ಸುದೀಪ ಏನೋ ಮಾತಾಡ್ತಿದ್ದಾರೆ ಕೇಳಿಸಿಕೊಂಡ್ರಾ? ಪೈರಸಿಯ ಸಂಕಟಗಳವು. ಬಳೆ, ಸರ, ಕಡಗದಾಚೆ ಓದಿಕೊಳ್ಳಿ.

ಅಮ್ಮ‌ ಕೇಳ್ತಿದ್ರು ಮಗನೇ ಅವತ್ತಿಂದ ಸುದೀಪ್ ಸಿನಿಮಾ ಪೈರಸಿ ಪೈರಸಿ ಅಂತಿದ್ದಾರಲ್ಲಾ, ಏನದು ಅಂತ. ಅಪ್ಪ ಪ್ರಶ್ನೆ ಕೇಳದೆಯೇ ಉತ್ತರಕ್ಕೆ‌ ಕಾದಿದ್ದರು. ಇಬ್ಬರಿಗೂ ಸೋಷಿಯಲ್‌ ಮೀಡಿಯಾ ಅಷ್ಟು ಗೊತ್ತಿಲ್ಲ. ಇಬ್ಬರ ಬಳಿಯೂ ಬೇಸಿಕ್‌ ಹ್ಯಾಂಡ್ ಸೆಟ್.ಅಷ್ಟಕ್ಕೇ ಆತ್ಮತೃಪ್ತಿ. ಅದೇ‌ ಅಮ್ಮ, ಸಿನಿಮಾ ರಿಲೀಸ್ ಆಗುತ್ತಲ್ಲ.

ರಮಾಕಾಂತ್ ಬರೆಯುತ್ತಾರೆ.. ಕನ್ನಡದ Attitude ಪೈಲ್ವಾನ್ ಸುದೀಪ...

ಅವತ್ತೇ ಅದನ್ನ ರೆಕಾರ್ಡ್‌ ಮಾಡಿಕೊಂಡು ಮೊಬೈಲ್ ಫೋನಲ್ಲೇ‌ ಸಿನಿಮಾ ನೋಡೋ ತರ ಮಾಡ್ತಾರೆ . ಅದೇ‌ ಪೈರಸಿ. ಅಂದರೆ, ಥಿಯೇಟರ್ ಗೆ ಜನ ಹೋಗೋ ಹಾಗೆ ಇಲ್ಲ. ಲಾಸ್ ಆಗಲ್ವಾ ಮಗನೇ. ಮೊದಲೆಲ್ಲಾ ಹೀಗಿರ್ಲಿಲ್ಲ ಅಂದ್ರು ಅಮ್ಮ.  ಏನಪ್ಪ ಇದೆಲ್ಲ. ಛೇ! ಅಂತಷ್ಟೇ ಅಪ್ಪ ಹೇಳಿ ಬೇಸರಿಸಿಕೊಂಡರು. ಅದು ಕನ್ನಡ ಸಿನಿ ಜಗತ್ತಿನ‌ ಸಂಕಟವಾ? ಗೊತ್ತಾಗಲಿಲ್ಲ. ಹೌದು ಸುದೀಪ ಇದನ್ನೇ ಹೇಳ್ತಿರೋದು...

ಚಿತ್ರರಂಗವನ್ನ ತುಂಬಾ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಬಲ್ಲೆ. ಗೊತ್ತಿದ್ದನ್ನಷ್ಟೇ ಬರೆಯುತ್ತೇನೆ.  ಪೈಲ್ವಾನ್ ಸಿನಿಮಾ ಬಜೆಟ್ ಬಗ್ಗೆ 30 ರಿಂದ 40 ಕೋಟಿ ಅಂತ ಅಂದಾಜು. ಕಳೆದ ವಾರವಷ್ಟೇ ಬಿಡುಗಡೆ. ಬಿಡುಗಡೆಯಾದ ಕೆಲವೇ‌ ಗಂಟೆಗಳಲ್ಲಿ ಒಬ್ಬೊಬ್ಬನಿಂದ 4000 , 5000 ಲಿಂಕ್ ಗಳ Share. ಏನಾಗಬೇಡ ನಿರ್ಮಾಪಕನಿಗೆ?

"

ಪೈಲ್ವಾನ್ ಸಿನಿಮಾ ಕೆಲವು ವಿಮರ್ಶೆಗಳಾಚೆ, ಸದ್ಯ ಚೆನ್ನಾಗಿ ಮುನ್ನುಗ್ಗುತ್ತಿರುವ ಸಿನಿಮಾ. ಸುದೀಪನನ್ನ ಪೈಲ್ವಾನ್ ಗೆಟಪ್ ನಲ್ಲಿ ಯಾರೂ ನೋಡಿರಲಿಲ್ಲ. ಅಮೀರ್ ಖಾನ್, ಸಲ್ಮಾನ್ ಖಾನ್ ನಂತರ ಸುದೀಪ ಹಾಗೆ ಕಾಣಿಸಿದ್ದ. ಮಲ್ಲನಂತೆ. ಎದ್ದಾಳು. ಅನೇಕರು ಮೆಚ್ಚಿಕೊಂಡರು. ಸುದೀಪನ ಅಭಿಮಾನಿಗಳೇ ಅಲ್ಲದವರೂ ಒಪ್ಪಿದ್ದಾರೆ.
ಆದರೆ ಆಗ್ತಿರೋದೇನು? ಪೈರಸೀನಾ? 

