ಕಿರುತೆರೆಯಲ್ಲೇ ಬಹು ಜನಪ್ರಿಯ ಹಾಗೂ ಪ್ರಿಡಿಕ್ಟ್ ಮಾಡಬಹುದಾದ ರಿಯಾಲಿಟಿ ಶೋ ಬಿಗ್ ಬಾಸ್! ಎಲ್ಲ ಭಾಷೆಗಳಲ್ಲಿಯೂ ಈ ಕಾರ್ಯಕ್ರಮ ಪ್ರಸಿದ್ಧಿ ಪಡೆಯುತ್ತಿದೆ. ಕನ್ನಡದಲ್ಲಿ ಈಗಾಗಲೇ 6ನೇ ಸೀಸನ್ ಮುಗಿದರೆ, ತೆಲುಗಿನಲ್ಲಿ 3ನೇ ಸೀಸನ್ ಆರಂಭವಾಗಲು ವೇದಿಕೆ ಸಜ್ಜಾಗುತ್ತಿದೆ.

ಹಿಂದಿ ಅವತರಿಣಿಕೆಯ ಬಿಗ್‌ಬಾಸ್‌ನ ಎಲ್ಲ ಸೀಸನ್‌ನಲ್ಲಿಯೂ ಸಲ್ಮಾನ್ ಖಾನ್ ಹೋಸ್ಟ್ ಆಗಿ ಕಾರ್ಯನಿರ್ವಹಿಸಿದರೆ, ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೇ ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ತೆಲುಗಿನಲ್ಲಿ ಮಾತ್ರ ಇದು ಬದಲಾಗುತ್ತಿದ್ದು, ಮೊದಲ ಸೀಸನ್‌ನಲ್ಲಿ ಜೂ.ಎನ್‌ಟಿಆರ್ ನಿರೂಪಿಸಿ, ಕಾರ್ಯಕ್ರಮವನ್ನು ಪ್ರಸಿದ್ಧವಾಗುವಂತೆ ನೋಡಿಕೊಂಡಿದ್ದರು. ಎರಡನೇ ಸೀಸನ್‌ ಅನ್ನು ನಾನಿ ಅಲಿಯಾಸ್ ನವೀನ್ ಬಾಬು ನಡೆಸಿ ಕೊಟ್ಟಿದ್ದರು.

3ನೇ ಸೀಸನ್ ಶುರು:
ಇದೀಗ ಮತ್ತೆ ತೆಲುಗಿನ ಬಿಗ್‌ಬಾಸ್ 3ನೇ ಸೀಸನ್ ಆರಂಭವಾಗುತ್ತಿದ್ದು, ಪ್ರೋಮೋ ಶೂಟಿಂಗ್ ಆಗಿದೆ. ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸ್ಟಾರ್ ಮಾ ವಾಹಿನಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಮೊದಲನೇ ಕಾರ್ಯಕ್ರಮ ಬಿಗ್ ಹಿಟ್ ಆಗಿತ್ತು. ಆದರೆ, 2ನೇ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ಜೂ.ಎನ್‌ಟಿಆರ್ ನಿರಾಕರಿಸಿದರು. ಆದರೆ, ಇದೀಗ ಮೂರನೇ ಸೀಸನ್‌ನಲ್ಲಿ ಅವರು ಮತ್ತೆ ತಮ್ಮ ಕಮಾಲ್ ತೋರಿಸಲು ಮುಂದಾಗಿದ್ದು, ಬರೋಬ್ಬರಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿ ಇದೆ. ಮೊದಲನೇ ಸೀಸನ್‌ಗಿಂತಲೂ 6 ಕೋಟಿ. ರೂ ಹೆಚ್ಚಿನ ಮೊತ್ತವಿದು ಎಂದು ಹೇಳಲಾಗುತ್ತಿದೆ.

ಅರಮನೆಯಂತಿರುವ ಸೆರೆಮನೆಯಲ್ಲಿ 100 ದಿನಗಳ ಆಟ ಆಡಲು ಯಾರು ಯಾರು ಹೋಗುತ್ತಾರೋ ಕಾದು ನೋಡಬೇಕು.