ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ ಬಿಡುಗಡೆಯಾಗಿದ್ದು ಫೆಬ್ರವರಿ 23, 2017 ರಂದು. ಆ ಲೆಕ್ಕ ನೋಡಿದರೆ ಸುದೀಪ್ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಯಾಗದೆ ಒಂದು ವರ್ಷ ಎರಡು ತಿಂಗಳು ಕಳೆದಿದೆ.

ಮುಂದಿನ ಕೆಲವು ತಿಂಗಳೂ ಸುದೀಪ್ ಚಿತ್ರ ಬಿಡುಗಡೆಯಾಗುವ ಲಕ್ಷಣವಿಲ್ಲ. ಹಾಗಾಗಿ ಸುದೀಪ್ ಅಭಿಮಾನಿಗಳು ಸ್ವಲ್ಪ ಬೇಸರದಲ್ಲಿರಬಹುದು. ಈ ಮಧ್ಯೆ ಭರ್ಜರಿಯಾಗಿ ಶುರು  ಮಾಡಿದ ‘ದಿ ವಿಲನ್’ ತಡವಾಗುತ್ತಲೇ ಇದೆ. ನಿರ್ದೇಶಕ ಪ್ರೇಮ್ ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತೇವೆ ಅಂತ ಹೇಳುತ್ತಲೇ ಇದ್ದಾರೆ. ಆದರೆ ಆ ಮಾತಿನ ಮೇಲೆ ನಂಬಿಕೆ  ಇಲ್ಲದವರಿಗೆ ನಂಬಿಕೆ ಹುಟ್ಟಿಸುವ ಸಂಗತಿಯೊಂದು ಜರುಗಿ ಹೋಗಿದೆ. ಅದು ‘ದಿ ವಿಲನ್’ ಚಿತ್ರದ ಡಬ್ಬಿಂಗ್.

ಈಗಾಗಲೇ ‘ದಿ ವಿಲನ್’ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಆಕಾಶ್ ಆಡಿಯೋದಲ್ಲಿ ನಿರ್ದೇಶಕ ಪ್ರೇಮ್ ಡಬ್ಬಿಂಗ್ ಕೆಲಸ ಶುರುವಿಟ್ಟುಕೊಂಡಿದ್ದಾರೆ.
ಸದ್ಯಕ್ಕೀಗ ಡಬ್ಬಿಂಗ್‌ನಲ್ಲಿ ಸುದೀಪ್ ಪಾಲ್ಗೊಂಡಿದ್ದಾರೆ. ಹೆಚ್ಚು ಕಡಿಮೆ ಹತ್ತಿಪ್ಪತ್ತು ದಿವಸಗಳಲ್ಲಿ ಡಬ್ಬಿಂಗ್  ಮುಗಿಸಲು ಚಿತ್ರ ತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನುತ್ತಿವೆ ಮೂಲಗಳು. ಈ ಸಂದರ್ಭದಲ್ಲಿ ತೆಗೆದ ಪ್ರೇಮ್ ಜೊತೆಗೆ ಸುದೀಪ್ ತೆಗೆದ ಸೆಲ್ಫೀ ನೋಡಿದ ಅಭಿಮಾನಿ ಬಂಧುಗಳು ಭಾರಿ ಖುಷಿಯಾಗಿದ್ದಾರೆ.

ಇನ್ನೇನು ಅಣ್ಣನ ಸಿನಿಮಾ ಬಂದೇ ಬಿಡ್ತು ಅನ್ನೋ ರೇಂಜಿಗೆ ಸಂತೋಷ ಪಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರೇಮ್ ಕೂಡ ಒಂದು ಸಂತೋಷದ ಸಂಗತಿಯನ್ನು ಹರಿಬಿಟ್ಟಿದ್ದಾರೆ. ಅಂದುಕೊಂಡಂತೆ  ನಡೆದರೆ ‘ದಿ ವಿಲನ್’ ಚಿತ್ರ ಆಗಸ್ಟ್ 24 ರಂದು ಬಿಡುಗಡೆಯಾಗಲಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಕನ್ನಡ ನಾಡಿಗೆ ಕೊಡುಗೆ ನೀಡಬೇಕು ಅನ್ನುವುದು ಪ್ರೇಮ್ ಆಸೆ. ಜೂನ್‌ನಲ್ಲಿ ಆಡಿಯೋ ರಿಲೀಸ್ ಮಾಡುವ ಯೋಚನೆ ನಿರ್ದೇಶಕ ಪ್ರೇಮ್‌ಗಿದೆ. ಈ ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದಾರೆ.