Asianet Suvarna News Asianet Suvarna News

ಅಣ್ಣಾವ್ರಿಗೆ ಹುಟ್ಟುಹಬ್ಬದ ಸಂಭ್ರಮ; ರಾಜ್ ಸಿನಿಮಾ, ಹಾಡಿನ ವಿಶೇಷತೆಗಳಿವು

ಕನ್ನಡ ಚಲನಚಿತ್ರ ಗೀತೆಗಳ ದೊಡ್ಡ ಲೈಬ್ರೆರಿಯತ್ತ ಕ್ಷಣಕಾಲ ದೃಷ್ಟಿ ಹರಿಸಿದರೂ ತಪ್ಪಿಸಿಕೊಳ್ಳದ ಹೆಸರು ಡಾ| ರಾಜ್‌ಕುಮಾರ್ ಅವರದು. ಆಶ್ಚರ್ಯದ ಮತ್ತು ಗೌರವ ಹುಟ್ಟಿಸುವ ವಿಷಯವೆಂದರೆ ಇಷ್ಟು ಮುಖ್ಯ ಗಾಯಕರಾಗಿ ಆ ಲೈಬ್ರೆರಿಯಲ್ಲಿ ನೆಲೆಸಿರುವ ರಾಜ್ ಅಲ್ಲಿ ಮುಖ್ಯ ಸ್ಥಾನ ಪಡೆದದ್ದು ತಮ್ಮ 45 ನೆಯ ವರ್ಷ ಪ್ರಾಯದಷ್ಟು ತಡವಾಗಿ ಅನ್ನುವುದು. ಅಲ್ಲಿಯವರೆಗೂ ರಾಜ್ ಅವರ ಪ್ರತಿಧ್ವನಿಯೋ  ಎನ್ನುವಂತೆ ಹಾಡುತ್ತಿದ್ದ ಜೇನ್‌ಗೊಡದಂತಹ ಮಧುರ  ಧ್ವನಿಯ ಪಿ.ಬಿ. ಶ್ರೀನಿವಾಸ ಅವರು ಅನಾರೋಗ್ಯದ ಕಾರಣ ಸ್ಟುಡಿಯೋಗೆ ಬರಲಾಗದೆ, ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್, ರಾಜ್ ಅವರನ್ನೇ ಆ ‘ಎಮ್ಮೆಹಾಡ’ನ್ನು ಹಾಡಲು ಹುರಿದುಂಬಿಸಿದ ಆ ಮಾಂತ್ರಿಕ ಕ್ಷಣ ನಷ್ಟದ್ದೋ ಲಾಭದ್ದೋ ಲೆಕ್ಕ ಹಾಕುವುದು ಸುಲಭವಲ್ಲ.

Veteran Actor Dr. Raj Kumar Birthday Special

ಕನ್ನಡ ಚಲನಚಿತ್ರ ಗೀತೆಗಳ ದೊಡ್ಡ ಲೈಬ್ರೆರಿಯತ್ತ ಕ್ಷಣಕಾಲ ದೃಷ್ಟಿ ಹರಿಸಿದರೂ ತಪ್ಪಿಸಿಕೊಳ್ಳದ ಹೆಸರು ಡಾ| ರಾಜ್‌ಕುಮಾರ್ ಅವರದು. ಆಶ್ಚರ್ಯದ ಮತ್ತು ಗೌರವ ಹುಟ್ಟಿಸುವ ವಿಷಯವೆಂದರೆ ಇಷ್ಟು ಮುಖ್ಯ ಗಾಯಕರಾಗಿ ಆ ಲೈಬ್ರೆರಿಯಲ್ಲಿ ನೆಲೆಸಿರುವ ರಾಜ್ ಅಲ್ಲಿ ಮುಖ್ಯ ಸ್ಥಾನ ಪಡೆದದ್ದು ತಮ್ಮ 45 ನೆಯ ವರ್ಷ ಪ್ರಾಯದಷ್ಟು ತಡವಾಗಿ ಅನ್ನುವುದು. ಅಲ್ಲಿಯವರೆಗೂ ರಾಜ್ ಅವರ ಪ್ರತಿಧ್ವನಿಯೋ  ಎನ್ನುವಂತೆ ಹಾಡುತ್ತಿದ್ದ ಜೇನ್‌ಗೊಡದಂತಹ ಮಧುರ  ಧ್ವನಿಯ ಪಿ.ಬಿ. ಶ್ರೀನಿವಾಸ ಅವರು ಅನಾರೋಗ್ಯದ ಕಾರಣ ಸ್ಟುಡಿಯೋಗೆ ಬರಲಾಗದೆ, ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್, ರಾಜ್ ಅವರನ್ನೇ ಆ ‘ಎಮ್ಮೆಹಾಡ’ನ್ನು ಹಾಡಲು ಹುರಿದುಂಬಿಸಿದ ಆ ಮಾಂತ್ರಿಕ ಕ್ಷಣ ನಷ್ಟದ್ದೋ ಲಾಭದ್ದೋ ಲೆಕ್ಕ ಹಾಕುವುದು ಸುಲಭವಲ್ಲ.

ಆ ಮುಂಚೆಯೂ ರಾಜ್ ಅವರು  ‘ಓಹಿಲೇಶ್ವರ’ (1952) ಮತ್ತು ಮಹಿಷಾಸುರ ಮರ್ದಿನಿ (1959) ಎಂಬ ಚಿತ್ರಗಳಲ್ಲಿ ಎರಡು ಗೀತೆಗಳನ್ನು ಹಾಡಿದ್ದನ್ನು ಕನ್ನಡ ಚಲನಚಿತ್ರರಂಗದ ಇತಿಹಾಸ ದಾಖಲಿಸಿದೆಯಾದರೂ, ‘ಸಂಪತ್ತಿಗೆ ಸವಾಲ್’ (1974) ಚಿತ್ರದ ಗೀತೆಗಳ ಆ  ಧ್ವನಿಮುದ್ರಣ ಒಂದು ಅತಿ ಮುಖ್ಯ ಅಧ್ಯಾಯವನ್ನೇ ಉದ್ಘಾಟಿಸಿತು. ಕನ್ನಡ ಗಾನರಸಿಕರ ಹೃದಯಗಳಲ್ಲಿ ತಮಗಾಗಿ ಶಾಶ್ವತ ಸ್ಥಾನ ಗಳಿಸಿಕೊಂಡಿರುವ ರಾಜ್ ಹಾಡಿರುವ ಗೀತೆಗಳ ಸಂಖ್ಯೆಯ ಹಾಗೆಯೇ ಆ ಗೀತೆಗಳ ವೈವಿಧ್ಯ-ವಿಪುಲತೆಗಳೂ ಬೆರಗು ಹುಟ್ಟಿಸುತ್ತವೆ. ಚಲನಚಿತ್ರಗೀತೆಗಳು, ರಂಗಗೀತೆಗಳು, ಭಕ್ತಿಗೀತೆಗಳು, ಭಾವಗೀತೆಗಳು, ಜಾನಪದಗೀತೆಗಳು - ಹೀಗೆ  ಅನೇಕ ಪ್ರಕಾರಗಳಿಗೆ ರಾಜ್‌ಕುಮಾರ್ ತಮ್ಮ ಸಿರಿಕಂಠವನ್ನು ನೀಡಿದ್ದಾರೆ. ಚಲನಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ರಾಜ್ ಅವರು ನಿರ್ವಹಿಸಿದ ಜವಾಬ್ದಾರಿ  ಬಹಳ ದೊಡ್ಡದು. ರಾಜ್ ಅವರ ಹಾಡುಗಾರಿಕೆಯನ್ನು ಗಮನಿಸಿದಾಗ ಮೊದಲಿಗೇ ಎದ್ದು ಕಾಣುವುದು ಅವರಿಗೆ ಒದಗಿ ಬರುವ ರಂಗಭೂಮಿಯ ಅನುಭವದ ಬೆಂಬಲ. ಪ್ರಸಿದ್ಧವಾಗಿರುವ ಅವರ ಅನೇಕ ಗೀತೆಗಳು, ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಪ್ರಕಾರಗಳ ರಾಗ ಸಂಗೀತವನ್ನು ತಮ್ಮ ಬೆನ್ನಿಗೆ  ಇಟ್ಟುಕೊಂಡಿರುವುದನ್ನು ಸುಲಭವಾಗಿ ನೋಡಬಹುದು. ಬಗೆಬಗೆಯ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸುತ್ತಿದ್ದ ರಾಜ್ ಅವರ ಸಲಿಲ ಗುಣವನ್ನು ಅವರು ಹಾಡಿರುವ ಹಾಡುಗಳಲ್ಲಿಯೂ ಕಾಣಬಹುದು. ಲವಲವಿಕೆಯ ಗೆಲುವಿನ ಧಾಟಿಯ ಗೀತೆಗಳಾದ ‘ಎಲ್ಲೆಲ್ಲಿ ನೋಡಲೀ...’, ‘ಬಾನಿಗೊಂದು ಎಲ್ಲೆ ಎಲ್ಲಿದೆ?’, ಅಪ್ಪಟ ರಮ್ಯಗೀತೆಗಳಾದ ‘ಈ ಸಮಯ ಶೃಂಗಾರಮಯ’, ‘ಚಿನ್ನದ ಮಲ್ಲಿಗೆ ಹೂವೆ’, ‘ಬೆಳದಿಂಗಳಾಗಿ ಬಾ’, ಲೇವಡಿಯ ಧಾಟಿಯ ‘ಯಾರೇ ಕೂಗಾಡಲಿ’, ‘ಲೇ ಲೇ ಅಪ್ಪನ ಮಗಳೆ’, ಮುಗ್ಧ ಸೊಗಸಿನ ‘ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ...’, ‘ಅಳಬ್ಯಾಡ್ ಕಣೇ ಸುಮ್ಕಿರೇ’, ಹುಡುಹುಡುಗಾಟದ ‘ಆನೆಯ ಮೇಲೆ ಅಂಬಾರಿ ಕಂಡೆ’, ‘ಏನು ಮಾಯವೋ’, ಎಚ್ಚರಿಕೆಯ ಮೃದುಮಾತುಗಳಲ್ಲಿಯೇ ಮನಸ್ಸನ್ನು ತೊಳೆಯುವ ‘ಮಾನವನಾಗುವೆಯಾ? ಇಲ್ಲ, ದಾನವನಾಗುವೆಯಾ?’,  ಅಪ್ಪಟ ದಾರ್ಶನಿಕ ಸ್ಪರ್ಶದ ‘ಬೊಂಬೆಯಾಟವಯ್ಯಾ’, ‘ನಾದಮಯ’, ಶೋಕವನ್ನು  ದಟ್ಟವಾಗಿ ಊಡುವ ‘ಇದು ಯಾರು ಬರೆದ ಕಥೆಯೋ’, ‘ಕಣ್ಣೀರ ಧಾರೆ ಇದೇಕೆ?’ - ಹೀಗೆ ಬೆಳೆಯುವ ಪಟ್ಟಿ ಉದ್ದನೆಯದು ಮತ್ತು ತುಂಬ ವೈವಿಧ್ಯಪೂರ್ಣವಾದುದು. ತಮ್ಮ ಮಾತುಗಳಲ್ಲಿ, ಆಯಾ ಚಿತ್ರಗಳ ಸಂದರ್ಭದಲ್ಲಿ ಬೇರೆ ಬೇರೆ ಭಾವಗಳನ್ನು ತೊಟ್ಟಿರುವ ಈ ಗೀತೆಗಳಿಗೆ, ಆ ಸಂದರ್ಭಗಳ ಹೊರತಾಗಿಯೂ ಸ್ವತಂತ್ರವಾಗಿ ನಿಲ್ಲುವ ವ್ಯಕ್ತಿತ್ವಗಳಿವೆ; ಆದ್ದರಿಂದಲೇ ಈ ಹಾಡುಗಳು ಇಂದಿಗೂ ನಮ್ಮ ಗುನುಗಿಗೆ ಮರಳುತ್ತಿವೆ.

