- ನಿರ್ದೇಶಕ ತರುಣ್‌ ಸುಧೀರ್‌ ಅವರ ಲೇಟೆಸ್ಟ್‌ ಪರಿಸ್ಥಿತಿ ಇದು. ಏಕಕಾಲದಲ್ಲಿ ಕನ್ನಡದ ಇಬ್ಬರು ಸ್ಟಾರ್‌ ಹೀರೋಗಳ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ಮಾತ್ರವಲ್ಲ, ಮತ್ತೊಬ್ಬರ ಚಿತ್ರಕ್ಕೆ ವ್ಯಂಗ್ಯವಾಡುವ ಮುನ್ನ ತಮ್ಮ ಚಿತ್ರದ ಪೋಸ್ಟರ್‌ ಎಲ್ಲಿಂದ ಕದ್ದಿದ್ದೀರಿ ಅಂತ ಮೊದಲು ಹೇಳಿ ಎನ್ನುವ ಮಾತುಗಳಿಗೂ ತುತ್ತಾಗಿದ್ದಾರೆ ತರುಣ್‌ ಸುಧೀರ್‌. ತಾನು ಮಾಡಿದ ಯಡವಟ್ಟಿನಿಂದ ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರಕ್ಕೂ ಕೃತಿಚೌರ್ಯದ ಅರೋಪ ಸುತ್ತಿಕೊಂಡಿದೆ.

ದರ್ಶನ್‌ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ವೈರಲ್

ಕಿಚ್ಚ ಸುದೀಪ್‌ಗೆ ವಿಶ್‌ ಮಾಡಿರಲಿಲ್ಲ

ತರುಣ್‌ ಸುಧೀರ್‌ ಹಾಗೂ ನಂದಕಿಶೋರ್‌ ಸೋದರರು ಸುದೀಪ್‌ ಅಂಗಳದಲ್ಲಿ ಹೆಚ್ಚಾಗಿ ಗುರುತಿಸಿಕೊಂಡವರು. ಸುದೀಪ್‌ ಅವರನ್ನು ಚಿನ್ನ ರನ್ನ ಎಂದು ಕೊಂಡಾಡಿದವರು. ಕಷ್ಟದಲ್ಲಿದ್ದಾಗ ನಮಗೆ ನೆರವಾಗಿದ್ದು ಸುದೀಪ್‌. ಅವರು ನಮಗೆ ತಂದೆ ಸಮಾನರು ಎಂದು ಸುದೀಪ್‌ ಅವರನ್ನು ಮೆಚ್ಚಿ ಭಾವುಕರಾಗಿ ಮಾತನಾಡಿದ್ದು ಇದೇ ತರುಣ್‌ ಸುಧೀರ್‌. ಸುದೀಪ್‌ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡ ಉದಾಹರಣೆಯೂ ಇದೆ. ಹೀಗೆ ಆತ್ಮೀಯತೆ ಬೆಳೆಸಿಕೊಂಡಿದ್ದ ತರುಣ್‌ ಸುಧೀರ್‌, ಸೌಜನ್ಯಕ್ಕೂ ಸುದೀಪ್‌ ಅವರ ‘ಪೈಲ್ವಾನ್‌’ ಚಿತ್ರದ ಪೋಸ್ಟರ್‌ ಬಿಡುಗಡೆಯಾದಾಗ ಗುಡ್‌ ಲಕ್‌ ಹೇಳಲಿಲ್ಲ. ಪೋಸ್ಟರ್‌ ಶೇರ್‌ ಮಾಡಿಕೊಳ್ಳಲಿಲ್ಲ. ಇದು ಕಿಚ್ಚನ ಅಭಿಮಾನಿಗಳ ಸಿಟ್ಟಿಗೆ ಕಾರಣ.

