೇ ಎದುರಾದ ಕಹಿ ಅನುಭವ, ನಂತರ ಚಿತ್ರರಂಗದಲ್ಲಿ ಸಾಧಿಸಿದ ಅಪಾರ ಯಶಸ್ಸು, ನಟನೆಯ ಜೊತೆಗೆ ಡಬ್ಬಿಂಗ್ ಕ್ಷೇತ್ರದಲ್ಲೂ ಮೂಡಿಸಿದ ಛಾಪು-ಸರಿತಾ ಅವರ ಬದುಕು ನಿಜಕ್ಕೂ ಹೋರಾಟ ಮತ್ತು ಸಾಧನೆಯ ಅಪರೂಪದ ಕಥೆಯಾಗಿದೆ.