'ದೊಡ್ಡ ಬಜೆಟ್, ಸ್ಟಾರ್, ದೊಡ್ಡ ಪ್ರೋಡ್ಯೂಸರ್, ಪೈರಸಿಯನ್ನ ಹೇಗೋ ಅರಗಿಸಿಕೊಂಡು ಬಿಡುತ್ತಾರೆ. ಐದಾರು ಕೋಟಿ ನಷ್ಟ. ಸರಿ. ಆದರೆ 35 ಲಕ್ಷ, 70 ಲಕ್ಷಗಳಿಗೆ ಸಿನಿಮಾ ಮಾಡುವವರಿದ್ದಾರೆ. ದೊಡ್ಡ ಸ್ಟಾರ್ ಇರುವುದಿಲ್ಲ. ಜೀವನವನ್ನೇ ಪಣಕ್ಕಿಟ್ಟಿರುತ್ತಾರೆ. ಕಥೆಯನ್ನೇ ನಂಬಿ, ಬಾಯಿಂದ ಬಾಯಿಗೆ ಆಗೋ ಪ್ರಚಾರ ನಂಬಿ. ಅಂತ ಸಿನಿಮಾ ಪೈರಸಿ ಆಗಿ ಬಿಟ್ರೆ!  ಮುಗೀತಲ್ಲಾ,
ಅದು ಕನಸುಗಳ ಆತ್ಮಹತ್ಯೆ! ಹೊಸ ಕಥೆ, ಹುರುಪುಗಳ ಅಂತ್ಯ ಸಂಸ್ಕಾರ' -ಸುದೀಪ ಹೇಳಿದ್ದು. ಸುಳ್ಳಾ ಇದು. 

 ಕನ್ನಡದ ಯಾವ ಸ್ಟಾರ್ ನಟನೂ, ತನ್ನ ಕೊನೇ‌ ಸಿನಿಮಾನ‌ ಡಿಕ್ಲೇರ್  ಮಾಡಿಲ್ಲ. ಇವತ್ತು ಈ ನಟನ ಸಿನಿಮಾ ಪೈರಸಿ ಆಗಿ ವಾಟ್ಸಾಪ್ ನಲ್ಲಿ ಪುಗಸಟ್ಟೆ ಲಿಂಕ್ ಸಿಗ್ತಾ ಇದ್ದರೆ, ನಾಳೆ ಇನ್ನೊಬ್ಬ ನಟನದ್ದೂ ಸಿನಿಮಾ  ಬಿಡುಗಡೆಯಾಗುತ್ತದೆ. ನೆನಪಿರಲಿ, ಆ‌ ನಟನಿಗೂ ಅಭಿಮಾನಿಗಳಿರುತ್ತಾರೆ. ಅವರಿಗೂ ಪೈರಸಿ ಮಾಡುವುದು ಒಪ್ಪೊತ್ತಿನ ಕೆಲಸ. ಹಾಗಾಗಬಾರದಲ್ಲ. ಒಂದು ವೇಳೆ ನಟನೊಬ್ಬನ ಮೇಲೆ ಅಭಿಮಾನದಿಂದ ಇಂತಹ ಕೆಲಸ ನಡೆದಿದ್ದರೆ, ಅಸಹ್ಯಕ್ಕೆ ಇನ್ನೊಂದು ಹೆಸರದು. ಹಣಕ್ಕೆ ಮಾಡಿದ್ದರೆ ಕಟ್ಟಲಿ ಹೆಡೆಮುರಿ.

ನಾನು, ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆಯಲ್ಲ; ಸುದೀಪ್ ಗುಡುಗು

ಕನ್ನಡ‌ ಚಿತ್ರಗಳ‌ ಪೈರಸಿ ಬೇರೆ ಭಾಷೆಗಳ ಚಿತ್ರಗಳಿಗೆ ಹೋಲಿಸಿದರೆ ಕಡಿಮೆ ಅಥವಾ ಇಲ್ಲ. ತಡವಾಗಿ ಟೊರೆಂಟ್ಸ್‌ನಲ್ಲಿ ಸಿಕ್ಕಿದ್ದೂ ಉಂಟು. ತುಂಬ ಸಂದರ್ಭಗಳಲ್ಲಿ ಪೈರಸಿ ಆಗುವುದು ಹಣಕ್ಕೆ. ಅಂದರೆ ನಿಮಗೆ ಹಿಂದಿ, ತಮಿಳು, ತೆಲುಗು, ಇಂಗ್ಲಿಷ್   ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಯಲ್ಲಿ Footpath ಮೇಲೆ  30 ರೂಪಾಯಿ Or 35 ರುಪಾಯಿಗೆ ಸಿಗುತ್ತವೆ. ಈಗಲೂ. ಸಿಂಗಲ್ ಕಾಪಿ, ಕ್ವಾಲಿಟಿ ಕಾಪಿ ಸರ್, ಚೆನ್ನಾಗಿದೆ 40 ರುಪಾಯಿ ಅಂತಾ ಮಾರುವವನು ಮಾತಾಡ್ತಿರ್ತಾನೆ. Purely ಇದು ಹಣಕಾಸಿನ‌ ಆಟ.