‘ತರುಣ್‌ ಸುಧೀರ್‌ ಅವರೇ ಬಂದ ದಾರಿಯನ್ನು ಮರೆತು ಬಿಟ್ರಾ, ರನ್ನ ಚಿತ್ರದ ಸಂದರ್ಭದಲ್ಲಿ ನೀವು ಹೇಳಿದ ಮಾತುಗಳು ಮರೆತು ಬಿಟ್ರಾ, ನೀವೇ ಹೇಳಿದಂತೆ ಸುದೀಪ್‌ ಅವರಿಂದ ಸಹಾಯ ಪಡೆದುಕೊಂಡ ನೀವು ಅವರ ಪೈಲ್ವಾನ್‌ ಚಿತ್ರಕ್ಕೆ ವಿಶ್‌ ಮಾಡಲಿಲ್ಲ. ಇಲ್ಲೇ ತೋರಿಸುತ್ತದೆ ನಿಮ್ಮ ಅಹಂ’ ಎಂದು ಸುದೀಪ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ತರುಣ್‌ ಸುಧೀರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದಚ್ಚುಗೂ ಇದ್ದಾರೆ ಮುಸ್ಲಿಂ ಫ್ರೆಂಡ್ಸ್ ಆ್ಯಂಡ್ ಫ್ಯಾನ್ಸ್!

ರಕ್ಷಿತ್‌ ಶೆಟ್ಟಿಚಿತ್ರವನ್ನೂ ಕಾಲೆಳೆದರು

ಸುದೀಪ್‌ ಅಭಿಮಾನಿಗಳು ಹಾಗೂ ತರುಣ್‌ ಸುಧೀರ್‌ ಅವರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕೋಲ್ಡ್‌ ವಾರ್‌ ಮತ್ತಷ್ಟುತಾರಕಕ್ಕೇರಿದ್ದು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಅವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾದಾಗ. ಇದನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಳ್ಳುವಾಗ ಹಿಂದಿಯ ‘ಫಟಾ ಫೋಸ್ಟರ್‌ ನಿಕ್ಲಾ ಹೀರೋ’ ಚಿತ್ರದ ಹೆಸರನ್ನು ಹೇಳಿ ಪೋಸ್ಟರ್‌ ತುಂಬಾ ಚೆನ್ನಾಗಿದೆ ಎಂದು ವ್ಯಂಗ್ಯಮಿಶ್ರಿತ ಮೆಚ್ಚುಗೆ ಸೂಚಿಸಿದ್ದಾರೆ ತರುಣ್‌ ಎಂಬುದು ರಕ್ಷಿತ್‌ ಶೆಟ್ಟಿಅಭಿಮಾನಿಗಳ ಸಿಟ್ಟು. ಯಾಕೆಂದರೆ ರಕ್ಷಿತ್‌ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಂದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪೋಸ್ಟರ್‌ ಹಿಂದಿಯ ಅದೇ ‘ಫಟಾ ಫೋಸ್ಟರ್‌ ನಿಕ್ಲಾ ಹೀರೋ’ ನಕಲು ಎಂದು ಅರೋಪಿಸುತ್ತಿರುವ ಹೊತ್ತಿನಲ್ಲಿ ತರುಣ್‌ ಸುಧೀರ್‌ ಕೂಡ ಅದೇ ರೀತಿಯಲ್ಲಿ ಟ್ವೀಟ್‌ ಮಾಡಿ ಸಿಂಪಲ್‌ ಸ್ಟಾರ್‌ ಕಾಲೆಳೆದಿದ್ದಾರೆ ಎಂದು ನೆಟ್ಟಿಗರ ಅಕ್ರೋಶ.

