. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ರಿಲೀಸ್‌ಗೆ ರೆಡಿ ಆಗಿದೆ. ನವೆಂಬರ್ 24ಕ್ಕೆ ತೆರೆಗೆ ಬರುವುದು ಗ್ಯಾರಂಟಿ ಆಗಿದೆ.
ಅದು ಒಂದು ಕಾಲದ ಜನಪ್ರಿಯ ತಾರಾ ಜೋಡಿ ಮತ್ತೆ ಜೊತೆಯಾದ ಸಂದರ್ಭ. ರಾಣಿ ಮಹಾರಾಣಿ, ಮೇಘ ಮಂದಾರ, ಹೃದಯ ಹಾಡಿತು ಎಂಬ ಹೆಸರು ಹೇಳಿದರೆ ಸಾಕು ಅಂಬರೀಷ್ ಮತ್ತು ಮಾಲಾಶ್ರೀ ನೆನಪಾಗದೆ ಇರಲು ಸಾಧ್ಯವಿಲ್ಲ. ಈ ಜೋಡಿ ಅವತ್ತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿತು.
ವಿಶೇಷ ಅಂದ್ರೆ, ಅಲ್ಲಿ ಮಾಲಾಶ್ರೀ ಅವರನ್ನು ಅಂಬರೀಷ್ ಪ್ರಪೋಸ್ ಮಾಡಿದ್ದು. ಮಾತಿಗೆ ನಿಂತಾಗ ಮಾಲಾಶ್ರೀ, ‘ಐ ಲವ್ ಯು’ ಎಂದು ಅಂಬರೀಶ್ ಅವರತ್ತ ಪ್ರೀತಿಯ ಲಹರಿ ಹರಿಬಿಟ್ಟರು. ಅದಕ್ಕೆ ಉತ್ತರವಾಗಿ ಅಂಬರೀಷ್ ‘ಮೀ ಟೂ’ ಅಂತ ಸಿಹಿ ಮಾತಿನ ಮುತ್ತು ಉದುರಿಸಿದರು.
ಆನಂತರ ಇಬ್ಬರು ‘ರೋ ರೋ ರೋಮಿಯೋ’ ಅಂತ ಕೈ ಕೈ ಹಿಡಿದು ಕುಣಿದರು. ಇದೆಲ್ಲಾ ನಡೆದಿದ್ದು ‘ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ರಿಲೀಸ್ಗೆ ರೆಡಿ ಆಗಿದೆ. ನವೆಂಬರ್ 24ಕ್ಕೆ ತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಸದ್ಯಕ್ಕೀಗ ಟೀಸರ್ ಲಾಂಚ್ ಮಾಡಿದೆ. ಇಮ್ರಾನ್ ಇಲ್ಲಿ ಗಮನ ಸೆಳೆದಿದ್ದು ಚಿತ್ರದಲ್ಲಿನ ಅಷ್ಟೂ ಪಾತ್ರಗಳ ಪರಿಚಯಕ್ಕಾಗಿಯೇ ಪ್ರತ್ಯೇಕ ಮೂರು ಟೀಸರ್ ಹೊರ ತಂದಿರುವ ಕಾರಣಕ್ಕೆ.
ಈ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಮುಖ್ಯ ಅತಿಥಿ. ಮಾಲಾಶ್ರೀ ಈ ಚಿತ್ರದ ಪ್ರಮುಖ ಆಕರ್ಷಣೆ. ‘ಕೂಗೋ ಕೋಳಿಗೆ ಖಾರ ಮಸಾಲೆ’ ಅಂತ ಬೆಳ್ಳಿತೆರೆಗೆ ಎಂಟ್ರಿ ಆಗಿ ಪಡ್ಡೆ ಹುಡುಗರು ಹುಚ್ಚೆದ್ದು ಹೋಗುವಂತೆ ಮಾಡಿದ್ದ ಅವರು ಈಗ ಮತ್ತೆ ‘ಉಪ್ಪು ಹುಳಿ ಖಾರ’ ಅಂತಿದ್ದಾರೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರದೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆ. ಸಮಾರಂಭಕ್ಕೆ ಇನ್ಫೋಸಿಸ್ ಉಪಾಧ್ಯಕ್ಷ ರಾಮದಾಸ್ ಕಾಮತ್ ಬಂದಿದ್ದರು. ಚಿತ್ರದಲ್ಲಿ ಇನ್ಫೋಸಿಸ್ ಕ್ಯಾಂಪಸ್ ಸೆರೆಹಿಡಿದು ವಿಭಿನ್ನವಾಗಿ ತೋರಿಸಿದ್ದಕ್ಕೆ ಅವರು ಖುಷಿ ಪಟ್ಟರು. ಟೀಸರ್ ಲಾಂಚ್ ಮಾಡಿದ ಅಂಬರೀಶ್, ‘ಕನ್ನಡದಲ್ಲೀಗ ಹೊಸ ಅಲೆಯ ಸಿನಿಮಾಗಳು ಬರುತ್ತಿವೆ. ಹೊಸಬರಿಗೆ ಪ್ರೋತ್ಸಾಹ ಬೇಕಿದೆ. ಹೊಸಬರು ಬೆಳೆಯಬೇಕಿದೆ’ ಎಂದರು.
ಚಿತ್ರದಲ್ಲಿ ಅನುಶ್ರೀ, ಜಯಶ್ರೀ, ಶರತ್, ಶಶಿ, ಧನಂಜಯ್, ಉಕ್ರೈನ್ ಬೆಡಗಿ ಮಾಸಾ ಇದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣವಿದೆ.
