ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಸೂರಿ ಕಾಂಬಿನೇಷನ್‌ನ ‘ಟಗರು’ ಸಿನಿಮಾ ಯಾವಾಗ ತೆರೆಗೆ ಬರುತ್ತದೆಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ಈ ನಡುವೆ ಇದ್ದಕ್ಕಿದ್ದಂತೆ ‘ಟಗರು’ ತಂಡದಿಂದ ಹೊಸ ನ್ಯೂಸ್ ಬಂದಿದೆ.
ಬೆಂಗಳೂರು (ಜ.22): ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಸೂರಿ ಕಾಂಬಿನೇಷನ್ನ ‘ಟಗರು’ ಸಿನಿಮಾ ಯಾವಾಗ ತೆರೆಗೆ ಬರುತ್ತದೆಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ಈ ನಡುವೆ ಇದ್ದಕ್ಕಿದ್ದಂತೆ ‘ಟಗರು’ ತಂಡದಿಂದ ಹೊಸ ನ್ಯೂಸ್ ಬಂದಿದೆ.
ಅದೇನಪ್ಪಾ ಎಂದರೆ ‘ಟಗರು-2’ ಸೆಟ್ಟೇರಿರುವುದು. ಅಚ್ಚರಿಯಾದರೂ ಇದು ಸತ್ಯ. ಪಾರ್ಟ್-1 ಇನ್ನೂ ಬಿಡುಗಡೆ ಕಂಡಿಲ್ಲ. ಆದರೂ ಪಾರ್ಟ್-2 ಹೇಗೆ? ಎಂದುಕೊಳ್ಳಬಹುದು. ಆದರೆ, ಇದ್ಯಾವ ಲೆಕ್ಕಾಚಾರವನ್ನೂ ಹಾಕಿಕೊಳ್ಳದೆ ಸದ್ದಿಲ್ಲದೆ ಸೂರಿ ಮತ್ತವರ ತಂಡ ಟಗರು-2 ಗೆ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನೂ ಶುರು ಮಾಡಿಕೊಂಡಿದ್ದಾರೆ. ಮೂರು ದಿನಗಳ ಕಾಲ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲಿಗೆ ಅಧಿಕೃತವಾಗಿ ಶಿವಣ್ಣನ ಟಗರು ಮುಂದುವರಿದ ಭಾಗವನ್ನು ತೆರೆ ಮೇಲೆ ನೋಡಬಹುದು. ಜತೆಗೆ ಟಗರು ಭಾಗ ಒಂದರಲ್ಲಿ ನಿರ್ದೇಶಕ ಸೂರಿ ಅವರು ಸಾಕಷ್ಟು ಕುತೂಹಲ ಉಳಿಸಿದ್ದಾರೆ ಎಂದಾಯಿತು.
ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಶನಿವಾರ ‘ಟಗರು-2’ಗೆ ಮುಹೂರ್ತ ನೆರವೇರಿದೆ. ಮೊದಲ ಭಾಗಕ್ಕೂ ಇಲ್ಲೇ ಮುಹೂರ್ತ ಮಾಡಲಾಯಿತು. ಮುಹೂರ್ತದ ನಂತರ ನಟ ಶಿವರಾಜ್ಕುಮಾರ್ ಸ್ಟೈಲಿಶ್ ಆಗಿ ಲಾಂಗ್ ಬೀಸುವ ದೃಶ್ಯವನ್ನು ಪಾರ್ಟ್-2 ಗಾಗಿ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಇದು ಪಾರ್ಟ್-2 ಗೆ ಲೀಡ್ ದೃಶ್ಯ ಎನ್ನುತ್ತಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್.
ಅಂದಹಾಗೆ ಟಗರು ಪಾರ್ಟ್-1 ನಲ್ಲಿದ್ದ ತಂತ್ರಜ್ಞರು ಇಲ್ಲೂ ಮುಂದುವರಿಯಲಿದ್ದಾರೆ. ಸಂಗೀತಕ್ಕೆ ಚರಣ್ ರಾಜ್, ಕ್ಯಾಮೆರಾ ವಿಭಾಗದಲ್ಲಿ ಮಹೇಂದ್ರ ಸಿಂಹ, ನಿರ್ದೇಶನದ ಸಾರಥ್ಯವನ್ನು ಸೂರಿ ವಹಿಸಿಕೊಳ್ಳಲಿದ್ದು, ನಿರ್ಮಾಪಕರಾಗಿ ಕೆ ಪಿ ಶ್ರೀಕಾಂತ್ ಇದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿದ ಮೇಲೆ ಟಗರು ಚಿತ್ರದ ಮೊದಲ ಭಾಗ ತೆರೆಗೆ ತರುವ ತಯಾರಿ ಮಾಡಿಕೊಳ್ಳಲಿದ್ದಾರೆ.
ಇದು ತೆರೆಗೆ ಬಂದು ಹೋದ ಮೇಲೆ ಟಗರು-2 ಗೆ ರೆಗ್ಯೂಲರ್ ಶೂಟಿಂಗ್ ಆರಂಭವಾಗಲಿದೆ. ಫೆಬ್ರವರಿ ತಿಂಗಳಲ್ಲಿ ‘ಟಗರು’ ಬಿಡುಗಡೆಯಾಗಲಿದೆ. ಶಿವಣ್ಣ, ಮಾನ್ವಿತಾ, ಭಾವನಾ, ಧನಂಜಯ್, ವಸಿಷ್ಠ ಸಿಂಹ ಮುಂತಾದವರು ನಟಿಸಿರುವ ಚಿತ್ರವಿದು.
