ತನ್ನ ಗುರು ಕಾಶೀನಾಥ್ ಬಗ್ಗೆ ಉಪೇಂದ್ರ ಮನದಾಳದ ಮಾತುಗಳಿವು

First Published 19, Jan 2018, 11:56 AM IST
Upendra talk about Kashinath
Highlights

ಜಯನಗರದಲ್ಲಿರುವ ಕಾಶೀನಾಥ್ ಅವರ ಮನೆಯ ಮುಂದೆ ಹೋಗಿ ಬೆಳಗ್ಗೆ ನಿಂತೆ. ಇನ್ನೂ ಬಾಗಿಲು ಓಪನ್ ಮಾಡಿರಲಿಲ್ಲ. ಬಾಗಿಲು ತಟ್ಟಿ ಅವಮಾನಿತನಾಗೋದು ಬೇಡ ಎಂದು ನಿರ್ಧರಿಸಿ ಅವರ ಮನೆಯ ಎದುರಿಗಿರುವ ಜಪಾನ್ ಪಾರ್ಕ್‌ನ ಕಲ್ಲುಬೆಂಚಿನ ಮೇಲೆ ಸುಮಾರು 5 ಗಂಟೆ ಕಾಲ ಕುಳಿತಿದ್ದೆ. ಕಾಶೀನಾಥ್ ಮನೆಯವರು ಯಾವಾಗ ಬಾಗಿಲು ತೆಗೆಯುತ್ತಾರೋ ಎಂದು ಕಾದು ಕಾದು ಆ ಚಳಿಯಲ್ಲಿ  ಮರಗಟ್ಟಿ ಹೋಗಿದ್ದೆ. ಕೊನೆಗೂ ಒಬ್ಬ ಹುಡುಗ ಬಾಗಿಲು ತೆಗೆದು ಹೊರಗೆ ಬಂದ. ನಾನು ಪಾರ್ಕ್‌ನಿಂದ ಓಡೋಡಿ ಹೋಗಿ ಅವನ ಬಳಿ ಬಂದ ಉದ್ದೇಶ ವಿವರಿಸಿದೆ.

ಬೆಂಗಳೂರು (ಜ.19): ಜಯನಗರದಲ್ಲಿರುವ ಕಾಶೀನಾಥ್ ಅವರ ಮನೆಯ ಮುಂದೆ ಹೋಗಿ ಬೆಳಗ್ಗೆ ನಿಂತೆ. ಇನ್ನೂ ಬಾಗಿಲು ಓಪನ್ ಮಾಡಿರಲಿಲ್ಲ. ಬಾಗಿಲು ತಟ್ಟಿ ಅವಮಾನಿತನಾಗೋದು ಬೇಡ ಎಂದು ನಿರ್ಧರಿಸಿ ಅವರ ಮನೆಯ ಎದುರಿಗಿರುವ ಜಪಾನ್ ಪಾರ್ಕ್‌ನ ಕಲ್ಲುಬೆಂಚಿನ ಮೇಲೆ ಸುಮಾರು 5 ಗಂಟೆ ಕಾಲ ಕುಳಿತಿದ್ದೆ. ಕಾಶೀನಾಥ್ ಮನೆಯವರು ಯಾವಾಗ ಬಾಗಿಲು ತೆಗೆಯುತ್ತಾರೋ ಎಂದು ಕಾದು ಕಾದು ಆ ಚಳಿಯಲ್ಲಿ  ಮರಗಟ್ಟಿ ಹೋಗಿದ್ದೆ. ಕೊನೆಗೂ ಒಬ್ಬ ಹುಡುಗ ಬಾಗಿಲು ತೆಗೆದು ಹೊರಗೆ ಬಂದ. ನಾನು ಪಾರ್ಕ್‌ನಿಂದ ಓಡೋಡಿ ಹೋಗಿ ಅವನ ಬಳಿ ಬಂದ ಉದ್ದೇಶ ವಿವರಿಸಿದೆ.

