ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಗಾಯಕಿ ಎಸ್.ಜಾನಕಿ, ಒಂದು ಹಾಡನ್ನು ಹಾಡಲಾಗದೆ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿತ್ತು. ಆ ಕುತೂಹಲಕಾರಿ ಘಟನೆಯ ಬಗ್ಗೆ ಇಲ್ಲಿದೆ ಮಾಹಿತಿ.
ಚಿತ್ರರಂಗದಲ್ಲಿ ಅನೇಕ ಸಂಗೀತ ನಿರ್ದೇಶಕರು ಬಂದರೂ, ಇಳಯರಾಜ ಅವರಿಗೆ ತಮ್ಮದೇ ಆದ ವಿಶೇಷ ಸ್ಥಾನವಿದೆ. ಹಳ್ಳಿಯ ಸೊಗಡಿನ ಹಾಡುಗಳಿಂದ ಹಿಡಿದು ಎಲ್ಲಾ ಪ್ರಕಾರದ ಸಂಗೀತವನ್ನು ನೀಡಿರುವ ಅವರು, ಮೂರು ತಲೆಮಾರುಗಳ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ದುಃಖ, ಸಂತೋಷ, ಅಳು, ನಗು ಹೀಗೆ ಯಾವುದೇ ಭಾವನೆಗಾದರೂ ಅಭಿಮಾನಿಗಳು ಇಳಯರಾಜ ಅವರ ಸಂಗೀತವನ್ನೇ ಕೇಳುತ್ತಾರೆ. ಕೆಲವರಂತೂ ರಾತ್ರಿ ನಿದ್ದೆ ಮಾಡಲು ಸಹ ಇಳಯರಾಜ ಸಂಗೀತವನ್ನು ಕೇಳುವುದುಂಟು.
ಇಳಯರಾಜ ಅವರು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ತಮ್ಮ ಅನೇಕ ಚಿತ್ರಗಳಲ್ಲಿ ಎಸ್.ಜಾನಕಿ ಅವರಿಂದ ಹಾಡಿಸಿದ್ದಾರೆ. ಜಾನಕಿ ಅವರ ಧ್ವನಿ ಇಳಯರಾಜ ಅವರ ಜಾನಪದ ಶೈಲಿಯ ಸಂಗೀತಕ್ಕೆ ಹೇಳಿ ಮಾಡಿಸಿದಂತಿತ್ತು. ಹೀಗಾಗಿ, ಇಳಯರಾಜ ಅವರು ಜಾನಕಿ ಅವರನ್ನು ತಮ್ಮ ಆಸ್ಥಾನ ಗಾಯಕಿಯನ್ನಾಗಿ ಮಾಡಿಕೊಂಡಿದ್ದರು. ಇಳಯರಾಜ ಅವರಿಗೆ ಅನೇಕ ಹಿಟ್ ಹಾಡುಗಳನ್ನು ನೀಡಿದ ಜಾನಕಿ, ಅವರದ್ದೇ ಒಂದು ಹಾಡನ್ನು ಹಾಡಲಾಗದೆ ಅತ್ತ ಘಟನೆಯೂ ನಡೆದಿದೆ. ಈ ಬಗ್ಗೆ ಜಾನಕಿ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಜಾನಕಿ ಅವರು ವೇದಿಕೆ ಮೇಲೆ ಅಥವಾ ರೆಕಾರ್ಡಿಂಗ್ ಥಿಯೇಟರ್‌ನಲ್ಲಿ ಹಾಡುವಾಗ ಭಾವುಕರಾಗುತ್ತಿರಲಿಲ್ಲ. ಅವರ ದೇಹ ಕೂಡ ಅಲುಗಾಡುತ್ತಿರಲಿಲ್ಲ. ಒಂದೇ ಕಡೆ ನಿಂತು ಹಾಡುತ್ತಿದ್ದರು. ಆದರೆ, ಇಳಯರಾಜ ಅವರ ಒಂದು ಹಾಡು ಅಂತಹ ಜಾನಕಿ ಅವರನ್ನೇ ಅಲುಗಾಡಿಸಿತ್ತು. ಆ ಹಾಡೇ 'ಅಚ್ಚಾಣಿ' ಚಿತ್ರದ 'ಮಾತಾ ಉನ್ ಕೋವಿಲಿಲ್..'. 1978ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಮುತ್ತುರಾಮನ್, ಲಕ್ಷ್ಮಿ, ಅಶೋಕನ್, ಮನೋರಮಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ನಾಲ್ಕೂ ಹಾಡುಗಳು ಜನಪ್ರಿಯವಾಗಿದ್ದವು.
