ಶಿವಣ್ಣ ಜೊತೆ ಕೆಲಸ ಮಾಡಿದ ಅನುಭವವನ್ನು ಟಗರು ಚಿತ್ರದ ನಾಯಕಿ ಹೇಳುವುದು ಹೀಗೆ

Tagaru Film Actress Manvitha Harish Interview With Kannada Prabha
Highlights

ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್‌ನ ಬಹುನಿರೀಕ್ಷೆಯ ‘ಟಗರು’ ಚಿತ್ರದ ನಾಯಕಿ ಮಾನ್ವಿತಾ ಹರೀಶ್ ಜೊತೆ ಮಾತುಕತೆ.

ಬೆಂಗಳೂರು (ಫೆ.21): ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್‌ನ ಬಹುನಿರೀಕ್ಷೆಯ ‘ಟಗರು’ ಚಿತ್ರದ ನಾಯಕಿ ಮಾನ್ವಿತಾ ಹರೀಶ್ ಜೊತೆ ಮಾತುಕತೆ.

‘ಟಗರು’ ಬಿಡುಗಡೆ...
ಎಕ್ಸೈಟ್ ಆಗಿದ್ದೇನೆ. ನಮಗಿಂತ ಅಭಿಮಾನಿಗಳಲ್ಲಿಯೇ ಈ ಚಿತ್ರದ ಬಿಡುಗಡೆಯ ಕಾತರ ಎರಡು ಪಟ್ಟು ಇದೆ. ಅದಕ್ಕೆ ತಕ್ಕಂತೆ ಸಿನಿಮಾ ತೆರೆ ಮೇಲೆ ಬಂದಿದೆ ಎನ್ನುವ ವಿಶ್ವಾಸವಿದ್ದರೂ ಹೇಗೋ ಏನೋ ಎನ್ನುವ ಭಯ ನಮಗೂ ಕಾಡುತ್ತಿದೆ.

ಟಗರು’ ಸಿನಿಮಾಕ್ಕೆ ನೀವು ಆಯ್ಕೆಯಾಗಿದ್ದು ಹೇಗೆ?
ಸೂರಿ ಸರ್ ಅವರ ಆಫೀಸ್‌ಗೆ ನಾನು ಒಂದು ದಿನ ಹೋಗಿದ್ದೆ. ಚಿಕ್ಕದಾಗಿ ನನ್ನ ಪಾತ್ರದ ಬಗ್ಗೆ ವಿವರ ನೀಡಿದರು. ಆನಂತರ ‘ಟಗರು’ ಚಿತ್ರದಲ್ಲಿ ನಾಯಕಿ ಪಾತ್ರ ಮಾಡ್ತಿಯಾ ಎಂದು ಸೂರಿ ಸರ್ ಕೇಳಿದರು. ಆಗ, ‘ಏನ್ ಸರ್, ತಮಾಷೆ ಮಾಡ್ತಾ ಇದೀರಾ ’ಎಂದೇ ನಾನು ಅವರಲ್ಲಿ ಕೇಳಿದ್ದೆ. ಆಮೇಲೆ ನಾನು ಚಿತ್ರದ ನಾಯಕಿ ಎಂದು ನಿಜವಾಗಿ ತಿಳಿದ ಮೇಲೆ ತುಂಬ ಖುಷಿಯಾಯಿತು.

ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ಪಟಪಟ ಅಂತ ಮಾತನಾಡುವ ಎನರ್ಜಿಟಿಕ್ ಹುಡುಗಿ. ‘ಕೆಂಡಸಂಪಿಗೆ’ಯಲ್ಲೇ ನನ್ನ ನಟನೆ ಸಾಮರ್ಥ್ಯದ ಬಗ್ಗೆ ನಿರ್ದೇಶಕರಿಗೆ ತಿಳಿದಿತ್ತು. ಶಿವರಾಜ್‌ಕುಮಾರ್ ಅವರ ಎದುರು ಪಾತ್ರವನ್ನು ನಿಭಾಯಿಸುವಂತಹ ಕಲಾವಿದೆ ಅವರಿಗೆ ಬೇಕಾಗಿತ್ತು. ಬಹುಶಃ ಅದಕ್ಕಾಗಿ ನನ್ನನ್ನು ಆಯ್ಕೆ ಮಾಡಿರಬಹುದು. ನನ್ನ ಪಾತ್ರಕ್ಕೆ ತುಂಬ ಆಟಿಟ್ಯೂಡ್ ಇರುತ್ತದೆ. ನಶೆಯಲ್ಲಿ ಇದ್ರೇನೆ ಮಜಾ ಎಂಬಂತಹ ಮನಸ್ಥಿತಿಯ ಹುಡುಗಿ ಪಾತ್ರ. ನಿರ್ದೇಶಕ ಸೂರಿ ಜತೆಗಿದು ಎರಡನೇ ಚಿತ್ರ. 

ಮೊದಲ ಚಿತ್ರಕ್ಕೂ ಇದಕ್ಕೂ ಏನಾದ್ರು ವ್ಯತ್ಯಾಸ ಕಂಡಿದ್ದೀರಾ?
ಅವರ ಕೆಲಸದಲ್ಲಿ ನಾನು ಯಾವುದೇ ಬದಲಾವಣೆ ನೋಡಿಲ್ಲ. ಕೆಲಸದ ವಿಚಾರದಲ್ಲಿ ಅವರು ಯಾವುದಕ್ಕೂ ರಾಜೀ ಆಗೋದಿಲ್ಲ. ಕೆಲಸ ಮಾಡುವಾಗ ಅವರು ಅವರಾಗಿರೋದಿಲ್ಲ. ಸೆಟ್‌ನಲ್ಲಿ ಅವರನ್ನು ನೋಡಿದ್ರೆ ಭಯವಾಗುತ್ತೆ. ಮೊದಲ ಚಿತ್ರಕ್ಕೆ ಹೋಲಿಸಿದರೆ, ಈ ಚಿತ್ರದಲ್ಲಿ ಸ್ವಲ್ಪ ಜಾಸ್ತಿಯೇ ಬೈದಿದ್ದಾರೆ.

