ವೇಗ ಮತ್ತು ಸರಾಗವಾಗಿ ಪ್ರಯಾಣಿಸುವ  ಹೈವೈ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ಸ್ಪೀಡ್ ಬ್ರೇಕರ್‌ನಂತೆ, ನಡುರಾತ್ರಿ ಕಾಡಿನ ಮೌನ ಹುಟ್ಟಿಸುವ ಭಯದಂತೆ, ಸಂತೆಯಲ್ಲಿ ದಾರಿ ತಪ್ಪಿದ ಮಗುವಿಗೆ ಅಮ್ಮ ಎದುರಾದಾಗ ಬರುವ ಕಿರು ನಗೆಯಂತೆ, ಸೂಚನೆಯೇ ಕೊಡದೆ ಕೆಂಡಗಳನ್ನು ಹೊತ್ತು ಉರಿಯುವ ಜ್ವಾಲಾಮುಖಿಯಂತೆ...! 

ಬೆಂಗಳೂರು (ಫೆ.24): ವೇಗ ಮತ್ತು ಸರಾಗವಾಗಿ ಪ್ರಯಾಣಿಸುವ ಹೈವೈ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ಸ್ಪೀಡ್ ಬ್ರೇಕರ್‌ನಂತೆ, ನಡುರಾತ್ರಿ ಕಾಡಿನ ಮೌನ ಹುಟ್ಟಿಸುವ ಭಯದಂತೆ, ಸಂತೆಯಲ್ಲಿ ದಾರಿ ತಪ್ಪಿದ ಮಗುವಿಗೆ ಅಮ್ಮ ಎದುರಾದಾಗ ಬರುವ ಕಿರು ನಗೆಯಂತೆ, ಸೂಚನೆಯೇ ಕೊಡದೆ ಕೆಂಡಗಳನ್ನು ಹೊತ್ತು ಉರಿಯುವ ಜ್ವಾಲಾಮುಖಿಯಂತೆ...! 

ಸೂರಿ ಮತ್ತು ಶಿವರಾಜ್‌ಕುಮಾರ್ ಕಾಂಬಿನೇಷನ್‌ನ ‘ಟಗರು’ ಚಿತ್ರ ಹೇಗಿದೆ ಎಂದರೆ ಈ ಮೇಲಿನಂತೆ ವರ್ಣಿಸಬಹುದು. ಇನ್ನೂ ಬೇಕು ಅಂದರೆ ಉದುರಿ ಹೋದ ಎಲೆ, ಸತ್ತು ಬಿದ್ದ ದೇಹ, ಹರಿಯುತ್ತಿರುವ ನೆತ್ತರು, ನಗುತ್ತಿರುವ ಖಾಕಿ, ಬಾಳೆ ಗಿಡಗಳಂಥ ಹುಡುಗಿಯರು, ಅವುಗಳನ್ನು ತುಳಿಯುವ ಮದವೇರಿದ ಆನೆಗಳಂತೆ ರಾಜಾ ರೋಷವಾಗಿ ಓಡಾಡಿಕೊಂಡಿರುವ ರೌಡಿಗಳು, ಪದೇ ಪದೇ ದೀಪಾವಳಿ ಆಚರಿಸುವ ಪಿಸ್ತೂಲು, ಬುಲ್ಲೆಟ್ ಸದ್ದು, ರಕ್ತ ಕೊಲೆಯ ಕುರುಹೋ, ಕಲೆಯೋ ಎಂದು ಉದಾತ್ತ ಯೋಚನೆಗೆ ದಾರಿ ಮಾಡಿಕೊಡುವ ಡೈಲಾಗ್’ ಗಳು, ಇವೆಲ್ಲವನ್ನೂ ಶಾಟ್ ಬೈ ಶಾಟ್ ನೋಡುಗನ ಮುಂದಿಡುವ ಛಾಯಾಗ್ರಾಹಕನ ಕ್ಯಾಮೆರಾ ಕಣ್ಣಿನ ಪವರ್- ಇವಿಷ್ಟನ್ನು ಇಡೀ ಸಿನಿಮಾ ಉದ್ದಕ್ಕೂ ನೀವು ನೋಡಬಹುದು. ಇದೆಲ್ಲದಕ್ಕೂ ಗಾಡ್‌’ಫಾದರ್‌ನಂತೆ ಆವರಿಸಿಕೊಳ್ಳುವ ಕತ್ತಲು. ಪೊಲೀಸ್ ಪಿಸ್ತೂಲು ಜತೆಗೆ ಪಾಪಿಗಳ ಲೋಕದ ಲಾಂಗು ಸೇರಿಕೊಂಡರೇ ಏನೆಲ್ಲ ಆಗುತ್ತದೆ ಎಂಬುದನ್ನು ತಮ್ಮದೇ ಹೊಸ ದುನಿಯಾ ಎನ್ನುವಷ್ಟರ ಮಟ್ಟಿಗೆ ಪ್ರಭಾವಿಯಾಗಿ ಕಟ್ಟಿಕೊಡುತ್ತಾರೆ ನಿರ್ದೇಶಕ ಸೂರಿ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದು ಸೂರಿ ನಂಬಿಕೆ. ಹೀಗಾಗಿ ಅವರು ರೌಡಿಗಳನ್ನು ಮಟ್ಟ ಹಾಕುವುದಕ್ಕೆ ಪೊಲೀಸ್ ಅಧಿಕಾರಿ ಕೈಗೆ ಮಚ್ಚು ಕೊಡುತ್ತಾರೆ.

ರೌಡಿಗಳನ್ನು ಮೀರಿಸುವ ಡಾನ್ ಆಗುತ್ತಾರೆ ಪೊಲೀಸ್. ಟಗರುವಿನ ಪೊಗರು, ಪೊಲೀಸ್ ಅಧಿಕಾರಿಯ ಕ್ರಿಮಿನಲ್ ಮೈಂಡ್ ಸೇರಿಕೊಳ್ಳುವಷ್ಟರಲ್ಲಿ ‘ಟಗರು ಬಂತು ಟಗರು...’ ಎಂದು ಕೂತಲ್ಲೇ ಕುಣಿಸುವ ಪ್ರಯತ್ನ ಮಾಡುತ್ತದೆ ಚಿತ್ರ. ಆದರೆ, ಸೂರಿ ಅವರದ್ದು ಮಾಮೂಲು ನಿರೂಪಣೆ ಅಲ್ಲ. ಅವರು ಕೊನೆಯಲ್ಲಿ ಬರಬೇಕಾದ ದೃಶ್ಯದಿಂದ ಸಿನಿಮಾ ಶುರು ಮಾಡಿ, ವಿರಾಮವನ್ನು ಮತ್ತೆಲ್ಲೋ ಹಾಕಿ ಅದಕ್ಕೊಂದು ಕತೆ ಹೇಳಿ ಮತ್ತೆಲ್ಲಿಗೋ ಕರೆದುಕೊಂಡು ಹೋಗಿ ದಿಡೀರ್ ಅಂತ ಹೊಸ ಪಾತ್ರವನ್ನು ಎಂಟ್ರಿ ಮಾಡಿಸುವಾಗ ‘ಏನಾಗುತ್ತಿದೆ ಇಲ್ಲಿ?’ ಎನ್ನುವ ಹೊತ್ತಿಗೆ ಒಂದು ಭಾವುಕತೆ ಎಳೆಯನ್ನೋ, ಹಾಡಿನ ಸಾಲನ್ನೋ ತಂದು ಜೋಡಿಸಿ ನೋಡುಗನನ್ನು ಎಚ್ಚರಿಸುತ್ತಾರೆ. ಈ ಕಾರಣಕ್ಕೆ ಇದ್ಯಾಕೆ ಇಲ್ಲಿಗೆ ಬಂತು, ಆ ಕ್ಯಾರೆಕ್ಟರ್ ಯಾಕೆ ಒಂಥರಾ ಇದೆ, ಯಾಕೋ ಹೇಳಿದ್ದನ್ನೇ ಹೇಳುತ್ತಿದ್ದಾರಲ್ಲ ಎಂದು ಪ್ರಶ್ನೆಗಳನ್ನು ಕೇಳಬಾರದು. ಸುಮ್ಮನೆ ಕುತೂಹಲವನ್ನು ಕಾಯ್ದುಕೊಂಡು ನೋಡಬೇಕು ಅಷ್ಟೆ. ಹಾಗೆ ನೋಡಿದರೆ ಮಾತ್ರ ‘ಟಗರು’ ನಿಮ್ಮಿಷ್ಟದ ಸಿನಿಮಾ ಆಗುವ ಸಾಧ್ಯತೆಗಳಿವೆ. ಕಾನೂನು, ಪೊಲೀಸ್, ಸಮಾಜ ಯಾವುದರ ಭಯವೂ ಇಲ್ಲದೆ ಮೆರೆಯುವ ರೌಡಿಗಳನ್ನು, ಮತ್ತವರ ಪಾಪ ಕೃತ್ಯಗಳನ್ನು ಕಾನೂನು ಮೂಲಕ ನಿವಾರಿಸುವುದು ಸಾಧ್ಯವಿಲ್ಲ ಎಂದಾಗ ಒಬ್ಬ ಪೊಲೀಸ್ ಏನು ಮಾಡುವುದಕ್ಕೆ ಸಾಧ್ಯ? ಪ್ರಾಮಾಣಿಕ ಅಧಿಕಾರಿ, ಖಡಕ್ ಆಗಿದ್ದರೂ ಮಾನವೀಯತೆಗೆ ಮಿಡಿಯುವ ವ್ಯಕ್ತಿತ್ವದ ಪೊಲೀಸ್ ತಾನು ಪೊಲೀಸ್ ಅನ್ನೋದನ್ನು ಮರೆತು ರೌಡಿಗಳ ಅಡ್ಡೆಗೆ ಹೇಗೆ ನುಗುತ್ತಾರೆ ಎಂಬುದೇ ‘ಟಗರು’ ಚಿತ್ರದ ಒಂದು ಸಾಲಿನ ಕತೆ. ಇಲ್ಲಿ ಮಾತು ಕಡಿಮೆ, ಹೆಚ್ಚು ದುಡಿಮೆ. ನಾಯಕ ಸೇರಿದಂತೆ ಯಾವ ಪಾತ್ರಕ್ಕೂ ಅನಗತ್ಯ ಬಿಲ್ಡಪ್ ಮಾತುಗಳಿಲ್ಲ. ಕೆಲವೇ ಆದರೂ ಮಾಸ್ತಿ ಸಂಭಾಷಣೆಗಳು ನೆನಪಿನಲ್ಲಿ ಉಳಿಯುತ್ತವೆ. 

