ಮುಂಬೈ (ಫೆ. 24):  ಬಾಲಿವುಡ್ ದಂತಕಥೆ ಸೌಂದರ್ಯದ ಖನಿ ಶ್ರೀದೇವಿ ಅಗಲಿ ಇಂದಿಗೆ ಒಂದು ವರ್ಷ. ಇಂದು ಅವರ ಪುಣ್ಯತಿಥಿ. ಬೋನಿ ಕಪೂರ್, ಜಾಹ್ನವಿ ಸೇರಿದಂತೆ ಕುಟುಂಬಸ್ಥರು ಚೆನ್ನೈನಲ್ಲಿ ಪುಣ್ಯತಿಥಿ ನೆರವೇರಿಸಲಿದ್ದಾರೆ. 

ಶ್ರೀದೇವಿಯದ್ದು ಕಲರ್ ಫುಲ್ ವ್ಯಕ್ತಿತ್ವ. ಇವರ ನಟನೆ, ನೃತ್ಯ, ಡ್ರೆಸ್ಸಿಂಗ್ ಸೆನ್ಸ್ ಎಲ್ಲವೂ ಢಿಫರೆಂಟ್. ಶ್ರೀದೇವಿ ಸೀರೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ವೆರೈಟಿ, ವೆರೈಟಿ ಸೀರೆಗಳನ್ನು ಉಡುತ್ತಿದ್ದರು. ಇವರು ಉಡುತ್ತಿದ್ದ ಸೀರೆಗಳು ಆ ಕಾಲದಲ್ಲಿ ಭಾರೀ ಟ್ರೆಂಡಾಗುತ್ತಿದ್ದವು. ಇವರು ಉಡುವ ಸೀರೆಗಳನ್ನು ನೋಡುವ ಮಹಿಳಾ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದರು. 

ಕೈಮಗ್ಗದಿಂದ ತಯಾರಿಸಲಾಗಿರುವ ಕೋಟಾ ಸೀರೆಗಳೆಂದರೆ ಶ್ರೀದೇವಿಯವರಿಗೆ ಸಿಕ್ಕಾಪಟ್ಟೆ ಫೇವರೇಟ್. ಇಂದು ಅವರ ಪುಣ್ಯ ತಿಥಿ ಇರುವುದರಿಂದ ಈ ಸೀರೆಗಳನ್ನು ಆನ್ ಲೈನ್ ನಲ್ಲಿ ಹರಾಜಿಗಿಡಲಾಗಿದೆ. 40 ಸಾವಿರದಿಂದ ಶುರುವಾದ ಹರಾಜು ಇದೀಗ 1 ಲಕ್ಷ 30 ಸಾವಿರಕ್ಕೆ ತಲುಪಿದೆ. 

ಈ ಹರಾಜಿನಿಂದ ಬಂದ ಹಣವನ್ನು ಶ್ರೀದೇವಿ ಕುಟುಂಬದವರು ಕನ್ಸರ್ನ್ ಇಂಡಿಯಾ ಫೌಂಡೇಶನ್ ಗೆ ಕೊಡಲು ನಿರ್ಧರಿಸಿದ್ದಾರೆ. ಇದೊಂದು ಚಾರಿಟೇಬಲ್ ಟ್ರಸ್ಟ್ ಆಗಿದ್ದು ಇದು ಮಹಿಳೆ, ಮಕ್ಕಳು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತದೆ. 

ಶ್ರೀದೇವಿ ಫೆ. 24, 2018 ರಂದು ದುಬೈನ ಹೋಟೆಲ್ ವೊಂದರಲ್ಲಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇವರ ಸಾವು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿತ್ತು.