ನಟಿ ಶ್ವೇತಾ ಕೇಸ್ವಾನಿ ಅವರು ಚಿತ್ರರಂಗದಲ್ಲಿ ಕೆಲವು ಸಹನಟರಿಂದ ತಮಗಾದ ಅಹಿತಕರ ಸ್ಪರ್ಶದ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಫೋಟೋಗಳಿಗೆ ಪೋಸ್ ನೀಡುವಾಗ ಮತ್ತು ಮಾತನಾಡುವಾಗ ಕೆಲವರು ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ತಾವು ಹೇಗೆ ಎಚ್ಚರಿಕೆ ವಹಿಸುತ್ತಿದ್ದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಮುಂಬೈ(ಅ.29): ಟೆಲಿವಿಷನ್ ಮತ್ತು ಸಿನಿಮಾ ನಟಿ ಶ್ವೇತಾ ಕೇಸ್ವಾನಿ ಅವರು ಮನರಂಜನಾ ಕ್ಷೇತ್ರದಲ್ಲಿ ಕೆಲವು ನಟರಿಂದ ಎದುರಿಸಿದ ಅಹಿತಕರ ಅನುಭವಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಕೆಲವು ನಟರು ಸಾಮಾನ್ಯವಾಗಿ ಮಾತನಾಡುವಾಗ ಅಥವಾ ಆತ್ಮೀಯವಾಗಿ ವರ್ತಿಸುವ ಸಂದರ್ಭದಲ್ಲಿ ಸೊಂಟದ ಬದಲಿಗೆ ತಮ್ಮ ಹಿಂಭಾಗಕ್ಕೆ ಕೈ ಹಾಕುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಶ್ವೇತಾ, ಇಂತಹ ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕ ಮಿತಿಗಳನ್ನು ಕಾಪಾಡಿಕೊಳ್ಳುವುದು ಮತ್ತು ಅಹಿತಕರ ವರ್ತನೆಗೆ ತಕ್ಷಣ ಪ್ರತಿಕ್ರಿಯಿಸುವುದನ್ನು ಕಲಿತಿರುವುದಾಗಿ ಹೇಳಿದ್ದಾರೆ. ಆದರೆ, ಈ ಘಟನೆಗಳಿಗೆ ಸಂಬಂಧಿಸಿದ ನಟರ ಹೆಸರುಗಳನ್ನು ಅವರು ಬಹಿರಂಗಪಡಿಸಿಲ್ಲ.
ಕೆಲವು ನಟರಿಂದ ಅನುಚಿತ ಸ್ಪರ್ಶ: ಶ್ವೇತಾ ಕೇಸ್ವಾನಿ
ಸಂದರ್ಶನದಲ್ಲಿ ತಮ್ಮನ್ನು ಅಸಹಜ ಸ್ಥಿತಿಗೆ ದೂಡುವ ವ್ಯಕ್ತಿಗಳೊಂದಿಗೆ ತಾನು ಹೇಗೆ ವರ್ತಿಸುತ್ತೇನೆ ಎನ್ನುವುದನ್ನು ಶ್ವೇತಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಯಾರಾದರೂ ತಮ್ಮೊಂದಿಗೆ ಆತ್ಮೀಯವಾಗಿ ವರ್ತಿಸುವಾಗ ಮುಜುಗರ ಉಂಟಾದರೆ, ನೇರವಾಗಿ ತಬ್ಬಿಕೊಳ್ಳುವುದಕ್ಕಿಂತ ಪಕ್ಕದಿಂದ ಅಪ್ಪಿಕೊಳ್ಳಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ನಂತರ ಸಹನಟರೊಂದಿಗಿನ ಅನುಭವಗಳ ಬಗ್ಗೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಪರಿಚಿತ ವ್ಯಕ್ತಿಗಳೇ ಇಂತಹ ವರ್ತನೆ ತೋರಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಆದರೆ, ಅವರ ಹೆಸರುಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
“ನನ್ನ ನಟ ಸ್ನೇಹಿತರಲ್ಲಿ ಒಬ್ಬರು ಅಥವಾ ಇಬ್ಬರು ಹೀಗೆ ವರ್ತಿಸಿದ್ದಾರೆ. ಚಿತ್ರರಂಗದಲ್ಲಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ, ನಾವು ಅವರ ಹೆಸರುಗಳನ್ನು ಹೇಳಲು ಸಾಧ್ಯವಿಲ್ಲ” ಎಂದು ಶ್ವೇತಾ ಹೇಳಿದ್ದಾರೆ. ಕೆಲವು ನಟರು ಸೊಂಟದ ಮೇಲೆ ಕೈ ಇಡುವ ಬದಲು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ ಕೈಯನ್ನು ಸ್ವಲ್ಪ ಮೇಲಕ್ಕೆ ಸರಿಸುವಂತೆ ನೇರವಾಗಿ ಹೇಳುತ್ತಿದ್ದೆ ಎಂದು ವಿವರಿಸಿದ್ದಾರೆ.