ಪೌರಾಣಿಕ, ಐತಿಹಾಸಿಕ ಭೂಮಿಕೆಗಳಲ್ಲಿದ್ದ ಚಿತ್ರಗಳಲ್ಲಿ ಅವರು ಹಾಡಿದ  ಗೀತೆಗಳು ಹೆಚ್ಚಾಗಿ ಸಹಜವಾಗಿಯೇ ಶಾಸ್ತ್ರೀಯ ಮಟ್ಟುಗಳಲ್ಲಿ ಇರುತ್ತಿದ್ದವು. ಈ ನಿರೀಕ್ಷೆಗೆ ವೈದೃಶ್ಯವೆಂಬಂತೆ ಅಂಥ ಚಿತ್ರಗಳಲ್ಲಿ ಕಟ್ಟಾ ಶಾಸ್ತ್ರೀಯ ನೆಲೆಯವು ಎನ್ನಲಾಗದ ಗೀತೆಗಳಿದ್ದ ಹಾಗೆಯೂ, ಕೌಟುಂಬಿಕ-ವರ್ತಮಾನದ ಸನ್ನಿವೇಶಗಳಲ್ಲಿಯೂ ಅವರು ಕುತೂಹಲಕಾರಿಯಾಗಿ ಶಾಸ್ತ್ರೀಯ ಸಂಗೀತದ  ನೆಲೆಗಟ್ಟನ್ನು ಆಧರಿಸಿ ರಾಜ್ ಹಾಡಿದ ಹಲವು ಉದಾಹರಣೆಗಳಿವೆ. ಅಪ್ಪಟ ಡಿಷುಂ-ಡಿಷುಂ ಹಾಡಾದ ‘ಬಿಸಿ ಬಿಸಿ ಕಜ್ಜಾಯ’ದ (ಚಿತ್ರ: ಹಾವಿನ ಹೆಡೆ) ಸಂಯೋಜನೆಗೆ ಖಾಸಾ ಕರ್ನಾಟಕ ಸಂಗೀತ ರಾಗ ‘ಅಠಾಣಾ’ದ ನೆರವಿದೆ ಎನ್ನುವುದು ಹಾಗೂ ಅಲ್ಲಿ ಚುರುಕಾದ ಲಯವ್ಯತ್ಯಾಸದ ಪ್ರಯೋಗಗಳಿವೆ ಎನ್ನುವುದು ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಮತ್ತು ಗಾಯಕ ರಾಜ್ ಅವರ ಇಬ್ಬರ ಪ್ರತಿಭೆಗೂ ಸಲ್ಲುವ ಹಿರಿಮೆ. ಹೀಗೆಯೇ ‘ಸತ್ಯಭಾಮೆ, ಸತ್ಯಭಾಮೆ’ (ಚಿತ್ರ: ರವಿಚಂದ್ರ) ಒಂದು ಅಪೂರ್ವ ಸಂಯೋಜನೆ. ಅಲ್ಲಿರುವ ಹಾರ್ಮೋನಿಯಮ್ ಮತ್ತು ಸಿತಾರ್ ವಾದ್ಯಗಳ  ಮತ್ತು ಖಮಾಸ್ ರಾಗದ ಬಳಕೆ ಹಿಂದೂಸ್ತಾನಿ ಲಘುಸಂಗೀತ, ಖವಾಲಿ ಸಂಗೀತಗಳ ಸ್ಫೂರ್ತಿಯನ್ನು ತೋರಿಸಿದರೆ, ಸಾಹಿತ್ಯದ ಉಚ್ಚಾರ ಮತ್ತು ಪ್ರಯೋಗಿಸುವ  ಚುರುಕಾದ ಬಿಕಾರ್‌ಗಳು