ಕಾರ್ಮಿಕರ ಪಾಲಿನ ಆಪತ್ಭಾಂದವ| ಮುಂದುವರೆದಿದೆ ಬಾಲಿವುಡ್‌ ನಟ ಸೋನು ಸೂದ್ ಸೇವೆ| ತಮಿಳುನಾಡಿನ ಇನ್ನೂರಕ್ಕೂ ಅಧಿಕ ಇಡ್ಲಿ ಮಾರಾಟಗಾರರನ್ನು ಸುರಕ್ಷಿತವಾಗಿ ತವರಿಗೆ ತಲುಪಿಸಿದ ಸೋನು

ಮುಂಬೈ(ಜೂ.07): ಕೊರೋನಾ ಮಹಾಮಾರಿಯಿಂದ ದೇಶದಲ್ಲಿ ಅನೇಕರ ಜೀವನ ಶೈಲಿ ಬದಲಾಗಿದೆ. ಈ ಹಿಂದೆ ಯಾವತ್ತೂ ಹೊರಗೆ ಓಡಾಡುತ್ತಿದ್ದವರು ಇಂದು ಅಗತ್ಯವಿದ್ದಾಗಲಷ್ಟೇ ಹೊರ ಹೋಗುತ್ತಿದ್ದಾರೆ. ಈ ಬದಲಾದ ಜೀವನಶೈಲಿಗೆ ಪ್ರಮುಖ ಕಾರಣ ಲಾಕ್‌ಡೌನ್. ಆದರೆ ಈ ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಕಾರ್ಮಿಕ ವರ್ಗ. ಅತ್ತ ಕೆಲಸ ಇಲ್ಲದೇ, ಇತ್ತ ಹಣವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿರುವಾಗ ಮಹಾರಾಷ್ಟ್ರದಲ್ಲಿ ಸಿಲುಕಿದ ಕಾರ್ಮಿಕರ ಪಾಲಿಗೆ ಆಪತ್ಭಾಂದವನಾಗಿ ನೆರವಿಗೆ ಬಂದಿದ್ದು ಸೋನು ಸೂದ್. ಕಾರ್ಮಿಕರಿಗಾಗಿ ಬಸ್, ವಿಮಾನ, ರೈಲು ಹೀಗೆ ತಮ್ಮಿಂದ ಹೇಗೆ ಸಾಧ್ಯವೋ ಹಾಗೆ ಕಾರ್ಮಿಕರನ್ನು ಕಳುಹಿಸಿಕೊಟ್ಟಿದ್ದಾರೆ.

ಕಾರ್ಮಿಕರ ಪಾಲಿನ ದೇವದೂತನಂತೆ ಅವರ ಸೇವೆ ಮಾಡುತ್ತಿರುವ ಸೋನು ಸೂದ್ ಸದ್ಯ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ತಮಿಳುನಾಡಿನ ಸುಮಾರು 700 ಇಡ್ಲಿ ಮಾರಾಟಗಾರರನ್ನು ಅವರ ತವರೂರಿಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅದಕ್ಕೂ ವಿಶೇಷವೆಂದರೆ ನಿಸ್ವಾರ್ಥವಾಗಿ ಈ ಕಾರ್ಮಿಕರ ಸೇವೆ ಮಾಡುತ್ತಿರುವ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರು ಆರತಿ ಬೆಳಗಿ ಧನ್ಯವಾದ ತಿಳಿಸಿದ್ದಾರೆ.

View post on Instagram

ಸದ್ಯ ಈ ಆರತಿ ಬೆಳಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಮಹಾಮಾರಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ಕಾರ್ಮಿಕರನ್ನು ಹತ್ತು ಬಸ್‌ಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸೋನು ಸೂದ್ ಕಳುಹಿಸಿಕೊಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ತೆರೆ ಮೇಲೆ ವಿನ್ ಪಾತ್ರ ಮಾಡುವ ಸೋನು ನಿಜ ಜೀವನದ ಹೀರೋ ಎಂಬ ಬಿರುದು ಪಡೆದಿದ್ದಾರೆ.