ಟೊರೆಂಟ್ಸ್ ನಲ್ಲಿ ಕೆಲವು ಸಿನಿಮಾ ಡೌನ್ಲೋಡ್ ಗಳಾಗುತ್ತವೆ. ವಿದೇಶದಲ್ಲಿ ಕುಳಿತು ಲೆಕ್ಕವಿಲ್ಲದಷ್ಟು ದೇಶಗಳಿಂದ, ಅನೇಕ‌ ಸರ್ವರ್ ಗಳಿಂದ ಆಗುವ ಚಮತ್ಕಾರಗಳವು. ಸಿನಿಮಾದ ಒಂದೊಂದು Bit ಕೂಡ ಒಂದೊ‌ಂದು ದೇಶದಿಂದ ಬಂದು, ಒಂದು ಕಡೆ ಸೇರಿ ಸಿನಿಮಾ ಕಂಪ್ಲೀಟ್ ಆಗಿ ಲಿಂಕ್ ಗಳು Download ಗೆ ರೆಡಿ ಆಗಿಬಿಡುತ್ತವೆ. ನಂಬಿ ಇಂತಹ ಲಿಂಕ್  ಗಳ ಹಿಂದೆ ಯಾರಿದ್ದಾರೆ? ಅವರ ಸಾವಿರಾರು ಕೋಟಿ ಹಣಕಾಸು ವಹಿವಾಟು ಜಾಲ‌ ಎಲ್ಲೆಲ್ಲಿದೆ? ಒಂದು ಎಳೆ ಕೂಡಾ ಇಲ್ಲಿವರೆಗೆ ಸಿಕ್ಕಿಲ್ಲ. ಯಾವ ಗಂಡು ಮಗನೂ ಒಬ್ಬನನ್ನೂ ಬಂಧಿಸಿಲ್ಲ.

ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಯಾವ ಸಿನಿಮಾ ಕೂಡಾ ದೊಡ್ಡ ಪೈರಸಿಯಾದ ಉದಾಹರಣೆ ಇಲ್ಲ. ಆದರೆ ಪೈಲ್ವಾನ್ ನನ್ನ ಅಂಗಾತ ಮಲಗಿಸಿಬಿಡೋ ಪ್ಲಾನ್ ಹಾಕಿಕೊಂಡಿದ್ದರಾ? ಗೊತ್ತಿಲ್ಲ. ಐದಾರು ಕೋಟಿಯಂತೂ ಪೈರಸಿಯ ಕಾರಣಕ್ಕೆ ಕೈಬಿಟ್ಟುಹೋಗಿದೆ. ಹಾಗಾದರೆ ಇದು ನಿರ್ಮಾಪಕನನ್ನ ಮಲಗಿಸಲು ಮಾಡಿದ ಕೆಲಸವಾ? ಹಾಗೂ ಅನ್ನಿಸುತ್ತಿಲ್ಲ. ನಟನನ್ನೇ ಮಲಗಿಸಲು ಮಾಡಿದ ಕೆಲಸವೆನ್ನಲು ಕಾರಣಗಳು ಕಾಣಿಸುತ್ತಿವೆಯಲ್ಲ. ಇದು ವಿಷಯ.

ಇವತ್ತು ಈ ಪೈಲ್ವಾನ ಚಿತ್ ಆದರೆ ನಾಳೆ‌ ಇನ್ನೊಬ್ಬ. ಆಮೇಲೆ ಅಖಾಡವೇ ಚಿತ್. ಚಿತ್ರರಂಗವೇ ಖಾಲಿ ಖಾಲಿ. ಇದೆಲ್ಲಾ ಬೇಡ. ಅಭಿಮಾನ ಉಪ್ಪಿನಂತಿರಲಿ, ಸ್ವಲ್ಪ ತಿಂದರೆ ರುಚಿ, ಜಾಸ್ತಿ ತಿಂದರೆ ದಾಹ! ಅಂದ ಹಾಗೆ  ಕರ್ಮ Address ಮಿಸ್ ಮಾಡಿಕೊಳ್ಳಲ್ಲ ಅನ್ನೋ ಮಾತೇಕೋ ನೆನಪಾಯಿತು.

- ರಮಾಕಾಂತ್ ಆರ್ಯನ್.