Asianet Suvarna News Asianet Suvarna News

ಜಾಗ್ವಾರ್ ಏರುವುದಕ್ಕೆ 10 ಕಾರಣಗಳು

ten reasons to see jaguar

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ದಸರಾ ಹಬ್ಬಕ್ಕೆ ಭರ್ಜರಿಯಾಗಿಯೇ ತೆರೆ ಕಂಡಿದೆ. ಆದರೆ, ಚಿತ್ರ ಹೇಗಿದೆ? ಈ ಚಿತ್ರವನ್ನು ಯಾಕೆ ನೋಡಬೇಕು? ಎನ್ನುವುದಕ್ಕೆ ಚಿತ್ರ ತಂಡ ನೀಡಿರುವ 10 ಕಾರಣಗಳು ಇಲ್ಲಿವೆ

1) ಒಂದು ಚಿತ್ರಕ್ಕೆ ತಾಯಿ ಬೇರು ಅಂದ್ರೆ ಕತೆ. ಒಳ್ಳೆಯ ಕತೆ ಇಲ್ಲದ ಚಿತ್ರವೊಂದನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ. ಈ ದೃಷ್ಟಿಯಲ್ಲಿ ಜಾಗ್ವಾರ್‌ಗೆ ವಿಶೇಷತೆ ಇದ್ದಿದ್ದೇ ಅಲ್ಲಿ. ಯಾಕೆಂದ್ರೆ ಈ ಚಿತ್ರಕ್ಕೆ ಕತೆ ಬರೆದಿದ್ದು ವಿಜಯೇಂದ್ರ ಪ್ರಸಾದ್. ಕಳೆದ ವರ್ಷ ಭಾರೀ ಸಕ್ಸಸ್‌ಕಂಡ ತೆಲುಗಿನ ‘ಬಾಹುಬಲಿ’, ಹಿಂದಿಯ ‘ಭಜರಂಗಿ ಬಾಯಿಜಾನ್’ ಚಿತ್ರಕ್ಕೆ ಕತೆ ಬರೆದಿದ್ದೇ ಅವರು. ಅದಕ್ಕೂ ಮುಂಚೆ ‘ಮಗಧೀರ’,‘ಈಗ’, ‘ವಿಕ್ರಮಾರ್ಕಡು’ ಚಿತ್ರಗಳಿಗೆ ಅವರದ್ದೇ ಕತೆ.

2) ಅದ್ಧೂರಿ ವೆಚ್ಚದ ಚಿತ್ರವಿದು. ಕುಮಾರಸ್ವಾಮಿ ತಮ್ಮ ಪುತ್ರನನ್ನು ಹೀರೋ ಆಗಿ ಪರಿಚಯಿಸುವ ಅವರ ಸಾಹಸಕ್ಕೆ ಹಣದ ಲೆಕ್ಕವೇ ಇಲ್ಲ. ಆರಂಭದಲ್ಲಿಯೇ ಇದು ₹ 60 ಕೋಟಿ ವೆಚ್ಚದ ಚಿತ್ರ ಎನ್ನುವ ಸುದ್ದಿ ಇತ್ತು. ಅದರಲ್ಲೂ ಇದು ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗಿದ್ದರಿಂದ ಸಿನಿಮಾ ಬಡ್ಜೆಟ್ ಅದಕ್ಕೂ ಅಧಿಕ ಎನ್ನಲಾಗಿದೆ. ಚಿತ್ರದ ಮೇಕಿಂಗ್‌ನ ವಿಶೇಷತೆಗಳು ಈ ಕಾರಣಕ್ಕಾಗಿಯೇ ಸಿನಿರಸಿಕರಲ್ಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.

