ನಾನೆಲ್ಲಿಗೂ ಹೋಗಲ್ಲ. ಎಲ್ಲಿಗೆ ಹೋಗ್ಬೇಕು ಅಂತಲೂ ಡಿಸೈಡ್ ಮಾಡಿಲ್ಲ, ಎಲ್ಲಿಗೇ ಹೋಗಲಿ, ಯಾವ್ದೇ ಭಾಷೆಯ ಸಿನಿಮಾ ಒಪ್ಪಿಕೊಳ್ಳಲಿ ಅಲ್ಲಿ ನನಗೆ ಕತೆ ಮತ್ತು ಪಾತ್ರ ಮುಖ್ಯ. ಅದೇ ನನಗೆ ದಿಕ್ಸೂಚಿ...!
- ಹೀಗೆ ಹೇಳಿದ್ದು ‘ಕೆಜಿಎಫ್’ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ. 

‘ಅವೆಲ್ಲ ಆಧಾರ ರಹಿತ ಸುದ್ದಿಗಳು. ಒಂದಂತೂ ಸತ್ಯ. ನಾನು ಮುಂದೆ ಎಲ್ಲಿಗೆ ಹೋಗ್ಬೇಕು ಅಂತ ಈಗ ಡಿಸೈಡ್ ಮಾಡಿಲ್ಲ. ನಾನೀಗ ‘ಕೆಜಿಎಫ್’ ಚಿತ್ರದ ಬಿಡುಗಡೆಯನ್ನೇ ಎದುರು ನೋಡುತ್ತಿದ್ದೇನೆ. ಕೆಜಿಎಫ್ ಬಿಡುಗಡೆ ನಂತರ ಮುಂದೇನು ಅಂತ ಯೋಚಿಸುತ್ತೇನೆ. ಹಾಗಂತ ಇನ್ನೆಲ್ಲಿಗೋ ಹೋಗ್ಬೇಕು ಅಂತಲ್ಲ. ಹಾಗೆ ಹೋಗುವುದಕ್ಕೂ ನನಗೆ ಅವಕಾಶ ಇಲ್ಲ.ಯಾಕಂದ್ರೆ, ‘ಕೆಜಿಎಫ್’ ಚಾಪ್ಟರ್ 2ನಲ್ಲೂ ನಾನಿದ್ದೇನೆ’ ಅಂತ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶ್ರೀನಿಧಿ, ಮಾತು ಮುಂದುವರೆಸಿ, ‘ನಾನೆಲ್ಲಿಗೇ ಹೋಗಲಿ, ಯಾವ್ದೇ ಭಾಷೆಯ ಸಿನಿಮಾ ಒಪ್ಪಿಕೊಳ್ಳಲಿ, ಅಲ್ಲಿ ನನಗೆ ಕತೆ ಮತ್ತು ಪಾತ್ರ ಮುಖ್ಯ. ಅದೇ ನನಗೆ ದಿಕ್ಸೂಚಿ’ ಎಂದರು.

‘ಕೆಜಿಎಫ್’ ಬಿಡುಗಡೆಗೂ ಮುನ್ನವೇ ಕುಡ್ಲ ಕುವರಿ ಶ್ರೀನಿಧಿ ಅವರಿಗೆ ಕನ್ನಡದಲ್ಲೇ ಸಾಕಷ್ಟು ಆಫರ್ ಬಂದಿವೆ ಎನ್ನುವ ಮಾತುಗಳು ಇವೆ. ‘ಅಯೋಗ್ಯ’ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶನದ ‘ಮದಗಜ’ ಚಿತ್ರಕ್ಕೂ ಅವರ ಹೆಸರು ಕೇಳಿ ಬಂದಿದೆ. ಆ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ ಶ್ರೀನಿಧಿ ಶೆಟ್ಟಿ. ‘ಮದಗಜ’ ಚಿತ್ರಕ್ಕೆ ನಿರ್ದೇಶಕ ಮಹೇಶ್ ಸಂಪರ್ಕ ಮಾಡಿದ್ದು ನಿಜ. ಆದರೆ ನಾನು ಒಪ್ಪಿಕೊಂಡಿಲ್ಲ. ‘ಕೆಜಿಎಫ್’ ಚಿತ್ರ ತೆರೆ ಕಾಣುವವರೆಗೂ ಯಾವುದೇ ಹೊಸ ಪ್ರಾಜೆಕ್ಟ್ ಬಗ್ಗೆ ನಾನು ಮಾತನಾಡುವುದಿಲ್ಲ ಅಂತ ಹೇಳಿದ್ದೇನೆ. ಹಾಗೆಯೇ ತೆಲುಗು ಚಿತ್ರವೊಂದಕ್ಕೂ ಆಫರ್ ಬಂದಿದೆ. ಆ ಚಿತ್ರದ ನಿರ್ದೇಶಕರಿಗೂ ಮಹೇಶ್ ಅವರಿಗೆ ಹೇಳಿದ ಮಾತುಗಳನ್ನೇ ಹೇಳಿದ್ದೇನೆ’ ಎನ್ನುತ್ತಾರೆ ಶ್ರೀನಿಧಿ ಶೆಟ್ಟಿ.

ನಾನು ಅದೃಷ್ಟವಂತೆ. ಅಪ್ಪ-ಅಮ್ಮ ಮಾಡಿದ ಪುಣ್ಯವೇ ಇದಕ್ಕೆ ಕಾರಣ. ಮೊದಲ ಚಿತ್ರವೇ ಇಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಅದೇ ಕಾರಣಕ್ಕೆ ಅದು ದೇಶಾದ್ಯಂತ ಸುದ್ದಿ ಆಗಿದ್ದು, ಯಶ್ ಅವರಂತಹ ಸ್ಟಾರ್ ನಟರ ಜತೆಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದು ಎಲ್ಲವೂ ಕನಸೋ, ನನಸೋ ಎನ್ನುವ ಹಾಗೆ ಪುಳಕ ಹುಟ್ಟಿಸಿದೆ. ನಾನೆಂದಿಗೂ ಕನ್ನಡ ಮತ್ತು ಕನ್ನಡದ ಪ್ರೇಕ್ಷಕರಿಗೆ ಆಭಾರಿ. ನಟಿಯಾಗಿದ್ದಷ್ಟು ಕಾಲ ಆ ನೆನಪು ಇದ್ದೇ ಇರುತ್ತೆ, ಕನ್ನಡಕ್ಕೆ ಯಾವತ್ತೂ ಮೊದಲ ಆದ್ಯತೆ - ಶ್ರೀನಿಧಿ ಶೆಟ್ಟಿ