ಟೈಗರ್‌ ಪ್ರಭಾಕರ್‌, ಪ್ರಕಾಶ್‌ ರೈ, ಸುದೀಪ್‌, ಉಪೇಂದ್ರ, ಕಿಶೋರ್‌, ಸಂಪತ್‌ ಕುಮಾರ್‌, ಅತುಲ್‌ ಕುಲಕರ್ಣಿ... ಪರಭಾಷೆಯ ನೆಲದಲ್ಲಿ ಬಹು ಎತ್ತರಕ್ಕೆ ಬೆಳೆಯುತ್ತಿರುವ ಮತ್ತು ಬೆಳೆದಿರುವ ಕನ್ನಡ ಕಲಾ ಶಿಖರಗಳು ಇವರು. ಈ ಪೈಕಿ ತೆಲುಗಿಗೆ ವಿಲನ್‌ ಆಗಿ ಎಂಟ್ರಿ ಕೊಟ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು ಟೈಗರ್‌ ಪ್ರಭಾಕರ್‌, ಸುದೀಪ್‌. ‘ಸನ್‌ ಆಫ್‌ ಸತ್ಯಮೂರ್ತಿ' ಚಿತ್ರದಲ್ಲಿ ಉಪೇಂದ್ರ ಅಲ್ಲು ಅರ್ಜುನ್‌ ಮುಂದೆ ವಿಲನ್‌ ಆದರು. ಕನ್ನಡದ ಸ್ಟಾರ್‌ ಹೀರೋಗಳು ತೆಲುಗಿನವರ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ ತೆಲುಗಿನ ಯಂಗ್‌ಟೈಗರ್‌ ಜ್ಯೂ.ಎನ್‌ಟಿಆರ್‌ಗೆ ಸ್ಯಾಂಡಲ್‌ವುಡ್‌ನ ಬ್ಲಾಕ್‌ ಕೋಬ್ರಾ ಕಾಣಿಸಿದ್ದು ಹೇಗೆ?

1. ತೆಲುಗು ಹೀರೋ ಮುಂದೆ ನೀವು ವಿಲನ್‌ ಆಗುತ್ತಿದ್ದೀರಿ. ನಾಯಕನಟನಾಗಿ ನೀವು ಇದನ್ನು ಹೇಗೆ ಸ್ವೀಕರಿಸಿದ್ದೀರಿ?

ಮೊದಲನೆಯದಾಗಿ ಇಂಥ ಅವಕಾಶ ಸಿಕ್ಕಿರುವುದಕ್ಕೆ ನನಗೆ ಖುಷಿ ಇದೆ. ಬೇರೊಂದು ಭಾಷೆಯ ದೊಡ್ಡ ಹೀರೋ ಚಿತ್ರಕ್ಕೆ ನನ್ನ ಪರಿಗಣಿಸಿರುವುದನ್ನು ನೋಡಿದಾಗ ನಾನು ಅಷ್ಟುದೊಡ್ಡ ಮಟ್ಟಕ್ಕೆ ಬೆಳೆದ್ನಾ ಎನ್ನುವ ಅಚ್ಚರಿ ಆಗುತ್ತದೆ. ಆದರೆ, ಪ್ರತಿಭೆ ಇದ್ದರೆ ಯಾರು ಬೇಕಾದರೂ ಹುಡುಕಿಕೊಂಡು ಬರುತ್ತಾರೆಂಬುದಕ್ಕೆ ನನಗೆ ಸಿಕ್ಕಿರುವ ಈ ಅವಕಾಶವೇ ಸಾಕ್ಷಿ. ನನ್ನ ಪ್ರತಿಭೆಯನ್ನು ಗುರುತಿಸಿದ್ದಾರೆಂಬ ಸಂತಸದ ಜತೆಗೆ ನಾನು ಒಬ್ಬ ಹೀರೋ ಆಗಿ ಇದನ್ನು ಸವಾಲಾಗಿಯೇ ತೆಗೆದುಕೊಂಡು ನಟಿಸುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

2. ನಿಮ್ಮನ್ನು ಜ್ಯೂಎನ್‌ಟಿಆರ್‌ ಅವರು ಗುರುತಿಸಿದ್ದು ಹೇಗೆ ಮತ್ತು ಎಲ್ಲಿ?

ಇತ್ತೀಚೆಗೆ ‘ಮಾಸ್ತಿ ಗುಡಿ' ಚಿತ್ರದ ಫಸ್ಟ್‌ ಲುಕ್‌ ನೋಡಿ ಸ್ವತಃ ಜ್ಯೂಎನ್‌ಟಿಆರ್‌ ತಮ್ಮ ಚಿತ್ರಕ್ಕೆ ವಿಲನ್‌ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಸೂಚಿಸಿದ್ದಾರಂತೆ. ಹೀಗಾಗಿ ಅಲ್ಲಿ ವಿಲನ್‌ ಅವಕಾಶ ಕೊಡಿಸಿದ್ದು ‘ಮಾಸ್ತಿ ಗುಡಿ' ಸಿನಿಮಾ.

