'ಟಾಕ್ಸಿಕ್' ಸಿನಿಮಾದ ಕಥೆಗೆ ಪೂರಕವಾಗಿ ಬೆಂಗಳೂರಿನಲ್ಲಿ ಬೃಹತ್ ಮತ್ತು ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಲು ಚಿತ್ರತಂಡ ಈ ಹಿಂದೆ ಯೋಜನೆ ರೂಪಿಸಿತ್ತು. ಸುಮಾರು 60 ದಿನಗಳ ಕಾಲ ಇಲ್ಲಿಯೇ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಸಲು ಸಿದ್ಧತೆಗಳು ಕೂಡ ನಡೆಯುತ್ತಿದ್ದವು. ಆದರೆ, ಕಿಯಾರಾ ಅಡ್ವಾಣಿ 

ಬೆಂಗಳೂರು: 'ಕೆಜಿಎಫ್' ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟಿಸುತ್ತಿರುವ, ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾವು (Toxic Movie) ಚಿತ್ರೀಕರಣ ಆರಂಭಕ್ಕೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ತೆಗೆದುಕೊಂಡಿರುವ ಒಂದು ಮಹತ್ವದ ನಿರ್ಧಾರವು ಚಿತ್ರತಂಡದ ವೃತ್ತಿಪರತೆ ಮತ್ತು ಸಹನಟರ ಮೇಲಿನ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದ್ದು, ಚಿತ್ರರಂಗದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ವರದಿಗಳ ಪ್ರಕಾರ, 'ಟಾಕ್ಸಿಕ್' ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ಬಾಲಿವುಡ್‌ನ ಖ್ಯಾತ ತಾರೆ ಕಿಯಾರಾ ಅಡ್ವಾಣಿ (Kiara Advani) ಅವರು ಸದ್ಯ ಗರ್ಭಿಣಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಆರೋಗ್ಯ ಮತ್ತು ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ನಟ ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್ ಸೇರಿದಂತೆ ಇಡೀ ಸಿನಿಮಾ ತಂಡ, ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

ಬೆಂಗಳೂರಿನ ಬೃಹತ್ ಸೆಟ್‌ಗಳು ಈಗ ಮುಂಬೈಗೆ ಶಿಫ್ಟ್:

'ಟಾಕ್ಸಿಕ್' ಸಿನಿಮಾದ ಕಥೆಗೆ ಪೂರಕವಾಗಿ ಬೆಂಗಳೂರಿನಲ್ಲಿ ಬೃಹತ್ ಮತ್ತು ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಲು ಚಿತ್ರತಂಡ ಈ ಹಿಂದೆ ಯೋಜನೆ ರೂಪಿಸಿತ್ತು. ಸುಮಾರು 60 ದಿನಗಳ ಕಾಲ ಇಲ್ಲಿಯೇ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಸಲು ಸಿದ್ಧತೆಗಳು ಕೂಡ ನಡೆಯುತ್ತಿದ್ದವು. ಆದರೆ, ಕಿಯಾರಾ ಅಡ್ವಾಣಿ ಅವರು ಮುಂಬೈ ನಿವಾಸಿಯಾಗಿದ್ದು, ಗರ್ಭಾವಸ್ಥೆಯಲ್ಲಿರುವಾಗ ಪದೇ ಪದೇ ಬೆಂಗಳೂರು-ಮುಂಬೈ ನಡುವೆ ಪ್ರಯಾಣ ಬೆಳೆಸುವುದು ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಆಯಾಸವನ್ನು ಉಂಟುಮಾಡಬಹುದು ಎಂಬುದನ್ನು ಚಿತ್ರತಂಡ ಅರಿತುಕೊಂಡಿದೆ.

ಈ ಸೂಕ್ಷ್ಮ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಯಶ್ ಚಿತ್ರದ ಟೀಮ್, ನಾಯಕಿಯ ಅನುಕೂಲಕ್ಕಾಗಿಯೇ ಶೂಟಿಂಗ್ ಸ್ಥಳವನ್ನು ಬದಲಾಯಿಸಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರ ಈ ನಡೆಗೆ ಚಿತ್ರರಂಗ ಬೆರಗಾಗಿದ್ದು, ಪ್ರಶಂಸೆ ಇಡೀ ತಂಡವು ಸಮ್ಮತಿ ಸೂಚಿಸಿದ್ದು, ಇದೀಗ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಅದೇ ರೀತಿಯ ಬೃಹತ್ ಸೆಟ್‌ಗಳನ್ನು ಮುಂಬೈನಲ್ಲಿಯೇ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ನಿರ್ಧಾರದಿಂದ ನಿರ್ಮಾಣ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದ್ದರೂ, ಚಿತ್ರದ ನಾಯಕಿನಟಿ ಆರೋಗ್ಯ ಮತ್ತು ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಿರುವುದು ಯಶ್ ಸಿನಿಮಾ ಟಾಕ್ಸಿಕ್ ತಂಡದ ದೊಡ್ಡ ಗುಣವನ್ನು ಎತ್ತಿ ತೋರಿಸುತ್ತಿದೆ ಎನ್ನಲಾಗಿದೆ.

'ಟಾಕ್ಸಿಕ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆ:

'ಕೆಜಿಎಫ್' ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ ಯಶ್ ಅವರ ಮುಂದಿನ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic - A Fairy Tale for Grown-ups) ಎಂಬ ವಿಶಿಷ್ಟ ಅಡಿಬರಹದೊಂದಿಗೆ ಬರುತ್ತಿರುವ ಈ ಚಿತ್ರವನ್ನು ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆಗಳು ಗಗನಕ್ಕೇರಿವೆ.

ಯಶ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರ ಆಯ್ಕೆಯು ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಯಶ್ ಸಿನಿಮಾ ಟೀಮ್ ತಮ್ಮ ನಾಯಕಿಗಾಗಿ ತೋರಿರುವ ಈ ಕಾಳಜಿ, ಚಿತ್ರರಂಗದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ಇದು ಕೇವಲ ಒಬ್ಬ ನಟ, ನಿರ್ದೇಶಕರ ನಿರ್ಧಾರವಲ್ಲ, ಬದಲಿಗೆ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡದ ನಿರ್ಧಾರ ಎನ್ನಲಾಗಿದೆ. ಇದು ಕಲಾವಿದರಿಗೆ ನೀಡುವ ಗೌರವದ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬೆಳವಣಿಗೆಯಿಂದಾಗಿ 'ಟಾಕ್ಸಿಕ್' ಸಿನಿಮಾವು ಕೇವಲ ಕಥೆಯಿಂದ ಮಾತ್ರವಲ್ಲ, ಮೌಲ್ಯಗಳಿಂದಲೂ ಶ್ರೀಮಂತವಾಗಿದೆ ಎಂಬ ಭಾವನೆ ಎಲ್ಲಾ ಕಡೆಯಿಂದ ಮೂಡಿದೆ.