ದರ್ಶನ್‌ ರಾಬರ್ಟ್‌ಗೂ ವಿವಾದ ಸುತ್ತಿಕೊಂಡಿತು

ಒಬ್ಬ ಹೀರೋಗೆ ವಿಶ್‌ ಮಾಡದೆ, ಮತ್ತೊಬ್ಬ ನಟನ ಚಿತ್ರದ ಪೋಸ್ಟರ್‌ಗೆ ವ್ಯಂಗ್ಯವಾಡುತ್ತಿದಂತೆಯೇ ಈ ಇಬ್ಬರು ಹೀರೋಗಳ ಅಭಿಮಾನಗಳ ಸಿಟ್ಟು ರಾಬರ್ಟ್‌ ಚಿತ್ರಕ್ಕೆ ಸುತ್ತಿಕೊಂಡಿದೆ. ‘ತಾವು ರಕ್ಷಿತ್‌ ಶೆಟ್ಟಿಚಿತ್ರದ ಪೋಸ್ಟರ್‌ ಹಿಂದಿ ಚಿತ್ರದ ನಕಲು ಎನ್ನುವ ದಾಟಿಯಲ್ಲಿ ಟ್ವೀಟ್‌ ಮಾಡಿದ್ದೀರಿ. ಹಾಗಾದರೆ ನಿಮ್ಮ ರಾಬರ್ಟ್‌ ಚಿತ್ರದ ಥೀಮ್‌ ಪೋಸ್ಟರ್‌ ಯಾವ ಚಿತ್ರದಿಂದ ಕದ್ದಿದ್ದು?’ ಎಂದು ತರುಣ್‌ ಸುಧೀರ್‌ ಅವರಿಗೆ ಕಾಲೆಳೆದಿದ್ದಾರೆ. ಆ ಮೂಲಕ ಹಾಲಿವುಡ್‌ನ ಚಿತ್ರದ ಸೇಮ್‌ ಪೋಸ್ಟರ್‌ ಅನ್ನು ರಾಬರ್ಟ್‌ ಚಿತ್ರದ ಜತೆಗೆ ಪೋಸ್ಟ್‌ ಮಾಡಿ ತರುಣ್‌ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಹಾಗೆ ನೋಡಿದರೆ ದರ್ಶನ್‌ ಬೈಕ್‌ ಮೇಲೆ ಕೂತಿರುವ ‘ರಾಬರ್ಟ್‌’ ಚಿತ್ರದ ಥೀಮ್‌ ಪೋಸ್ಟರ್‌ ಅನ್ನು ಹಾಲಿವುಡ್‌ ನಟ ಡ್ವೇಯ್‌್ನ ಜಾನ್ಸನ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮ್ಮದೇ ಫೋಟೋ ಪೋಸ್‌. ಅದನ್ನು ತರುಣ್‌ ಅವರು ನಕಲು ಮಾಡಿದ್ದಾರೆ ಎಂದೂ ನೆಟ್ಟಿಗರು ಕಿಚಾಯಿಸಿದ್ದಾರೆ.

ಹೀಗೆ ತಮ್ಮ ಚಿತ್ರಕ್ಕೆ ನಕಲಿ ಅರೋಪ ಸುತ್ತಿಕೊಳ್ಳುತ್ತಿರುವ ಹೊತ್ತಿನಲ್ಲಿ ಬೇರೊಬ್ಬ ನಟನ ಚಿತ್ರದ ಪೋಸ್ಟರ್‌ಗೆ ಕಾಲೆಳೆಯುವ ಅಗತ್ಯವಿತ್ತೇ? ಚಿತ್ರರಂಗದಲ್ಲಿ ಎಲ್ಲ ಹೀರೋಗಳ ಜತೆಯೂ ಸಿನಿಮಾ ಮಾಡುವ ಅಥವಾ ಮಾಡುವಂತಹ ಜಾಗದಲ್ಲಿರುವ ಒಬ್ಬ ನಿರ್ದೇಶಕನಿಗೆ ಕೇರ್‌ಲೆಸ್‌ ವರ್ತನೆ ಬೇಕಿತ್ತಾ ಎಂಬುದು ಹಲವರ ಪ್ರಶ್ನೆ.