ಆತ ಕುಳಿತುಕೊಳ್ಳಲು ಜಾಗ ತೋರಿಸಿದ. ಒಳಗೆ ಹೋಗಿ ಕಾಶೀನಾಥ್‌ಗೆ ವಿಷಯ ತಿಳಿಸಿದ. ಅದೆಷ್ಟೋ ಹೊತ್ತಾದ ನಂತರ ಕಾಶೀನಾಥ್ ಬಂದು, ‘ಏನೇನು ಕೆಲಸ ಮಾಡಿದ್ದಿ’ ಎಂದು ನನ್ನನ್ನು ಕೇಳಿದರು. ನಾನು ಕಾಶೀನಾಥ್ ಮನೆಗೆ ಹೋಗಬೇಕಾದರೆ ಫುಲ್ ಪ್ರಿಪೇರ್  ಆಗಿದ್ದೆ. ಒಂದೂವರೆ ಗಂಟೆಗಳ ಕಾಲ ಒಂದು ನಾಟಕವನ್ನು ಬರೆದು ಅದರ ಚಿತ್ರಕಥೆ ರಚಿಸಿ, ನಾನೇ ಡೈಲಾಗ್ ಬರೆದು ಅದನ್ನು ನಾನೇ ಎರಡು ಟೇಪ್ ರೆಕಾರ್ಡ್ ಇಟ್ಟುಕೊಂಡು ರೆಕಾರ್ಡೂ ಮಾಡಿದ್ದೆ. ಹಾಡು ಬರೆದು ಸಂಗೀತವನ್ನೂ ನೀಡಿದ್ದೆ. ಹೀಗೆ ಒಂದು ಕಥೆಯನ್ನು ಕುತೂಹಲಕಾರಿಯಾಗಿ ಹೇಗೆ ಮಾಡಬಹುದೆಂದು ಸಂಪೂರ್ಣವಾಗಿ ಕ್ಯಾಸೆಟ್‌ನಲ್ಲಿ ರೆಕಾರ್ಡ್ ಮಾಡಿಕೊಟ್ಟಿದ್ದೆ.

ಕ್ಯಾಸೆಟ್‌ಅನ್ನು ಅಲ್ಲೇ ನನ್ನ ಸಮ್ಮುಖದಲ್ಲೇ ಕಾಶೀನಾಥ್ ಟೇಪ್ ರೆಕಾರ್ಡರ್‌ನಲ್ಲಿ ಹಾಕಿ ಕೇಳಿಸಿಕೊಂಡರು. ಇದನ್ನೆಲ್ಲ ಕೇಳಿದ ನಂತರ, ತಾನು ಕುಳಿತ ಸೀಟ್‌ನಿಂದ ಎದ್ದ ಕಾಶೀನಾಥ್ ತಲೆಯಾಡಿಸುತ್ತಾ, ‘ಓಕೆ, ನೀನು ನನ್ನ ಜೊತೆ ಇರಬಹುದು’ ಎಂದು ಹೇಳಿದರು. ಅನಂತರ ಕಾಲೇಜಿನಲ್ಲಿ ಟೈಂ ಸಿಕ್ಕಾಗಲೆಲ್ಲ ಕಾಶೀನಾಥ್ ಮನೆಗೆ ಹೋಗಿ ಬರೆಯುತ್ತಿದ್ದೆ. ಯಾಕೆಂದರೆ ನನ್ನ ಮನೆಯಲ್ಲಿ ಬರೆಯಲು ಸ್ಥಳವಿಲ್ಲ, ಕುರ್ಚಿ, ಟೇಬಲ್ ಕೂಡ ಇಲ್ಲ ಅಂತ ಗೊತ್ತಾದ ಮೇಲೆ ಕಾಶೀನಾಥ್ ತಮ್ಮ ಮನೆಯ ಒಂದು ಮೂಲೆಯಲ್ಲಿ ಬರೆಯಲು ಅವಕಾಶ  ಮಾಡಿಕೊಟ್ಟರು. ಹೀಗೆ ನಾನು ಮೊದಲ ಪಿಯುಸಿಯಲ್ಲಿ ಇದ್ದಾಗಲೇ ಈ ಥಳಕುಬಳುಕಿನ ಸಿನಿಮಾ ರಂಗಕ್ಕೆ ಕಾಲಿಟ್ಟೆ.