ಮತ್ತು ಲಯಪ್ರಯೋಗಗಳು ಕರ್ನಾಟಕ ಸಂಗೀತದ ನೆಲೆಯವು. ಸಂಗೀತ ನಿರ್ದೇಶಕ ಉಪೇಂದ್ರ ಕುಮಾರರ ಕಲ್ಪನೆಯನ್ನು ರಾಜ್ ಅತಿ ಸಮರ್ಥವಾಗಿ ತಮ್ಮ ಕಂಠದಲ್ಲಿ ಸಾಕಾರಗೊಳಿಸಿರುವುದು, ವೃತ್ತಿ ರಂಗಭೂಮಿ ಪ್ರಯೋಗಗಳಲ್ಲಿ ಹುಲುಸಾಗಿದ್ದ ಇಂಥ ರಚನೆಗಳನ್ನು ಹಾಡಿ ನಟಿಸಿದ ಶ್ರೀಮಂತ ಅನುಭವದ ಆಧಾರದಿಂದ ಎನ್ನುವುದು ಸರಳ ಊಹೆ. ಪಾಶ್ಚಿಮಾತ್ಯ ಮತ್ತು ಪಾಪ್ ಸಂಗೀತದ ಸ್ಫೂರ್ತಿಗಳನ್ನು ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಮಟ್ಟುಗಳನ್ನು ಹದವಾಗಿ ಬೆರೆಸುವ ಇಳಯರಾಜರ ನಿರ್ದೇಶನದಲ್ಲಿ ರಾಜ್  ಹಾಡಿರುವ ಲವಲವಿಕೆಯ ‘ಜೀವ ಹೂವಾಗಿದೆ’, ಮತ್ತು ಹಳಹಳಿಕೆಯ ‘ಅನುರಾಗ ಏನಾಯ್ತು?’ ಗೀತೆಗಳಲ್ಲೂ (ಚಿತ್ರ: ನೀ ನನ್ನ ಗೆಲ್ಲಲಾರೆ), ಶಾಸ್ತ್ರೀಯ ಗಾಯನದಲ್ಲಿ ಪಳಗಿದ ಭಾರತೀಯ ಕಂಠವನ್ನು ಗುರುತಿಸಬಹುದು. ಇವಲ್ಲದೆ, ಎಂದೂ ನೆನಪಿಗೆ ಬರುವಂಥವು, ಅತಿ ಜನಪ್ರಿಯ ಗೀತೆಗಳಾದ ‘ಆರಾಧಿಸುವೆ ಮದನಾರಿ’ (ರಾಗ: ಖರಹರಪ್ರಿಯ, ಚಿತ್ರ: ಬಭ್ರುವಾಹನ, ಸಂಗೀತ: ಟಿ ಜಿ ಲಿಂಗಪ್ಪ), ‘ನಾದಮಯ’ (ರಾಗ: ತೋಡಿ, ಚಿತ್ರ: ಜೀವನಚೈತ್ರ, ಸಂಗೀತ: ಉಪೇಂದ್ರಕುರ್ಮಾ), ‘ಮಾಣಿಕ್ಯವೀಣಾಂ ಉಪಲಾಲಯಂತೀಂ’ (ರಾಗಮಾಲಿಕೆ, ಚಿತ್ರ: ಕವಿರತ್ನ
ಕಾಳಿದಾಸ, ಸಂಗೀತ: ಎಂ ರಂಗರಾವ್) ಎಂದು ಮೊದಲಾಗುವ ಅನೇಕ ಹಾಡುಗಳ ಸಾಲು ಸಾಲು.