3) ನಿಖಿಲ್ ಕುಮಾರ್ ಇಲ್ಲಿ ಸುಖಾ ಸುಮ್ಮನೆ ಹೀರೋ ಆದವರಲ್ಲ. ಆ್ಯಕ್ಷನ್, ಡ್ಯಾನ್ಸ್ ಹಾಗೂ ನಟನೆ ಎಲ್ಲದರಲ್ಲೂ ಪರ್ಫೆಕ್ಟ್ ಆ್ಯಂಡ್ ಫಿಟ್ ಎನಿಸಿಕೊಂಡಾಗಲೇ,ಅಖಾಡಕ್ಕೆ ಇಳಿದಿದ್ದರು. ಫ್ರಾನ್ಸ್ ಮೂಲದ ನುರಿತ ಫೈಟ್ ಮಾಸ್ಟರ್ ಕಡೆಯಿಂದ ಆ್ಯಕ್ಷನ್ ಟ್ರೈನಿಂಗ್ ನಡೆದಿತ್ತು. ಸಿಕ್ಸ್ ಪ್ಯಾಕ್ಸ್ ಮಾಡಿಕೊಂಡಿದ್ದರು. ಆನಂತರ ನೃತ್ಯ ತರಬೇತಿ. ಮೈ ನವೀರಿಳಿಸುವ ಅವರ ಸಾಹಸದ ದೃಶ್ಯಗಳು ಟೀಸರ್‌ನಲ್ಲಿ ಅನಾವರಣಗೊಳ್ಳುವ ಚಿತ್ರರಂಗಕ್ಕೆ ಎಂಟ್ರಿಯಾದರು.

4) ಒಂದು ಹಡಗಿಗೆ ನಾವಿಕ ಇದ್ದಂತೆ ಒಂದು ಚಿತ್ರದ ನಿರ್ದೇಶಕನ ಪಾತ್ರ. ಒಬ್ಬ ಕ್ರೀಯಾಶೀಲ ನಿರ್ದೇಶಕ ಒಂದು ಕೆಟ್ಟ ಕತೆಯನ್ನು ಸೊಗಸಾಗಿ ತೆರೆಗೆ ತರಬಲ್ಲ ಎನ್ನುವ ಮಾತು ಹುಟ್ಟಿದ್ದೇ ಈ ಕಾರಣಕ್ಕೆ. ಈ ದೃಷ್ಟಿಯಲ್ಲಿ ಜಾಗ್ವಾರ್ ಸದ್ದು ಮಾಡಿದ್ದರ ಸಾಲಿನಲ್ಲಿ ಅದರ ನಿರ್ದೇಶಕರು ಇದ್ದರು. ಹೆಸರು ಮಹದೇವ್. ಹೆಸರಾಂತ ನಿರ್ದೇಶಕ ರಾಜಮೌಳಿ ಶಿಷ್ಯ. ‘ಬಾಹುಬಲಿ’ ಗೆ ಸಹಾಯಕ ನಿರ್ದೇಶಕ ಆಗಿದ್ದರು. ಅಲ್ಲಿ ಪಳಗಿದ ಅನುಭವದಲ್ಲಿಯೇ ‘ಜಾಗ್ವಾರ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರಂತೆ.

5) ನಿಖಿಲ್ ಜತೆಗೆ ನಾಯಕಿ ಆಗಿ ಕಾಣಿಸಿಕೊಂಡವರು ಮಲಯಾಳಂ ಮೂಲದ ದೀಪ್ತಿ ಸತಿ. ಅವರ ಜತೆಗೆ ರಮ್ಯಾಕೃಷ್ಣ, ಜಗಪತಿ ಬಾಬು, ಆದಿತ್ಯಾ ಮೆನನ್, ಸಂಪತ್ ರಾಜ್‌ಸೇರಿದಂತೆ ಟಾಲಿವುಡ್‌ನ ಅನುಭವಿ ತಂಡವೇ ಇಲ್ಲಿದೆ. ಹಾಗಂತ ಇವರೇನು ಕನ್ನಡಕ್ಕೆ ಅಪರಿಚಿತರಲ್ಲ. ಕನ್ನಡದ ಮೂಲಕವೂ ಪರಿಚಯವಾದ ಮುಖಗಳೇ. ಅವರ ಜತೆಗೆ, ಭಜರಂಗಿ ಲೋಕಿ ಇದ್ದಾರೆ. ತಮನ್ನಾ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