*ಪ್ಯಾದೆ, ಸೆಕ್ಸ್ ಪಂಡಿತ, ಕಲಿಯುಗದ ವಾತ್ಸಾಯನ.. ಹೀಗೆ ಹಲವಾರು ಹೆಸರುಗಳಿಂದ ಗಾಂಧೀನಗರದ ಜನರು ಕಾಶೀನಾಥ್‌ರನ್ನು ಸಂಬೋಧಿಸುತ್ತಿದ್ದರು. ಆತನ ಪರ್ಸನಾಲಿಟಿ ನೋಡಿ,‘ಹ್ಯಾಪು ಮೋರೆಯ ಸಣಕಲು ಹೀರೋ’ ಎಂದು ತಮಾಷೆ ಮಾಡಿದವರು ಬೇಕಾದಷ್ಟು ಜನರಿದ್ದಾರೆ. ಹೀಗೆ ಒಬ್ಬೊಬ್ಬರ ಮನಸ್ಸಿನಲ್ಲಿ ಕಾಶೀನಾಥ್ ಬಗ್ಗೆ ಒಂದೊಂದು ಚಿತ್ರಣವಿದೆ, ಕಲ್ಪನೆಯಿದೆ. ಕಾಶಿ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವಾಗ ನನಗೆ ತುಂಬಾ ಬೇಸರವಾಗುತ್ತಿತ್ತು. ಯಾಕೆಂದರೆ ಈ ಮನುಷ್ಯನಲ್ಲಿರುವ ದೊಡ್ಡ ಕ್ವಾಲಿಟೀಸ್ ಅನ್ನು ಯಾರೂ ಗುರುತಿಸಿಲ್ಲವಲ್ಲಾ ಎಂಬ ಖೇದ ಉಂಟಾಗುತ್ತಿತ್ತು. ಕಾಶೀನಾಥ್ ಬಗ್ಗೆ ಯಾರು ಏನೇ ಹೇಳಲಿ, ನಾನು ಮಾತ್ರ ಹೆಮ್ಮೆಯಿಂದ ಈಗಲೂ ಹೇಳುತ್ತಿದ್ದೇನೆ, ‘ಕಾಶೀನಾಥ್ ನನ್ನ ಗುರು’. ನಾನು ಸಿನಿಮಾಕ್ಕೆ ಸಂಬಂಧಪಟ್ಟ ವಿಷಯವನ್ನು ಕಲಿತದ್ದು ಕಾಶೀನಾಥ್ ಶಾಲೆಯಲ್ಲಿ. ನಾನೊಬ್ಬನೇ ಅಲ್ಲ, ಕಾಶಿ ಶಾಲೆಯಲ್ಲಿ ಕಲಿತ ಸುಮಾರು ಒಂದು ಡಜನ್'ಗೂ ಹೆಚ್ಚು ಮಂದಿ ಇಂದು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಲೋಕದಲ್ಲಿ ಕೆಲಸ ಮಾಡುವುದೆಂದರೆ ಸುಖ, ಸಂಪತ್ತು, ಐಶ್ವರ್ಯ ಮತ್ತು ವೈಭವದ ಜೀವನಶೈಲಿಯನ್ನು ನಿರೀಕ್ಷಿಸಿಯೇ ಬಹುತೇಕ ಎಲ್ಲರೂ ಬರುತ್ತಿರುತ್ತಾರೆ. ಇದರ ಜೊತೆಗೆ ಈ ಕ್ಷೇತ್ರದ ಗ್ಲಾಮರ್ ಮತ್ತು ಮೆರುಗನ್ನು ಅನುಭವಿಸಲು ಎಲ್ಲರೂ ಹಾತೊರೆಯುತ್ತಿರುತ್ತಾರೆ. ನೂರಾರು  ವರ್ಣರಂಜಿತ ರಮ್ಯಕನಸುಗಳನ್ನು ಹೊತ್ತುಕೊಂಡು ಬಹುತೇಕ ಹೊಸಬರು ಈ ಲೋಕಕ್ಕೆ ಕಾಲಿಡುತ್ತಾರೆ.

ಹೀಗೆ ಆಸೆ, ಕನಸುಗಳನ್ನು ಹೊತ್ತುಕೊಂಡು ಬಂದವರಿಗೆ ಮಾತ್ರ ಕಾಶಿ ಶಾಲೆಯಲ್ಲಿ ನಿರಾಸೆಯಾಗುತ್ತಿತ್ತು. ಯಾಕೆಂದರೆ ಕಾಶಿ ಶಾಲೆಯಲ್ಲಿ ಆ ಥರದ ಸುಖ, ವೈಭವಗಳು ಯಾವುದೂ ಸಿಗುತ್ತಿರಲಿಲ್ಲ. ನಾವು ಗ್ಲ್ಯಾಮರ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದೇವೆಯೋ ಅಥವಾ ಯಾವುದೋ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇವೆಯೋ ಎಂಬಷ್ಟು ಎಲ್ಲವೂ ಬ್ಲ್ಯಾಕ್ ಆ್ಯಂಡ್ ವೈಟ್‌ನಲ್ಲಿ ಇರುತ್ತಿತ್ತು. ಅಷ್ಟೊಂದು ನೀರಸ ವಾತಾವರಣ. ನೀರಸ ಎನ್ನುವುದಕ್ಕಿಂತಲೂ ವಾಸ್ತವಿಕ ಜಗತ್ತಿನಲ್ಲೇ

ನಾವಿರುತ್ತಿದ್ದೆವು. ನಾವೆಲ್ಲ ಕಥೆ, ಚಿತ್ರಕಥೆ ಚರ್ಚೆ ಮಾಡುತ್ತಿದ್ದುದು ಅವರ ಮನೆಯ ರೂಂನಲ್ಲಿ. ಈಗಿನ ಸಂಪ್ರದಾಯದಂತೆ ದೊಡ್ಡ ದೊಡ್ಡ ಹೊಟೇಲ್, ಗೆಸ್ಟ್‌ಹೌಸ್‌ಗಳಲ್ಲಿ ಅಲ್ಲ. ಅಲ್ಲಿ ಮಾಮೂಲಿ ಊಟವನ್ನು ನೀಡುತ್ತಿದ್ದರೇ ಹೊರತು ಗಾಂಧಿನಗರದಲ್ಲಿ ಜಾರಿಯಲ್ಲಿರುವಂತೆ ಚಿಕನ್ ಊಟ, ತುಂಡು-ಗುಂಡುಗಳಲ್ಲೆಲ್ಲ ಅಲ್ಲಿ ಇರುತ್ತಲೇ ಇರಲಿಲ್ಲ. ಹೋಗಿ ಬರಲು ನಮ್ಮ ಸೈಕಲ್ ಬಳಸುತ್ತಿದ್ದೆವು. ಅದು ಬಿಟ್ಟರೆ ಬಿಟಿಎಸ್ ಬಸ್‌ನಲ್ಲಿ ಓಡಾಡುತ್ತಿದ್ದೆವು. ಓವರ್‌ಟೈಂ ಮಾಡಿದ್ದಕ್ಕೆ ಭತ್ಯೆಯಂಥ ಆರ್ಥಿಕ  ಸೌಲಭ್ಯ ಇರಲೇ ಇಲ್ಲ. ಆದರೂ ನಾವೆಲ್ಲ ಅತ್ಯಂತ ಖುಷಿಯಿಂದ ಸಂಭ್ರಮದಿಂದ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದೆವು. ಅದನ್ನು ಮಾಡಿ, ಇದನ್ನು ಮಾಡಿ ಎಂದು ‘ಕಾಶಿ ಸಾರ್’ ಎಂದೂ ಹೇಳುತ್ತಿರಲಿಲ್ಲ. ಆದರೆ ನಾವಾಗಿಯೇ ಅದನ್ನು ಮಾಡುತ್ತೇವೆ ಎಂದರೆ ಅವರು ತಡೆಯುತ್ತಿರಲಿಲ್ಲ. ಕೆಲಸ ಕಲಿಯಲು ಅಪಾರ ಅವಕಾಶವಿತ್ತು. ಹೀಗಾಗಿ ಕಥೆ, ಚಿತ್ರಕಥೆ, ನಟನೆ, ನಿರ್ದೇಶನ ಎಲ್ಲವನ್ನು ಕಲಿಯುವುದು ಸಾಧ್ಯವಾಯಿತು. ಕಾಶೀನಾಥ್ ಅವರ ಹಲವಾರು ಅವತಾರಗಳನ್ನು ನಾನಲ್ಲಿ ಕಂಡುಕೊಂಡೆ. ಒಮ್ಮೆ ಅವರು ನಿರ್ಮಾಪಕ ಕಾಶೀನಾಥ್ ಆದರೆ, ಮತ್ತೊಮ್ಮೆ ಹೀರೋ ಕಾಶೀನಾಥ್ ಆಗಿ ವರ್ತಿಸುತ್ತಿದ್ದರು. ಮತ್ತೊಮ್ಮೆ ಒಳ್ಳೆಯ ತಂತ್ರಜ್ಞರಾಗಿ ಕಾಣಿಸುತ್ತಿದ್ದರು. ಇನ್ನೊಮ್ಮೆ ಹಂಚಿಕೆದಾರರಾಗಿ.. ಇಂಥ ಕಾಶೀನಾಥ್ ಅಪ್ರತಿಮ ಪ್ರತಿಭಾವಂತರು.

ಕಾಶಿನಾಥ್ ಒಂದು ಚಿತ್ರದ ಕಥೆ ರಚಿಸಲು ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತಿದ್ದರು. ಪ್ರತೀದೃಶ್ಯವನ್ನು, ಅದರ ವಿವರಣೆಯನ್ನು ಬರೆದಿಡಲಾಗುತ್ತಿತ್ತು. ಕ್ಲೋಸ್ ಅಪ್ ಶಾಟ್  ಎಷ್ಟಿರಬೇಕು, ಲಾಂಗ್ ಸ್ಟಾಪ್ ಎಷ್ಟಿರಬೇಕೆಂದು ಕೂಡ ಸ್ಟಾಪ್‌ವಾಚ್ ಇಟ್ಟು ನಿಗದಿಪಡಿಸುತ್ತಿದ್ದೆವು. ನಿಜ ಹೇಳಬೇಕೆಂದರೆ ಸಿನಿಮಾ ನಿರ್ಮಾಣ ಮಾಡುವ ಮೊದಲೇ ಇಡೀ ಸಿನಿಮಾವನ್ನು ನಾವು ಅಲ್ಲಿ ಮೊದಲೇ ನೋಡುತ್ತಿದ್ದೆವು. ನಾವೆಲ್ಲ ಕಾಶಿನಾಥ್ ಶಾಲೆಯಲ್ಲಿ ‘ತಾಳ್ಮೆ ಮತ್ತು ಸಮಾಧಾನ’ವನ್ನು ಕಲಿತೆವು. ಈ ಥಳಕು ಬಳಕಿನ ಲೋಕಕ್ಕೆ ತಾಳ್ಮೆ ಅತೀ ಅಗತ್ಯ.

ಕಾಶೀನಾಥ್‌ಗೆ ಎಷ್ಟೊಂದು ತಾಳ್ಮೆ ಇತ್ತೆಂದರೆ ಒಮ್ಮೆ ಒಬ್ಬ ದೊಡ್ಡ ರೌಡಿ ಅವರ ಮನೆಗೆ ನುಗ್ಗಿ ಹಣ ಕೇಳಿದ, ‘ನೋಡು ಇಂಥಾ ದಿನ ಬರ್ತೀನಿ. ನೀನು ಹಣ ಕೊಡದಿದ್ದರೆ ನಿನ್ನ ಮುಖಕ್ಕೆ ಆ್ಯಸಿಡ್ ಎರಚುತ್ತೇನೆ’ ಎಂದು ದಬಾಯಿಸಿದ.

