ಹೈದರಾಬಾದ್ (ಆಗಸ್ಟ್ 21):  ಕುಡಿತದ ಅಮಲೋ? ನಟನ ದುರಹಂಕಾರವೋ? ಅಥವಾ ಇನ್ಪ್ಲುಯೆನ್ಸ್ ನಡೆಯುತ್ತದೆ ಅನ್ನುವ ಭಾವನೆಯೋ ಗೊತ್ತಿಲ್ಲ. ಆದರೆ ಸಿಸಿಟಿವಿಗೆ ಮಾತ್ರ ಯಾರೋ ಯಾಮಾರಿಸೋಕೆ ಆಗೋಲ್ಲ ನೋಡಿ!

ಮಂಗಳವಾರ ಮಧ್ಯರಾತ್ರಿ ಅಂದರೆ ಆಗಸ್ಟ್ 20 ರಂದು ಹೈದರಾಬಾದ್ ನ ಅಲ್ಕಾಪುರ ಟೌನ್ ವೃತ್ತದ ಬಳಿ ನಡೆದ ಕಾರು ಅಪಘಾತ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಟಾಲಿವುಡ್ ಚಾರ್ಮಿಂಗ್ ನಟ ರಾಜ್ ತರುಣ್ ಡಿವೈಡರ್ ಗೆ ಡಿಕ್ಕಿ ಹೊಡೆದು ಆ ನಂತರ ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಘಟನೆ ನಡೆದು 24 ಗಂಟೆಗಳ ಬಳಿಕ ಟ್ಟಿಟರ್ ಖಾತೆಯಲ್ಲಿ ರಾಜ್ ತರುಣ್ ‘ನನ್ನ ಬಗ್ಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮನೆಯಿಂದ ನರ್ಸಿಂಗ್ ಸರ್ಕಲ್ ಬಳಿ ಸಾಗುವಾಗ ಈ ಘಟನೆ ನಡೆದಿದೆ. ಇಲ್ಲಿ ಕಳೆದ 3 ತಿಂಗಳಿಂದ ಅಪಘಾತ ಹೆಚ್ಚಾಗುತ್ತಿದ್ದು ಇದೊಂದು ಅಪಘಾತ ವಲಯ’ವಾಗಿದೆ.ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ‘ತಕ್ಷಣಕ್ಕೆ ಏನಾಯಿತೋ ಏನೋ, ಕಾರಿನ ಕಂಟ್ರೋಲ್ ತಪ್ಪಿ ರೋಡಿನ ಡಿವೈಡರ್ ಗೆ ಹೊಡೆದೆ. ಆ ಸೌಂಡಿನಿಂದ ನನ್ನ ಕಿವಿ ಕೆಂಪಾಯಿತು. ಕಣ್ಣು ಮಂಜಾಯಿತು. ಹೃದಯ ಬಡಿತ ಹೆಚ್ಚಾಯಿತು. ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಕಾರಣ ಯಾವ ತೊಂದರೆಯೂ ಆಗಲಿಲ್ಲ. ಸಹಾಯಬೇಕೆಂದು ತಕ್ಷಣ ಮನೆ ಕಡೆ ಓಡಿ ಹೋದೆ’ ಎಂದು ಘಟನೆ ಬಗ್ಗೆ ರಾಜ್ ತರುಣ್ ಸ್ಪಷ್ಟನೆ ನೀಡಿದ್ದಾರೆ.