3. ಜೈ ಲವ ಕುಶ ನಿಮ್ಮ ಚಿತ್ರದಲ್ಲಿ ಪಾತ್ರ ಹೇಗಿರುತ್ತದೆ? ಮೂವರು ವಿಲನ್‌ಗಳಂತೆ?

ಸದ್ಯಕ್ಕೆ ನನ್ನ ಗೆಟಪ್‌ಗಳ ಬಗ್ಗೆ ಹೇಳಿದ್ದಾರೆ. ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದರೆ ಒಟ್ಟಾರೆ ಪಾತ್ರ, ಕತೆ ಬಗ್ಗೆ ವಿವರ­ವಾಗಿ ಗೊತ್ತಿಲ್ಲ. ಚಿತ್ರದಲ್ಲಿ ಮೂವರಲ್ಲಿ ಒಬ್ಬರೇನಾ ಎಂಬು­ದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಆದರೆ, ಜ್ಯೂ ಎನ್‌ಟಿಆರ್‌ ಅವರು ತೆಲುಗಿನಲ್ಲಿ ಯಂಗ್‌ ಟೈಗರ್‌ ಎಂದೇ ಗುರುತಿಸಿಕೊಂಡಿವರು, ದೊಡ್ಡ ಸ್ಟಾರ್‌ ನಟನ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ.

4. ಹಾಗಾದರೆ ನೀವು ತೆಲುಗಿನ ‘ಜೈ ಲವ ಕುಶ' ಚಿತ್ರದಲ್ಲಿ ವಿಲನ್‌ ಆಗಲು ಜ್ಯೂ ಎನ್‌ಟಿಆರ್‌ಗಾಗಿನಾ?

ಅದು ಒಂದು ಮುಖ್ಯ ಕಾರಣ. ಜತೆಗೆ ನಮ್ಮ ಪ್ರತಿಭೆ ಗಡಿ ದಾಟುತ್ತಿದೆ. ಇಷ್ಟುವರ್ಷ ಕನ್ನಡದಲ್ಲಿ ನನ್ನ ಬೆಳೆಸಿದವರೇ ಈಗ ತೆಲುಗಿನಲ್ಲೂ ನೋಡಿ ಖುಷಿಪಡುತ್ತಾರೆ. ಒಬ್ಬ ನಟನನ್ನು ತನ್ನ ರಾಜ್ಯ ಬಿಟ್ಟು ಮತ್ತೊಂದು ರಾಜ್ಯದ ಚಿತ್ರರಂಗ ಗುರುತಿಸುತ್ತಿದೆ ಎನ್ನುವ ಕಾರಣಕ್ಕೂ ಒಪ್ಪಿಕೊಂಡ ಸಿನಿಮಾ ಇದು.

5. ನೀವು ಜ್ಯೂಎನ್‌ಟಿಆರ್‌ ಸಿನಿಮಾಗಳನ್ನು ನೋಡಿದ್ದೀರಾ?

ಅವರ ತುಂಬಾ ಸಿನಿಮಾಗಳನ್ನು ನೋಡಿದ್ದೇನೆ. ಇತ್ತೀಚೆಗೆ ಬಂದ ‘ಜನತಾ ಗ್ಯಾರೇಜ್‌', ‘ನಾನ್ನಕು ಪ್ರೇಮತೋ' ಸಿನಿಮಾ­ಗಳನ್ನೂ ಸಹ ಬಿಡದೆ ನೋಡಿದ್ದೇನೆ. ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ನನಗೆ ಅವರ ಡ್ಯಾನ್ಸ್‌, ಫೈಟ್‌ ಇಷ್ಟ.

6. ಚಿತ್ರೀಕರಣ ಯಾವಾಗಿನಿಂದ ಆರಂಭ, ಎಷ್ಟುದಿನ ಕಾಲ್‌ಶೀಟ್‌ ಕೊಟ್ಟಿದ್ದೀರಿ? ಮುಂದೆಯೂ ತೆಲುಗು ಸಿನಿಮಾ­ಗಳಲ್ಲಿ ನಟಿಸುತ್ತೀರಾ?

ಮುಂದಿನ ತಿಂಗಳು ಚಿತ್ರೀಕರಣ ಶುರುವಾಗಲಿದೆ. ಒಟ್ಟು 20 ದಿನ ಕಾಲ್‌ಶೀಟ್‌ ಕೊಟ್ಟಿದ್ದೇನೆ. ಈ ಚಿತ್ರದ ನಂತರ ಏನು ಅಂತ ಯೋಚಿಸಿಲ್ಲ. ಸದ್ಯಕ್ಕೆ ‘ಜೈ ಲವ ಕುಶ' ಚಿತ್ರದಲ್ಲಿ ನಟಿಸಿ ಬರುತ್ತೇನೆ. ಮುಂದೆಯೂ ಇದೇ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಅವಕಾಶ ಸಿಕ್ಕರೆ ನೋಡೋಣ. ಆದರೆ, ಕನ್ನಡ ಬಿಟ್ಟು ಹೋಗಲ್ಲ.

-ಆರ್. ಕೇಶವಮೂರ್ತಿ, ಕನ್ನಡಪ್ರಭ