ಮುಂಬೈ :  ಮಾಜಿ ಮಿಸ್ ಇಂಡಿಯಾ ಯೂನಿವರ್ಸ್ ಹಾಗೂ ಆಶಿಕ್ ಬನಾಯಾ ಅಪ್ನೇ ಖ್ಯಾತಿಯ ತನುಶ್ರೀ ದತ್ತಾ ನಾನಾ ಪಾಟೇಕರ್  ದೌರ್ಜನ್ಯದ  ವಿಚಾರ ಬಿಚ್ಚಿಡುತ್ತಿದ್ದಂತೆ ಇದೀಗ ಮತ್ತೊಮ್ಮೆ, ಚಿತ್ರರಂಗದಲ್ಲಿ ತಾವು ಎದುರಿಸಿದ ದೌರ್ಜನ್ಯಗಳ ಬಗ್ಗೆ  ಮಾಹಿತಿ ಹೊರಚೆಲ್ಲಿದ್ದಾರೆ. 

ಹಾರ್ನ್ ಓಕೆ ಪ್ಲೀಸ್ ಚಿತ್ರದಲ್ಲಿ ನಟಿಸಿದ ತನುಶ್ರೀ ದತ್ತಾ ಚಿತ್ರದ ಸೆಟ್ ನಲ್ಲಿ ತಾವು ಎದುರಿಸಿದ ದೌರ್ಜನ್ಯವನ್ನು ಬಹಿರಂಗ ಮಾಡಿದ್ದಾರೆ. 

ನಾನಾಪಾಟೇಕರ್ ದೌರ್ಜನ್ಯ ಎಸಗುವ ಇತಿಹಾಸವನ್ನೇ ಹೊಂದಿದ್ದಾರೆ ಎಂದು ಹೇಳಿದ ಆಕೆ ಹಾರ್ನ್ ಓಕೆ ಚಿತ್ರದ ನಿರ್ದೇಶಕ ರಾಕೇಶ್ ಸರಂಗ್, ನಿರ್ಮಾಪಕ ಸಮಿ ಸಿದ್ದಿಕಿ ತಮ್ಮ ಮೇಲೆ ಸೆಟ್ ನಲ್ಲಿಯೇ ದೌರ್ಜನ್ಯ  ಎಸಗಿದ್ದರು ಎಂದು ಹೇಳಿಕೊಂಡಿದ್ದಾರೆ.  

2005ರಲ್ಲಿ ಚಾಕೋಲೇಟ್ ಡೀಪ್ ಡಾರ್ಕ್ ಸೀಕ್ರೇಟ್ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಕೂಡ  ಡಿಎನ್ ಎ ಗೆ ನೀಡಿದ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. 

ಇರ್ಫಾನ್ ಖಾನ್ ಅವರೊಂದಿಗಿನ ದೃಶ್ಯವೊಂದರಲ್ಲಿ ನಟಿಸುವ ವೇಳೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಟ್ಟೆಯನ್ನು ಬಿಚ್ಚಿ ನೃತ್ಯ ಮಾಡುವಂತೆ ಹೇಳಿದ್ದರು. ಆದರೆ ಈ ವೇಳೆ ಇರ್ಫಾನ್ ಖಾನ್ ನಿರ್ದೇಶಕರನ್ನು ತಡೆದಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ನನ್ನ ಸಹನಟರಾಗಿದ್ದ ಸುನಿಲ್ ಶೆಟ್ಟಿ ಅವರೂ ಕೂಡ ತಮ್ಮ ಬೆಂಬಲಕ್ಕೆ ನಿಂತಿದ್ದರು ಎಂದು  ಹೇಳಿದ್ದಾರೆ. 

 ಮೀ ಟೂ ಅಭಿಯಾನದ ಮೂಲಕ ಬಹಿರಂಗವಾಗಲು ಆರಂಭವಾದ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿಚಾರ ಇದೀಗ ಸಾಕಷ್ಟು ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದೆ.  ಇದೀಗ ತನುಶ್ರೀ ಅನೇಕರ ಬಗ್ಗೆ  ಸತ್ಯ ಬಿಚ್ಚಿಟ್ಟಿದ್ದಾರೆ.