6) ಜಾಗ್ವಾರ್ ತಂಡ ಮೈಸೂರ ಅರಮನೆ ಆವರಣದಿಂದ ದೂರದ ಬಲ್ಗೇರಿಯಾದ ತನಕ ಸುತ್ತು ಹಾಕಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು ಅರಮನೆ ಆವರಣದಲ್ಲಿ ನಡೆದಿದೆ. ಅಲ್ಲಿನ ಅದ್ಧೂರಿ ಸೆಟ್ ಇಲ್ಲಿನ ಪ್ರಮುಖ ಆಕರ್ಷಣೆ. ಹಾಗೆಯೇ ಮೈಸೂರಿನ ಇನ್ಪೋಸಿಸ್ ಆವರಣ ಚಿತ್ರವೊಂದರ ಕ್ಯಾಮೆರಾಕ್ಕೆ ಸೆರೆಸಿಕ್ಕಿದ್ದು ಇದೇ ಮೊದಲು. ಅಲ್ಲಿಂದ ಚೇಸಿಂಗ್ ಸನ್ನಿವೇಶಗಳು ಬಲ್ಗೇರಿಯಾದಲ್ಲಿ ಚಿತ್ರೀಕರಣಗೊಂಡಿವೆ. ಭಾರತೀಯ ಸಿನಿಮಾ ಮಟ್ಟಿಗೆ ಇಲ್ಲಿ ಚಿತ್ರೀಕರಣಗೊಂಡ ಕೆಲವೇ ಕೆಲವು ಚಿತ್ರಗಳಲ್ಲಿ ಜಾಗ್ವಾರ್ ಕೂಡ ಒಂದು ಎನ್ನುವ ಹೆಗ್ಗಳಿಕೆಯಿದೆ.

7) ಆ್ಯಕ್ಷನ್ ಆ್ಯಂಡ್ ಚೇಸಿಂಗ್ ಈ ಚಿತ್ರದ ಮತ್ತೊಂದು ವಿಶೇಷ. ಬಲ್ಗೇರಿಯಾದಲ್ಲಿ ಚಿತ್ರೀಕರಿಸಿದ ಫೈಟಿಂಗ್, ಸ್ಮಾಶಿಂಗ್ ಆ್ಯಂಡ್ ಚೇಸಿಂಗ್ ಎಲ್ಲವೂ ಇಲ್ಲಿ ಕುತೂಹಲಕಾರಿ. ಅಲ್ಲಿನ ಜನಪ್ರಿಯ ಸಾಹಸ ನಿರ್ದೇಶಕ ಕಾಲಾಯೋನ್ ವೊಡೆಂಚಿರಾವ್ ಅವರ ನೇತೃತ್ವದಲ್ಲಿಯೇ ಈ ದೃಶ್ಯಗಳನ್ನು ಸಂಯೋಜಿಸಿಕೊಂಡು ಬರಲಾಗಿದೆಯಂತೆ. ಇಷ್ಟಕ್ಕೂ ಈ ಕಲಾಯೋನ್ ಅಂದ್ರೆ ಯಾರು? ಹಾಲಿವುಡ್ ಮಟ್ಟಿಗೆ ಇವರದ್ದು ದೊಡ್ಡ ಹೆಸರು.‘ ಗೆಟ್ ಅವೆ’, ‘ಕಿಲ್ಲಿಂಗ್ ಸೀಸನ್’, ‘ಅಸಾಸಿನ್ಸ್ ಬುಲೆಟ್’, ‘ದಿ ಫಾರಿನರ್’ ನಂತಹ ಹಾಲಿವುಡ್‌ನ ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಅವರದ್ದೇ. ಅಷ್ಟೇ ಅಲ್ಲ ಶಾರುಖ್ ಖಾನ್ ಅಭಿನಯದ ದಿಲ್‌ವಾಲೆ ಚಿತ್ರದಲ್ಲೂ ಸಾಹಸ ನಿರ್ದೇಶನ ಕೈ ಚಳಕ ಅವರದ್ದೇ ಇತ್ತು. ಈಗ ಜಾಗ್ವಾರ್‌ನ ಸರದಿ.

