ಬಾಲಿವುಡ್ ಬೆಡಗಿಯರ ಮದುವೆ ಸುದ್ದಿಗಳು ಬಹಳ ಬೇಗ ಎಲ್ಲೆಡೆ ಗಾಳಿಗಿಂತ ವೇಗವಾಗಿ ಸಾಗಿಬಿಡುತ್ತವೆ. ಈಗ ಆ ಸರದಿ ಸೋನಂ ಕಪೂರ್ ಅವರದ್ದು. ಹಿಂದೆಯೂ ಸಾಕಷ್ಟು ಬಾರಿ ಸೋನಂ ಸಂಸಾರ ಜೀವನಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿಗಳು ಸದ್ದಾಗಿದ್ದವು. ಆದರೆ ಈಗ ಹಬ್ಬಿರುವ ಸುದ್ದಿ ಸ್ವಲ್ಪ ಗಟ್ಟಿಯಾಗಿದೆ. ವಾರದಿಂದ ಸೋನಂ ಮನೆಯಲ್ಲಿ ನಡೆಯುತ್ತಿರುವ ಎಲ್ಲಾ ಸಂಭ್ರಮಗಳನ್ನು ನೋಡಿದರೆ ಹೌದು ಸೋನಂ ಸಂಸಾರಿಯಾಗುವುದು ಪಕ್ಕಾ ಎನ್ನುವುದು ತಿಳಿಯುತ್ತಿದೆ.

ಮೊನ್ನೆ ಮುಂಬೈನಲ್ಲಿರುವ ಸೋನಂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮನೆಯ ಸುತ್ತೆಲ್ಲವೂ ರಂಗು ರಂಗಿನ ದೀಪದ ರಂಗೋಲಿ, ನೋಡಿದಲ್ಲಿ ಸಂಬಂಧಿಗಳು, ತಾರೆಯರ ದಂಡು, ಒಬ್ಬರ ಹಿಂದೆ ಮತ್ತೊಬ್ಬರು ಬಂದು ಜಮಾಯಿಸಿ ನೋಡನೋಡುತ್ತಿದ್ದಂತೆ ಜನ ಜಾತ್ರೆಯಾಗಿತ್ತು. ಕರಣ್ ಜೋಹರ್, ಫರಾನ್ ಖಾನ್, ಕುಟುಂಬಸ್ಥರು, ಬಾಲಿವುಡ್ ಖ್ಯಾತ ಫ್ಯಾಷನ್ ಡಿಸೈನರ್‌ಗಳು ಆ ಸಂಭ್ರಮದ ಭಾಗವಾಗಿದ್ದರು. ಇದೆಲ್ಲವನ್ನೂ ನೋಡಿದರೆ ಸೋನಂ ಮನೆಯಲ್ಲಿ ಸದ್ಯ ಬೇರೆ ಯಾವುದೇ ವಿಶೇಷ  ಕಾರ್ಯಕ್ರಮಗಳಿಲ್ಲ. ಹಾಗಾಗಿ ಇದು ಸೋನಂ ಎಂಗೇಜ್‌ಮೆಂಟ್ ತಯಾರಿಯೇ ಇರಬೇಕು ಎಂದು ಸುಲಭವಾಗಿ ಅಂದಾಜು ಮಾಡಿದ್ದರು ಅಭಿಮಾನಿಗಳು.

ಮಾಧ್ಯಮಗಳಿಗೆ ಸದ್ಯ ಯಾವುದೇ ಗುಟ್ಟು ರಟ್ಟು ಮಾಡಿಲ್ಲದೇ ಇದ್ದರೂ, ಅವರ ಆಪ್ತ ವಲಯಗಳಿಂದ ಮೇ 9 ರಿಂದ 19 ರ ಒಳಗೆ ಮದುವೆಯಾಗಲಿದೆ ಎನ್ನುವ ಸ್ದುಯೂ ಹರಿದಾಡುತ್ತಿದೆ. ಅದು ಏನೇ ಆಗಲಿ ಅಧಿಕೃತವಾಗಿ ಸೋನಂ ನಿಕಾ ಪಕ್ಕ ಆಗುವವರೆಗೂ ಏನೂ ಹೇಳಲಿಕ್ಕೆ ಆಗದು. ಸದ್ಯಕ್ಕೆ ಸೋನಂ ಅಭಿಮಾನಿಗಳು ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿಶ್ಚಿಂತೆಯಿಂದ ಕಾಲ ದೂಡಬಹುದು.