ಅವನು ಹೋದ ನಂತರ ಇಡೀ ಮನೆಯಲ್ಲಿ ಮೌನ ಆವರಿಸಿತು. ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಅಂತ ಗೊತ್ತಾಗಲಿಲ್ಲ. ಎರಡು ಗಂಟೆಗಳ ಕಾಲ ನಾವೆಲ್ಲ ಚರ್ಚಿಸಿದೆವು. ಆದರೆ ಕಾಶಿ ಮಾತ್ರ ಕೂಲ್ ಆಗಿದ್ದರು. ಎಲ್ಲರೂ ಸಖತ್ ಅಪ್‌ಸೆಟ್ ಆಗಿದ್ದೆವು. ‘ಪೊಲೀಸರಿಗೆ ಹೇಳಬೇಕಾ, ಬೇರೆ ರೌಡಿಗಳಿಗೆ ತಿಳಿಸಬೇಕಾ’ ಹೀಗೆಲ್ಲ ಯೋಚಿಸುತ್ತಿದ್ದೆವು. ‘ಅದೆಲ್ಲ ಏನೂ ಬೇಡ’ ಅಂದಿದ್ದರು ಕಾಶಿ. ಕೊನೆಗೊಮ್ಮೆ ರೌಡಿ ಹೇಳಿದ ದಿನ ಬಂದೇ ಬಿಟ್ಟಿತು. ಆತ ಸಮಯಕ್ಕೆ ಕರೆಕ್ಟಾಗಿ ಮನೆಯೊಳಗೆ ನುಗ್ಗಿದ. ಅವತ್ತು ಮನೆಯಲ್ಲಿ ನಾನು, ಕಾಶಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಕೈಯಲ್ಲಿ ಆ್ಯಸಿಡ್ ಬಾಟಲಿ ಹಿಡಿದುಕೊಂಡು ಬಂದವನೇ,‘ಹಣ ಕೊಡು’ ಎಂದು ದಬಾಯಿಸಿದ. ಆಗ ಏನೊಂದು ಟೆನ್ಶನ್ ಮಾಡಿಕೊಳ್ಳದ ಕಾಶಿ ಕೂಲಾಗಿ,‘ನೋಡಪ್ಪಾ, ನಿನಗೆ ಹಣ ಕೊಡಲು ನನ್ನ ಬಳಿ ಏನೂ ಇಲ್ಲ. ನೀನು ನನ್ನ ಮುಖಕ್ಕೆ ಆ್ಯಸಿಡ್ ಎರಚುವುದಾದರೆ ನನ್ನದೇನೂ ಅಭ್ಯಂತರವಿಲ್ಲ’ ಎಂದು ಕುಳಿತಲ್ಲಿಂದಲೇ ಹೇಳಿದರು. ಆ ಮಾತು ಕೇಳಿ ರೌಡಿಗೆ ಏನನಿಸಿತೋ ಗೊತ್ತಿಲ್ಲ. ಹಾಗೇ ಹಿಂದಕ್ಕೆ ಹೋಗಿಬಿಟ್ಟ. ಹೀಗೆ ತೆರೆಯ ಮೇಲೆ ನಕ್ಕು ನಗಿಸುವ ಹೀರೋ ಆಗಿ ಮೆರೆದ ಕಾಶಿ, ನಿಜ ಜೀವನದಲ್ಲಿ  ಗಂಭೀರ ಪರಿಸ್ಥಿತಿಯನ್ನು ಧೈರ್ಯವಾಗಿ ಹೀಮ್ಯಾನ್ ಥರ ಎದುರಿಸುತ್ತಿದ್ದರು.

 

 

 

loader