8) ಚಿತ್ರದಲ್ಲಿ ಗಮನ ಸೆಳೆದಿದ್ದು ಮನೋಜ್ ಪರಮಹಂಸ ಅವರ ಛಾಯಾಗ್ರಹಣ. ಮೂಲತ: ಇವರು ಚೆನ್ನೈನವರು. ಮೊದಲ ಚಿತ್ರದಲ್ಲಿ ಅವರ ಕ್ಯಾಮೆರಾ ಕೈಚಳಕಕ್ಕೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಟೆಕ್ನಿಕಲಿ ತುಂಬಾನೆ ಫಾಸ್ಟ್ ಎನ್ನುವ ಖ್ಯಾತಿಯ ಮೂಲಕ ಹೆಸರಾಂತ ನಿರ್ದೇಶಕರ ಜತೆಗೆ ಕೆಲಸ ಮಾಡಿದ ಹೆಗ್ಗಳಿಕೆ ಅವರದ್ದು. ಬಲ್ಗೇರಿಯಾದಲ್ಲಿನ ಚೇಸಿಂಗ್ ಸನ್ನಿವೇಶಗಳಿಗೆ ಅವರು, ಸುಮಾರು ಎರಡು ಸಾವಿರ ತಂತ್ರಜ್ಞರು, 4 ಫ್ಲೈ ಕ್ಯಾಮ್‌ಗಳು, 12 ಕ್ಯಾಮೆರಾಗಳನ್ನು ಬಳಸಿಕೊಂಡಿದ್ದು ಕನ್ನಡಕ್ಕೇ ಮೊದಲು ಎನ್ನುವ ಮಾತುಗಳಿವೆ.

9) ಜೂಮ್, ಚಕ್ರವ್ಯೆಹ ಚಿತ್ರಗಳ ನಂತರ ತಮನ್ ಸಂಗೀತ ನೀಡಿರುವ ಚಿತ್ರ ಜಾಗ್ವಾರ್. ಹಾಡುಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ತಮನ್ನಾ ಕಾಣಿಸಿಕೊಂಡ ಐಟಂ ಸಾಂಗ್‌ನ ಗಮತ್ತು ತೆರೆಯಲ್ಲಿ ಕಾಣುವ ತವಕ ಸಿನಿರಸಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಹಾಗೆಯೇ ರುಬಿನ್ ಅವರ ಕತ್ತರಿ ಪ್ರಯೋಗವು ಕುತೂಹಲ ಕೇಂದ್ರ ಬಿಂದು.

10) ಆ್ಯಕ್ಷನ್ ಓಕೆ, ಡ್ಯಾನ್ಸ್ ಓಕೆ ನಿಖಿಲ್ ಅವರ ನಟನೆ ಹೇಗೆ? ಇದು ‘ಜಾಗ್ವಾರ್’ ಚಿತ್ರದ ಬಗೆಗಿರುವ ಕೊನೆಯ ನಿರೀಕ್ಷೆ. ನಿಖಿಲ್ ಅಭಿನಯದ ಮೊದಲ ಚಿತ್ರವಿದು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಸಿನಿಮಾ ಜಗತ್ತಿಗೆ ಎಂಟ್ರಿಯಾದ ಮೊದಲ ಕುಡಿ. ರಾಜಕೀಯವಾದ್ರೆ ರಕ್ತಗತವಾಗಿ ಬಂದ ಕಲೆ ಅದು. ಸಿನಿಮಾ ಅಂದ್ರೆ ಹೊಸತು. ಅದನ್ನು ನಿಖಿಲ್ ಹೇಗೆ ನಿಭಾಯಿಸಬಹುದು?

Follow Us:
Download App:
  • android
  • ios