ದೈತ್ಯ ಬೈಕ್‌. ಅದರ ಮೇಲೆ ಉದ್ದನೆ ಕೂದಲು ಬಿಟ್ಟಿರುವ, ಕಪ್ಪು ಜಾಕೆಟ್‌, ಕಪ್ಪು ಪ್ಯಾಂಟ್‌ ತೊಟ್ಟಿರುವ ರೆಟ್ರೋ ಸ್ಟೈಲಿನ ಸೂಪರ್‌ಹೀರೋ ದರ್ಶನ್‌. ಜಾಕೆಟ್‌ ಮೇಲೆ ಗಜ ಸಿಂಬಲ್‌, ಎದುರುಗಡೆ ಸಾಲುಗಟ್ಟಿ ನಿಂತಿರುವ ವಾಹನಗಳು... ಉಲ್ಟಾನಂಬರ್‌ ಪ್ಲೇಟ್‌. ಅದರಲ್ಲಿ ಡಿ ಬಾಸ್‌ ಎಂಬ ಹೆಸರು.

ದರ್ಶನ್‌ ಅಭಿಮಾನಿಗಳು ಹಬ್ಬ ಮಾಡಲು ಇಷ್ಟುಸಾಕಲ್ಲ. ರಾಬರ್ಟ್‌ ಚಿತ್ರದ ಈ ಥೀಮ್‌ ಪೋಸ್ಟರ್‌ ಬಿಡುಗಡೆ ಆಗಿದ್ದೇ ಆಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್‌ ಆಗಿದೆ. ಥೀಮ್‌ ಪೋಸ್ಟರ್‌ ರಿಲೀಸ್‌ ಆಗಲಿದೆ ಎಂಬ ಸುದ್ದಿಯೇ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಇದೀಗ ಪೋಸ್ಟರ್‌ ಭಾರಿ ಹವಾ ಸೃಷ್ಟಿಸಿದೆ.

ಸ್ಪೆಷಲ್‌ ಹೈರ್‌ಸ್ಟೈಲ್‌ನಲ್ಲಿ ದರ್ಶನ್‌

ದರ್ಶನ್‌ ಫ್ಯಾನ್ಸ್‌ಗೆ ಪೋಸ್ಟರ್‌ನಲ್ಲಿ ತಮ್ಮ ನೆಚ್ಚಿನ ನಟ ಮುಖ ತೋರಿಸದೇ ಇದ್ದಿದ್ದಕ್ಕೆ ಆಕ್ಷೇಪವಿದೆ. ಆದರೆ ವಿಶೇಷ ಪೋಸ್ಟರ್‌ ರಿಲೀಸ್‌ ಮಾಡಿದ್ದಕ್ಕೆ ಖುಷಿ ಇದೆ. ಇದುವರೆಗಿನ ಬಹುತೇಕ ಸಿನಿಮಾಗಳಲ್ಲಿ ದರ್ಶನ್‌ ಚಿಕ್ಕ ಕೂದಲಿನ ಹೇರ್‌ ಸ್ಟೈಲ್‌ನಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಆದರೆ ಈಗ ಇಲ್ಲಿ ದರ್ಶನ್‌ ಉದ್ದನೆಯ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕೆಎ 19 ರಿಜಿಸ್ಪ್ರೇಷನ್‌ನ ಬೈಕ್‌ ಯಾಕೆ?

ಈ ಪೋಸ್ಟರಿನ ವಿಶೇಷತೆ ಅದರ ನಂಬರ್‌ ಪ್ಲೇಟ್‌. ಅದ್ದೂರಿ ಬೈಕಿನಲ್ಲಿ ಉಲ್ಟಾನಂಬರ್‌ ಪ್ಲೇಟ್‌ ಇದೆ. ಅದರ ಮೇಲೆ ಡಿ ಬಾಸ್‌ ಎನ್ನುವುದನ್ನು ಡಿ 8055 ಎಂಬುದಾಗಿ ಬರೆದಿದೆ. ಅಲ್ಲದೇ ಇದು ಕೆಎ 19 ರಿಜಿಸ್ಪ್ರೇಷನ್‌ ಬೈಕ್‌. ಮಂಗಳೂರಿನ ರಿಜಿಸ್ಪ್ರೇಷನ್‌ ನಂಬರ್‌. ಅಲ್ಲಿಗೆ ಚಿತ್ರದ ಕತೆಗೂ ಮಂಗಳೂರಿಗೂ ಏನೋ ಸಂಬಂಧವಿದೆ ಎನ್ನುವುದನ್ನು ಸಿಂಬಾಲಿಕ್‌ ಆಗಿ ಇಲ್ಲಿ ತೋರಿಸಲಾಗಿದೆ. ಅದು ಸತ್ಯವೂ ಹೌದು ಎನ್ನುತ್ತಾರೆ ನಿರ್ಮಾಪಕ ಉಮಾಪತಿ. ‘ರಿಜಿಸ್ಪ್ರೇಷನ್‌ ಸಂಖ್ಯೆಯನ್ನು ಸುಮ್ಮನೆ ಹಾಕಿಲ್ಲ. ಆ ಸಂಖ್ಯೆಗೂ ಕತೆಗೂ ಒಂದು ಲಿಂಕ್‌ ಇದೆ. ಅದೇನು ಅನ್ನೋದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ’ ಎನ್ನುತ್ತಾರವರು.

150 ದಿನ ಚಿತ್ರೀಕರಣ

ಉಮಾಪತಿ ನಿರ್ಮಾಣದ ಈ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಒಟ್ಟು 150 ದಿನಗಳ ಚಿತ್ರೀಕರಣ. ಪಾಂಡಿಚೇರಿ, ಉತ್ತರ ಪ್ರದೇಶ, ಹೈದರಾಬಾದ್‌ಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ನಾಯಕಿ ಆಯ್ಕೆ ಆಗಿಲ್ಲ. ಕನ್ನಡದ ನಟಿಯನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಚಿಂತನೆ ಚಿತ್ರತಂಡದ್ದು.