ಇಷ್ಟು ವಿಪುಲವಾಗಿ ಹಾಡುವ ಹಿನ್ನೆಲೆ ಗಾಯಕರು ಸೋಲೋ ಮತ್ತು ಯುಗಳ  ಗೀತೆಗಳನ್ನು ಹಾಡುವಾಗ ಆ ಗಾಯಕರ ಪಟುತ್ವ ಪರೀಕ್ಷೆಗೊಳಗಾಗುತ್ತದೆ. ಗಂಡು ಮತ್ತು ಹೆಣ್ಣು ಧ್ವನಿಗಳಲ್ಲಿನ ವ್ಯತ್ಯಾಸ, ಹಿಮ್ಮೇಳದ ಕೋರಸ್ಸಿನ ಬಳಕೆ, ಅನೇಕ ವಿಭಿನ್ನ ಗುಣದ ವಾದ್ಯಗಳು ಎಲ್ಲವನ್ನೂ ಒಂದು ಹಾಡಿನ ಮಧುರ ಬಂಧಕ್ಕೆ ಹೊಂದಿಸಲು ಗಾಯಕ-ಗಾಯಕಿಯರು ತಮ್ಮ ಸಹಜ ಶ್ರುತಿಗಳಿಗಿಂತ ಭಿನ್ನವಾದ ಶ್ರುತಿಗಳಲ್ಲಿ ಹಾಡಬೇಕಾಗುತ್ತದೆ. ಇದು ಅವರ ಕಂಠದ ಮೇಲೆ ಹೇರುವ ಒತ್ತಡ ದೊಡ್ಡ ಪ್ರಮಾಣದ್ದು. ಅಲ್ಲದೆ ಇಂದಿನಂತೆ ಟ್ರ್ಯಾಕ್ ಧ್ವನಿಮುದ್ರಣ, ಸಿಂಥಸೈಸರ್ ತಂತ್ರಜ್ಞಾನ  ಮತ್ತು ಸಾಫ್ಟ್‌ವೇರ್ ಎಡಿಟಿಂಗ್ ಮೂಲಕ ಹೊಂದಿಸಿಕೊಳ್ಳಬಹುದಾದ, ಸೇರಿಸಿಕೊಳ್ಳಬಹುದಾದ, ಅನಗತ್ಯವಾದದ್ದನ್ನು ತೆಗೆದುಹಾಕಬಹುದಾದ  ಸೌಲಭ್ಯಗಳು ಇರದಿದ್ದ ಕಾಲಮಾನದಲ್ಲಿ ಅತಿ ಕಡಿಮೆ ಟೇಕ್‌ಗಳಲ್ಲಿ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಬೇಕಾದ ಅಗತ್ಯವೂ ಇತ್ತು. ಇವೆಲ್ಲ ತಾಂತ್ರಿಕ ಒತ್ತಡಗಳ ನಡುವೆಯೂ ಆ ಕಾಲದ ಸಂಗೀತ ನಿರ್ದೇಶಕರು ಮತ್ತು ಗಾಯಕರು ಸೇರಿ ಸೃಷ್ಟಿಸಿರುವ ಮಧುರ ಗೀತೆಗಳ ಭಂಡಾರ ಅಮೂಲ್ಯವಾಗಿದೆ. ಮಾತನ್ನು ಕಡಿಮೆ ಆಡಿ ಹಾಡುವುದಕ್ಕೋಸ್ಕರ ತಮ್ಮ ಧ್ವನಿಯನ್ನು ಕಾಪಾಡಿಕೊಳ್ಳುವ ಉಪಾಯ ನಟ-ಗಾಯಕರಿಗೆ ಇರುವುದಿಲ್ಲ. ನಾಯಕ ನಟರಾಗಿಯೂ ಸುದೀರ್ಘವಾಗಿ ಅಭಿನಯಿಸಿದ ರಾಜ್ ಸಹಜವಾಗಿಯೇ ಸಂಭಾಷಣೆಗಳ ಧ್ವನಿಮುದ್ರಣಕ್ಕೂ ತಮ್ಮ ಧ್ವನಿಯನ್ನು ಧಾರಾಳವಾಗಿ ಉಪಯೋಗಿಸಬೇಕಾಗಿತ್ತು ಅನ್ನುವುದನ್ನು ನೆನೆದಾಗ ಅವರ ಸಾಧನೆ ಎಷ್ಟು ದೊಡ್ಡದು ಎಂಬುದು ಮನವರಿಕೆಯಾಗುತ್ತದೆ. 

Follow Us:
Download App:
  • android
  • ios