ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಜನಪ್ರಿಯ ಹೀರೋ ಆಗಿರಬಹುದು. ಬಾಕ್ಸಾಫೀಸ್ ಲೂಟಿ ಮಾಡುತ್ತಿರಬಹುದು. ಆದರೆ ಅವರ ಈ ಅಗಾಧ ಬೆಳವಣಿಗೆಗೆ ನಾಂದಿ ಹಾಡಿದ ಕುತೂಹಲಕಾರಿ ಘಟನೆ ಬಹಿರಂಗವಾಗಿದೆ.

ನವದೆಹಲಿ (ನ.29): ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಜನಪ್ರಿಯ ಹೀರೋ ಆಗಿರಬಹುದು. ಬಾಕ್ಸಾಫೀಸ್ ಲೂಟಿ ಮಾಡುತ್ತಿರಬಹುದು. ಆದರೆ ಅವರ ಈ ಅಗಾಧ ಬೆಳವಣಿಗೆಗೆ ನಾಂದಿ ಹಾಡಿದ ಕುತೂಹಲಕಾರಿ ಘಟನೆ ಬಹಿರಂಗವಾಗಿದೆ.

ಬೆಂಗಳೂರಿನ ವಿಮಾನ ಮಿಸ್ ಆಗಿದ್ದರಿಂದಲೇ ಅಕ್ಷಯ್ ಅವರು ಹೀರೋ ಆಗಲು ಸಾಧ್ಯವಾಯಿತು. ಒಂದು ವೇಳೆ, ವಿಮಾನ ಹತ್ತಿದ್ದರೆ ರೂಪದರ್ಶಿ ಆಗಿ ಅವರು ನಿವೃತ್ತಿಗೊಂಡಿರುತ್ತಿದ್ದರು! ಹೌದು. ಈ ವಿಷಯವನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ಮುಂಬೈನ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದು 90 ರ ದಶಕ. ಬಾಲಿವುಡ್‌'ನಲ್ಲಿ ಮಿಂಚಲು ಅಕ್ಷಯ್ ಪರದಾಡುತ್ತಿದ್ದರು. ಜತೆಗೆ ಮಾಡೆಲಿಂಗ್ ವೃತ್ತಿಯಲ್ಲೂ ತೊಡಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಫ್ಯಾಷನ್ ಶೋದಲ್ಲಿ ಅಕ್ಷಯ್ ಭಾಗಿಯಾಗಬೇಕಿತ್ತು. ಬೆಳಗ್ಗೆ 6 ರ ವಿಮಾನಕ್ಕೆ ಟಿಕೆಟ್ ಕೂಡ ಬುಕ್ ಆಗಿತ್ತು. ಆದರೆ ವಿಮಾನ ಸಂಜೆ 6 ಗಂಟೆಗಿದೆ ಎಂದು ತಪ್ಪಾಗಿ ಭಾವಿಸಿದ ಅಕ್ಷಯ್ ಮನೆಯಲ್ಲಿ ನಿದ್ದೆ ಮಾಡುತ್ತಿದ್ದರು. ಮಾಡೆಲಿಂಗ್ ಏಜೆನ್ಸಿಯ ವ್ಯಕ್ತಿ ಕರೆ ಮಾಡಿ, ಎಲ್ಲಿದ್ದೀರಿ ಎಂದು ಕೇಳಿದಾಗಲೇ ಅಕ್ಷಯ್‌'ಗೆ ಪ್ರಮಾದ ಅರಿವಾಯಿತು. ಆತ ಅಕ್ಷಯ್‌ಗೆ ನಿಮ್ಮಂಥ ವೃತ್ತಿಪರರಲ್ಲದ ವ್ಯಕ್ತಿಗಳು ಎಂದಿಗೂ ಯಶಸ್ವಿಯಾಗಲ್ಲ ಎಂದು ನಿಂದಿಸಿಬಿಟ್ಟ. ಆಗ, ಅಕ್ಷಯ್ ಕಣ್ಣಲ್ಲಿ ನೀರು ಜಿನುಗತೊಡಗಿತು. ಈ ಘಟನೆಯಿಂದ ತೀರಾ ನೊಂದುಕೊಂಡ ಅಕ್ಷಯ್ ಅವರು, ಬೇಸರ ನಿವಾರಣೆಗಾಗಿ ಮುಂಬೈನ ನಟರಾಜ ಸ್ಟುಡಿಯೋಗೆ ಹೋದರು. ಅಲ್ಲಿ ಪ್ರಮೋದ್ ಚಕ್ರವರ್ತಿ ಕಂಪನಿಯ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಮೇಕಪ್ ಮ್ಯಾನ್ ಅಕ್ಷಯ್ ಅವರನ್ನು ನೋಡಿ ‘ಹೀರೋ ಆಗ್ತೀಯಾ?’ ಎಂದು ಕೇಳಿದ. ಹೌದು ಎಂದು ಅಕ್ಷಯ್ ಹೇಳಿದ ಬಳಿಕ, ನಿರ್ದೇಶಕ ಪ್ರಮೋದ್ ಚಕ್ರವರ್ತಿ ಜತೆ ಮಾತುಕತೆಗೆ ಕರೆದೊಯ್ದ. ಸಂಜೆ ಸ್ಟುಡಿಯೋ ದಿಂದ ವಾಪಸ್ ಬರುವಷ್ಟರಲ್ಲಿ ಅಕ್ಷಯ್ ಕೈಯಲ್ಲಿ ಮೂರು ಸಿನಿಮಾಗಳು ಇದ್ದವು! ‘ಪ್ರಮೋದ್ ಚಕ್ರವರ್ತಿ ಅವರು ನನ್ನನ್ನು ಒಳಗೆ ಕರೆದು, ಮಾತನಾಡಿಸಿ, ಮೊದಲ ಚೆಕ್ ನೀಡಿದರು. ಬಳಿಕ ಮೂರು ಚಿತ್ರಗಳಿಗೆ ಸಹಿ ಮಾಡಿಸಿಕೊಂಡರು. ಮೊದಲ ಚೆಕ್ ಮೊತ್ತ 5 ಸಾವಿರ ರುಪಾಯಿ. ಮೊದಲ ಸಿನಿಮಾಕ್ಕೆ 50 ಸಾವಿರ, ಎರಡನೇ ಸಿನಿಮಾಕ್ಕೆ 1 ಲಕ್ಷ ಹಾಗೂ ಮೂರನೇ ಸಿನಿಮಾಕ್ಕೆ 1.5 ಲಕ್ಷ ರೂ ಸಂಭಾವನೆಯೂ ನಿಗದಿಯಾಯಿತು. 5 ಸಾವಿರ ರೂ ಚೆಕ್ ನನ್ನ ಕೈಗೆ ಸಿಕ್ಕಾಗ ಸಂಜೆ ಆರು ಗಂಟೆಯಾಗಿತ್ತು’ ಎಂದು ಅಕ್ಷಯ್ ಸಂದರ್ಶನದಲ್ಲಿ ತಿಳಿಸಿದ್ದಾರೆ.