ತಾನೊಬ್ಬ ಸ್ಟಾರ್ ನಟ ಎಂಬುದನ್ನು ಮರೆತು ಶಿವಣ್ಣ ನಟಿಸಿದ್ದಾರೆ. ಧನಂಜಯ್ ಅವರ ಡಾಲಿ ಪಾತ್ರದ ಹವಾ, ವಸಿಷ್ಠ ಸಿಂಹ ಅವರ ಖಡಕ್ ವಾಯ್ಸ್, ಸುಧೀರ್ ಅವರ ಕಾಕ್ರೋಚ್ ಲುಕ್ ಚಿತ್ರದ ಹೈಲೈಟ್. ಒಂದು ಹಂತದಲ್ಲಂತೂ ಶಿವಣ್ಣ ಮುಂದೆ ‘ನೀನಾ? ನಾನಾ?’ ಎನ್ನುವ ಮಟ್ಟಿಗೆ ಧನಂಜಯ್‌ರ ಡಾಲಿ ಪಾತ್ರ ತಣ್ಣಗೆ ಗರ್ಜಿಸುತ್ತದೆ. ಸೂರಿ ಅವರ ಈ ಎಲ್ಲ ಸಾಹಸಗಳಿಗೆ ಬೆನ್ನೆಲುಬಾಗಿ ನಿಲ್ಲುವುದು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ, ನೆರಳು ಬೆಳಕಿನ ವಿನ್ಯಾಸ, ಚರಣ್ ರಾಜ್ ಸಂಗೀತ ಮತ್ತು ಸಂಕಲನಕಾರನ ಶ್ರಮ ಹಾಗೂ ಪ್ರತಿಭೆ. ಈ ಹಿಂದೆಯೇ ಕತ್ತಲ ಲೋಕದಲ್ಲಿ ಅರಳಿದ ಸೂರಿಯವರದ್ದೇ ದುನಿಯಾ, ಜಂಗ್ಲಿ , ಕಡ್ಡಿಪುಡಿ, ಕೆಂಡಸಂಪಿಗೆ ಚಿತ್ರಗಳ ಮತ್ತೊಂದು ಕೊಲಾಜ್ ‘ಟಗರು’. 

ವಿಮರ್ಶೆ: ಕೇಶವಮೂರ್ತಿ