ಶಿವರಾಜ್‌ಕುಮಾರ್ ಎದುರು ನಟಿಸುವುದು ಚಾಲೆಂಜ್ ಎನಿಸಿತ್ತಾ?
ಶಿವಣ್ಣ ಅವರಿಗಿರುವ ಸಿನಿಮಾ ಅನುಭವದ ಮುಂದೆ ನಾವು ಏನು ಅಲ್ಲ. ಅವರ ಎದುರು ನೂರಲ್ಲ ನಾವು 200 ರಷ್ಟು ಶ್ರಮ ಹಾಕಿ ಕೆಲಸ ಮಾಡಬೇಕು. ಅಷ್ಟು ಫಾಸ್ಟ್ ಟಗರು ಚಿತ್ರೀಕರಣದಲ್ಲಿ ಸೂರಿ ಸರ್ ಕೈಯಲ್ಲಿ ಜಾಸ್ತಿ ಬೈಸಿಕೊಂಡಿದೆ. ಡೈಲಾಗ್‌ಗಳನ್ನು ಸ್ಪಾಟ್‌ನಲ್ಲೇ ಇನ್ನಷ್ಟು ಉತ್ತಮಗೊಳಿಸುತ್ತಿದ್ದರು. ನನ್ನ ಡೈಲಾಗ್ ಮರೆತರು ಅದನ್ನು ನೆನಪು ಮಾಡುತ್ತಿದ್ದರು.
 

ಚಿತ್ರದಲ್ಲಿ ಸಂಗೀತಕ್ಕೆ ಬಹಳ ಪ್ರಾಮುಖ್ಯತೆ ಇದೆ ಎನಿಸುತ್ತದೆಯಲ್ಲ..?
ಚಿತ್ರದಲ್ಲಿರುವ ಒಟ್ಟು ಹಾಡುಗಳಲ್ಲಿ ನನಗೆ ೩ ಹಾಡುಗಳು ಇವೆ. ಇದೊಂದು ಕ್ರೈಮ್ ಸಿನಿಮಾ. ಆದರೆ, ಚಿತ್ರದ ಸಂಗೀತ ಅದನ್ನೆಲ್ಲ ಮರೆಸುತ್ತದೆ. ಪ್ರೇಮಿಗಳ ನಡುವಿನ ರೊಮ್ಯಾನ್ಸ್ ಥರ ಸಿನಿಮಾದ ಫೈಟ್‌ಗಳು ಮೂಡಿಬಂದಿವೆ. ಅದಕ್ಕೆ ಕಾರಣ ಚಿತ್ರದ ಸಂಗೀತ. ಇದೆಲ್ಲ ಕ್ರೆಡಿಟ್ ಸಂಗೀತ ನಿರ್ದೇಶಕ ಚರಣ್‌ರಾಜ್‌ಗೆ ಸಲ್ಲಬೇಕು. ಇದನ್ನು ಕಾವ್ಯಾತ್ಮಕ ಕ್ರೈಮ್ ಥ್ರಿಲ್ಲರ್ ಎನ್ನಬಹುದು.

ಭಾವನಾ ಮತ್ತು ನಿಮ್ಮ ಕಾಂಬಿನೇಷನ್ ಬಗ್ಗೆ ಹೇಳಿ?
ನಮಗಿಂತಲೂ ಸಿನಿಯರ್ ನಟಿಯರು ಜಾಸ್ತಿ ಧಿಮಾಕು ತೋರಿಸುತ್ತಾರೆ ಅಂತೆಲ್ಲ ನನಗೆ ಕೆಲವರು ಹೇಳಿದ್ದರು. ಆದರೆ, ಭಾವನಾ ಹಾಗಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಅವರೇ ದೊಡ್ಡ ಉದಾಹರಣೆ. ನಮ್ಮೊಂದಿಗೆ ಅವರು ತುಂಬ ಕ್ಲೋಸ್ ಇರುತ್ತಿದ್ದರು. ನನಗಂತೂ ಒಬ್ಬಳು ಅಕ್ಕ ಸಿಕ್ಕಿದಂತೆಯೇ ಆಗಿದೆ.
 

‘ಟಗರು’ ನಂತರ ನಿಮಗೆ ಯಾವ ರೀತಿ ಆಫರ್‌ಗಳು ಬರಬಹುದೆಂಬ ನಿರೀಕ್ಷೆ ಇದೆ?
ನಿಜ ಹೇಳ್ತೀನಿ, ನನಗೆ ಯಾವುದೇ ನಿರೀಕ್ಷೆ ಇಲ್ಲ. ಸದ್ಯಕ್ಕೆ ಪರಭಾಷೆಯಿಂದ ತುಂಬ ಆಫರ್ ಬರುತ್ತಿವೆ. ‘ಮೆಂಟಲ್ ಹೋ ಜಾವಾ..’ ಹಾಗೂ ‘ಹೋಲ್ಡ್ ಆನ್ ಹೋಲ್ಡ್ ಆನ್..’ ಸಾಂಗ್‌ಗಳ ಲಿರಿಕಲ್ ವಿಡಿಯೋ ನೋಡಿಯೇ ಇಷ್ಟೊಂದು ರೆಸ್ಪಾನ್ಸ್ ಸಿಕ್ಕಿದೆ. 

ಸಂದರ್ಶನ: ದೇಶಾದ್ರಿ ಹೊಸ್ಮನೆ 

loader