ಎಸ್ ಜಾನಕಿ ಹಾಡಿದ 'ಮಾತಾ ಉನ್ ಕೋವಿಲಿಲ್..' ಹಾಡು ಇಂದಿಗೂ ದೇವಸ್ಥಾನದ ಹಬ್ಬಗಳಲ್ಲಿ ಕೇಳಿಬರುತ್ತದೆ. ಈ ಹಾಡನ್ನು ಕೇವಲ 3 ಗಂಟೆಯಲ್ಲಿ ಸಿದ್ಧಪಡಿಸಲಾಗಿತ್ತು ಎಂದು ಇಳಯರಾಜ ಅವರ ಸಹೋದರ ಗಂಗೈ ಅಮರನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ರೆಕಾರ್ಡಿಂಗ್ ಥಿಯೇಟರ್‌ನಲ್ಲಿ ಈ ಹಾಡನ್ನು ಹಾಡುವಾಗ ಜಾನಕಿ ಅವರು ತುಂಬಾ ಭಾವುಕರಾಗಿದ್ದರು. ವಾಲಿ ಅವರ ಸಾಹಿತ್ಯ ಹಾಗೂ ಇಳಯರಾಜ ಅವರ ಸಂಗೀತ ಅವರನ್ನು ಅಳುವಂತೆ ಮಾಡಿತ್ತು. ಹಾಡುತ್ತಲೇ ಇದ್ದ ಜಾನಕಿ, ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ್ದರು.
ಜಾನಕಿಯವರನ್ನು ಅಳಿಸಿದ ಸಾಲುಗಳು
ಯೇಸುವನ್ನು ಹೆರದೇ ತಾಯಿಯಾದ ಮೇರಿ ಮಾತೆಯನ್ನು ಕುರಿತ 'ಪಿಳ್ಳೈ ಪೆರಾದ ಪೆಣ್ಮೈ ತಾಯಾನದು, ಅನ್ನೈ ಇಲ್ಲಾದ ಮಗನೈ ತಾಲಾಟ್ಟುದು..' (ಮಕ್ಕಳನ್ನು ಹೆರದ ಹೆಣ್ಣು ತಾಯಿಯಾದಳು, ತಾಯಿಯಿಲ್ಲದ ಮಗನಿಗೆ ಜೋಗುಳ ಹಾಡುತ್ತಿದ್ದಾಳೆ) ಎಂಬ ಸಾಲುಗಳನ್ನು ಕೇಳಿದಾಗ ಜಾನಕಿ ಕಣ್ಣೀರಿಟ್ಟರು. ಅವರು ಹಾಡುವುದನ್ನು ನಿಲ್ಲಿಸಿದಾಗ, ಸ್ಟುಡಿಯೋದಲ್ಲಿದ್ದವರೆಲ್ಲರೂ 'ಏನಾಯಿತು' ಎಂದು ಕೇಳಿದರು. 'ಈ ಸಾಲುಗಳನ್ನು ಹಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಇವು ನನ್ನನ್ನು ಏನೋ ಮಾಡುತ್ತಿವೆ' ಎಂದು ಹೇಳಿ ಅತ್ತರು. ನಂತರ ಇಳಯರಾಜ ಅವರು ಜಾನಕಿ ಅವರನ್ನು ಸಮಾಧಾನಪಡಿಸಿ, ಕೆಲವು ಗಂಟೆಗಳ ವಿರಾಮ ನೀಡಿ, ಮತ್ತೆ ಹಾಡನ್ನು ರೆಕಾರ್ಡ್ ಮಾಡಿದರು. ಈ ಹಾಡನ್ನು ಹಾಡುವಾಗ ಜಾನಕಿ ಹೇಗೆ ಅತ್ತರೋ, ಹಾಗೆಯೇ ಈ ಹಾಡನ್ನು ಕೇಳುವ ಅನೇಕರು ಕಣ್ಣೀರು ಹಾಕುವುದು ಇಂದಿಗೂ ರೂಢಿ. ಇದೇ ಈ ಹಾಡಿನ ದೊಡ್ಡ ಯಶಸ್ಸಿಗೆ ಕಾರಣವಾಯಿತು.