ಫೋಟೋಗಳಿಗೆ ಪೋಸ್ ನೀಡುವಾಗ ಮಾತ್ರವಲ್ಲ, ಸಾಮಾನ್ಯ ಸಂದರ್ಭಗಳಲ್ಲೂ ಇಂತಹ ವರ್ತನೆ
ಸಂದರ್ಶನದ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರು, ಇಂತಹ ಘಟನೆಗಳು ಫೋಟೋಗಳಿಗೆ ಪೋಸ್ ನೀಡುವಾಗ ಮಾತ್ರ ನಡೆಯುತ್ತಿದ್ದವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶ್ವೇತಾ, ಸಾಮಾನ್ಯ ಸಾಮಾಜಿಕ ಸಂದರ್ಭಗಳಲ್ಲಿಯೂ ಇಂತಹ ಅನುಭವಗಳಾಗಿವೆ ಎಂದು ಶ್ವೇತಾ ಹೇಳಿದ್ದಾರೆ. ಯಾರಾದರೂ ಕುಡಿಯಲು ಆಹ್ವಾನಿಸಿ ಮಾತನಾಡುತ್ತಿರುವಾಗಲೂ ಹಿಂಭಾಗಕ್ಕೆ ಕೈ ಹಾಕುವಂತಹ ಘಟನೆಗಳು ನಡೆದಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆ ವ್ಯಕ್ತಿಯ ಕೈ ಎಲ್ಲಿರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದೆ ಎಂದು ಹೇಳಿದ್ದಾರೆ.
ಈ ರೀತಿಯ ಅನುಭವಗಳು ತಮ್ಮ ವೈಯಕ್ತಿಕ ಅಂತರವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವುದನ್ನು ಕಲಿಸಿವೆ ಎಂದು ಶ್ವೇತಾ ತಿಳಿಸಿದ್ದಾರೆ. ಯಾವುದೇ ಸಾಮಾಜಿಕ ಪರಿಸ್ಥಿತಿಯಲ್ಲಾದರೂ ಅನುಚಿತ ವರ್ತನೆ ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ದೃಢವಾಗಿ ಪ್ರತಿಕ್ರಿಯಿಸುವುದನ್ನು ತಾವು ರೂಢಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಆದರೆ, ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ನಟರ ಹೆಸರುಗಳನ್ನು ಶ್ವೇತಾ ಬಹಿರಂಗಪಡಿಸಿಲ್ಲ.
ಯಾರು ಈ ಶ್ವೇತಾ ಕೇಸ್ವಾನಿ?
ಶ್ವೇತಾ ಕೇಸ್ವಾನಿ ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ. ‘ತಾರಾ’ ಧಾರಾವಾಹಿಯ ಮೂಲಕ ಕಿರುತೆರೆ ವೃತ್ತಿಜೀವನ ಆರಂಭಿಸಿದ ಅವರು, ಬಳಿಕ ‘ದೇಸ್ ಮೇ ನಿಕ್ಲಾ ಹೋಗಾ ಚಾಂದ್’, ‘ಬಾ ಬಹೂ ಔರ್ ಬೇಬಿ’ ಹಾಗೂ ‘ಕಹಾನಿ ಘರ್ ಘರ್ ಕೀ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಇದಲ್ಲದೆ, ‘ದಿ ಮೆಮ್ಸಾಹಿಬ್’, ‘ಲವ್ ಕೆ ಚಕ್ಕರ್ ಮೇನ್’, ‘ತೌಬಾ ತೌಬಾ’ ಮತ್ತು ‘ಬಿನ್ ಬುಲಾಯೇ ಬರಾತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭಾರತೀಯ ಮನರಂಜನಾ ಕ್ಷೇತ್ರದ ಜೊತೆಗೆ ಅಂತರರಾಷ್ಟ್ರೀಯ ಪ್ರಾಜೆಕ್ಟ್ನಲ್ಲಿಯೂ ಕೆಲಸ ಮಾಡಿರುವ ಶ್ವೇತಾ, ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಚಿತ್ರರಂಗದಲ್ಲಿ ಎದುರಿಸಿದ ಅಹಿತಕರ ಅನುಭವಗಳ ಬಗ್ಗೆ ಮಾತನಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.






