ಮೈಸೂರು (ಆ. 30): ರಂಗಕರ್ಮಿ ಮಂಡ್ಯ ರಮೇಶ್ ರವರ ಕನಸಿನ ಕೂಸಾದ www.natanamysore.org ಇದೇ ಭಾನುವಾರ ಸೆ. 2 ರಂದು ಲೋಕಾರ್ಪಣೆಗೊಳ್ಳಲಿದೆ.

ಈ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಡಿಜಿಟಲ್ ಪ್ರಧಾನ ಸಂಪಾದಕರಾದ ಎಸ್ ಕೆ ಶಾಮಸುಂದರ, ಕನ್ನಡ ಪ್ರಭ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ (ಜೋಗಿ),  ಹಲೋ ಮೈಸೂರು ಪತ್ರಿಕೆಯ ಸಂಪಾದಕರಾದ ಗುರುರಾಜ್ ರವರು ಉಪಸ್ಥಿತರಿರಲಿದ್ದಾರೆ. 

ಇದೇ ಸೆಪ್ಟೆಂಬರ್ 2 ಭಾನುವಾರ ಸಂಜೆ 6 ಗಂಟೆಗೆ ರಾಮಕೃಷ್ಣ ನಗರದ ಆಂದೋಲನ ವೃತ್ತದ ಬಳಿ ಇರುವ ನಟನ ರಂಗಶಾಲೆಯಲ್ಲಿ www.natanamysore.org  ಲೋಕಾರ್ಪಣೆಗೊಳ್ಳಲಿದೆ. ನಂತರ ನಟನ ತಂಡದ ಮೇಘ ಸಮೀರ ನಿರ್ದೇಶಿಸಿರುವ ನವನಾಟಕ ಪಿ ಲಂಕೇಶ್ ರವರ ಟಿ ಪ್ರಸನ್ನನ ಗೃಹಸ್ಥಾಶ್ರಮ ಪ್ರದರ್ಶನಗೊಳ್ಳಲಿದೆ. ನೀವೂ ಬನ್ನಿ, ಭಾಗವಹಿಸಿ. ಈ ಭಾನುವಾರದ ಸಂಜೆಯನ್ನು ಚಂದಗೊಳಿಸಿ. 

ನಾಟಕದ ಒಂದು ದೃಶ್ಯ 

ಏನಿದು ನಟನ? 
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಸ್ಥಿತಿಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟ ಸಮಾನ ಮನಸ್ಕರ ತಂಡ "ನಟನ".
ಕೆಲವೇ ವರ್ಷಗಳ ಹಿಂದೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ದೇಸಿ ಶೈಲಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ನಿರ್ಮಾಣವಾದ "ನಟನ ರಂಗಮಂಟಪ" ವನ್ನೇ ಕೇಂದ್ರ ನೆಲೆಯಾಗಿಸಿಕೊಂಡು ದೇಶದ ಮೂಲೆ ಮೂಲೆಗಳಲ್ಲಿ ಕನ್ನಡ ರಂಗಭೂಮಿಯ ಕಂಪನ್ನು ಪಸರಿಸುತ್ತಾ, ಕನ್ನಡ ರಂಗಭೂಮಿಗೆ ಹತ್ತಾರು ಯುವ ಕಲಾವಿದರನ್ನು ಕೊಡುಗೆಯಾಗಿ ನೀಡಿ ಮುನ್ನಡೆಯುತ್ತಿರುವ "ನಟನ" ಸದಾ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ.