. ಅದೃಷ್ಟವಶಾತ್ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮೇಲೆ ಅತ್ಯಾಚಾರವಾಗುವುದು ತಪ್ಪಿತು.

ಹೈದರಾಬಾದ್(ಆ.17): ತನ್ನ ಮೇಲೆ ತೆಲುಗು ನಟ ಸೃಜನ್ ಹಾಗೂ ನಿರ್ಮಾಪಕ ಚಲಪತಿ ರಾವ್ ಅತ್ಯಾಚಾರಕ್ಕೆ ಯತ್ನಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿದ ನಟ ಹಾಗೂ ನಿರ್ಮಾಪಕ ಆಗಸ್ಟ್ 13ರಂದು ಮೊದಲು ನನಗೆ ರೈಲಿನಲ್ಲಿ ಭೀಮಾವರಂ'ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಆದರೆ ನಂತರ ಕಾರಿನಲ್ಲಿ ಹೋಗೋಣವೆಂದರು. ಕಾರು ವಿಜಯವಾಡ ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ಇಬ್ಬರು ಮುಟ್ಟಲು ಹಾಗೂ ಲೈಂಗಿಕವಾಗಿ ಅಸಭ್ಯ ವರ್ತನೆ ಮಾಡಲು ಶುರು ಮಾಡಿದರು.

ಅಲ್ಲದೆ ನಾನು ತಪ್ಪಿಸಿಕೊಂಡು ಹೋಗಬಾರದೆಂದು ಕಾರಿನ ಹಿಂಬದಿಯಲ್ಲಿ ಕೂರಿಸಿ ವೇಗವಾಗಿ ಚಾಲನೆ ಮಾಡಲು ಶುರು ಮಾಡಿದರು. ಅದೃಷ್ಟವಶಾತ್ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮೇಲೆ ಅತ್ಯಾಚಾರವಾಗುವುದು ತಪ್ಪಿತು. ಗಾಯಗೊಂಡ ನಂತರ ನಾನು ನನ್ನ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿದೆ. ಅವರು ಬಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದರು.

ಅತ್ಯಾಚಾರಕ್ಕೆ ಯತ್ನಿಸಿದ್ದ ಬಗ್ಗೆ ಯಾರಿಗೂ ತಿಳಿಸಬಾರದೆಂದು ನನ್ನ ಮೇಲೆ ಬೆದರಿಕೆ ಒಡ್ಡಿದ್ದರು. ಆದರೆ ನಾನು ಇದಕ್ಕೆ ಜಗ್ಗದೆ ಪೊಲೀಸರಿಗೆ ದೂರು ನೀಡಿದೆ ಎಂದು ನಟಿ ತಿಳಿಸಿದ್ದಾರೆ. ಪ್ರಕರಣದ ಸಂಬಂಧ ನಿರ್ಮಾಪಕನನ್ನು ಬಂಧಿಸಲಾಗಿದ್ದು, ನಟ ತಲೆತಪ್ಪಿಸಿಕೊಂಡಿದ್ದಾನೆ.