ಆದರೆ ನಮ್ಮನ್ನ ಸಂಪರ್ಕಿಸದೆ ರಾಕ್ ಸ್ಟಾರ್ಸ್ ತಂಡವನ್ನ ಕೆಪಿಎಲ್​ನಿಂದ ಹೊರಕ್ಕೆ ಹಾಕಿರುವುದು ಬೇಸರ ಮೂಡಿಸಿದೆ.

ಬೆಂಗಳೂರು(ಆ.05): ಕೆಪಿ'ಎಲ್'ನಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್'ಸ್ಟಾರ್ಸ್ ತಂಡವನ್ನು ಕೈಬಿಟ್ಟಿದ್ದಕ್ಕೆ ಸ್ವತಃ ತಂಡದ ನಾಯಕರಾದ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

‘ಕೆಪಿಎಲ್​ನಿಂದ ರಾಕ್ ಸ್ಟಾರ್ಸ್ ತಂಡವನ್ನ ಆಡಿಸದೆ ಇರೋದಕ್ಕೆ ನಮಗೆ ತುಂಬ ಬೇಸರವಾಗಿದೆ. ಕೆಪಿಎಲ್​ನಿಂದ ರಾಕ್ ಸ್ಟಾರ್ಸ್ ತಂಡವನ್ನ ಆಡದಂತೆ ಮಾಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧಾರ ಅಸಂಮಜಯ. ನಮಗೆ ಮಾಹಿತಿ ನೀಡಿ ಈ ನಿರ್ಧಾರ ಕೈಗೊಳ್ಳಬೇಕಿತ್ತು. ನನ್ನ ಅಥವಾ ತಂಡದ ಮಾಲೀಕ ರಾಜು ಗೌಡ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ನಮ್ಮನ್ನ ಸಂಪರ್ಕಿಸದೆ ರಾಕ್ ಸ್ಟಾರ್ಸ್ ತಂಡವನ್ನ ಕೆಪಿಎಲ್​ನಿಂದ ಹೊರಕ್ಕೆ ಹಾಕಿರುವುದು ಬೇಸರ ಮೂಡಿಸಿದೆ. ಕೆಎಸ್​ಸಿಎಗೆ ಮಾತಿಗೆ ಬೆಲೆ ಕೊಟ್ಟು ಕೆಪಿಎಲ್​ನಿಂದ ನಮ್ಮ ತಂಡ ಹಿಂದೆ ಸರಿದಿದೆ. ಆದರೆ ಕೆಪಿಎಲ್​ಗಾಗಿ ನಮ್ಮ ತಂಡ ಎಷ್ಟು ಶ್ರಮಿಸಿದೆ ಅನ್ನೋದು ನಾಯಕನಾಗಿ ನನಗೆ ತಿಳಿದಿದೆ. ಪ್ರತಿ ವರ್ಷವೂ ಕೆಪಿಎಲ್​ನಲ್ಲಿ ಆಡಬೇಕು ಅನ್ನೋ ಇಚ್ಚೆಯಿಲ್ಲ. ಆದರೆ ನಮಗೆ ಉತ್ತಮ ವಿದಾಯ ಸಿಗಬೇಕಿತ್ತು’

- ಕಿಚ್ಚ ಸುದೀಪ್, ರಾಕ್ ಸ್ಟಾರ್ಸ್​ ನಾಯಕ

ಕಳೆದ ಮೂರು ವರ್ಷ ಕೆಪಿಎಲ್'​ನಲ್ಲಿ ಆಡಿ ಮನರಂಜನೆ ನೀಡಿದ್ದ ಚಿತ್ರ ನಟರ ತಂಡ ಈ ಸಲ ಆಡ್ತಿಲ್ಲ. ಕೆಪಿಎಲ್'​ನಲ್ಲಿ ಆಡುವಂತೆ ರಾಕ್​ ಸ್ಟಾರ್ಸ್​ ತಂಡದೊಂದಿಗೆ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೂರು ವರ್ಷ ಆಡಿಸಲಾಗಿತ್ತು. ಈ ಸಲ ಸುದೀಪ್ ತಂಡವನ್ನ ಆಹ್ವಾನಿಸಿಲ್ಲ. ಹೊಸ ಬಿಡ್'​ನೊಂದಿಗೆ ಹೊಸ ತಂಡಗಳನ್ನ ಸಿದ್ದಪಡಿಸಿದ್ದೇವೆ. ಹೀಗಾಗಿ ಈ ಸಲ 7 ತಂಡಗಳು ಕೆಪಿಎಲ್'​ನಲ್ಲಿ ಆಡಲಿವೆ ಎಂದು ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ಸುವರ್ಣ ನ್ಯೂಸ್​ಗೆ ತಿಳಿಸಿದ್ದಾರೆ.