ಬೆಂಗಳೂರು (ಜ. 11): ಗಾಯಕ ನವೀನ್‌ ಸಜ್ಜು ಹಾಡಿದ ‘ಊರ್ವಶಿ ಅವಳು...’ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.‘ಎಣ್ಣೆ ನಮ್ದು , ಊಟ ನಿಮ್ದು ’ಹಾಡಿನ ನಂತರ ನವೀನ್‌ ಸಜ್ಜು ಭರ್ಜರಿ ಸದ್ದು ಮಾಡುತ್ತಿದ್ದಾರೆ.

ಅಂದ ಹಾಗೆ, ಇದು ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ಹಾಡು. ಸಿರಿ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಡಾ. ಮಂಜುನಾಥ್‌ ನಿರ್ಮಾಣದ ಈ ಚಿತ್ರಕ್ಕೆ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಕಿರಿಕ್‌ ಪಾರ್ಟಿ’ ಖ್ಯಾತಿಯ ಚಂದನ್‌ ಆಚಾರ್ಯ ಹಾಗೂ ಸಂಜನಾ ಆನಂದ್‌ ಅಭಿನಯದ ಈ ಚಿತ್ರವೀಗ ಮೊದಲ ಹಾಡಿನೊಂದಿಗೆ ಸದ್ದು ಮಾಡುತ್ತಿದೆ.

ಆ ಮೊದಲ ಹಾಡೇ ಉರ್ವಶಿ ಅವಳು...ನನ್ನ ಬೇವರ್ಸಿ ಮಾಡಿದ್ಲು’ ಎನ್ನುವ ಸಾಹಿತ್ಯಕ್ಕೆ ಆರವ್‌ ರಿಶಿಕ್‌ ಸಂಗೀತ ಸಂಯೋಜನೆ ಮಾಡಿದ್ದು, ನವೀನ್‌ ಸಜ್ಜು ಧ್ವನಿ ನೀಡಿದ್ದಾರೆ. ಅದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಿರ್ದೇಶಕ ಕುಮಾರ್‌ ಅವರೇ ಸಾಹಿತ್ಯ ನೀಡಿದ್ದಾರೆ. ಇದು ಲವ್‌ ಪ್ಯಾಥೋ ಸಾಂಗ್‌. ಟಪ್ಪಾಂಗುಚ್ಚಿ ಶೈಲಿಯಲ್ಲಿ ಮೂಡಿ ಬಂದಿದೆ. ಕನಕ ಚಿತ್ರದಲ್ಲಿನ ‘ಎಣೆ ನಮ್ದು , ಊಟ ನಿಮ್ದು ’ಹಾಡಿನೊಂದಿಗೆ ನವೀನ್‌ ಸಜ್ಜು ಭರ್ಜರಿ ಸೌಂಡ್‌ ಮಾಡಿದ್ದರು. ಆಗ ಅವರು ಎಲ್ಲೇ ಹೋದರು ಆ ಹಾಡಿಗೆ ಭರ್ಜರಿ ಬೇಡಿಕೆಯಿತ್ತು.

ಈಗ ಅದೇ ಹಾಡಿನಂತೆ ವೈರಲ್‌ ಆಗಿದೆ ‘ಊರ್ವಶಿ ಅವಳು...’ ಹಾಡು. ‘ಒಂದೊಳ್ಳೆ ಕತೆ ಇಟ್ಟುಕೊಂಡೆ ಸಿನಿಮಾ ಮಾಡಿದ್ದೇವೆ. ಕತೆಗೆ ತಕ್ಕಂತೆ ಒಳ್ಳೆಯ ಹಾಡು ಕೊಡಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು. ಆ ಪ್ರಕಾರವೇ ಚಿತ್ರದ ಒಂದು ಪಾತ್ರವನ್ನೇ ಆಧರಿಸಿ ಈ ಹಾಡು ಬರೆದೆ. ಅದಕ್ಕೆ ಅದ್ಭುತವಾಗಿ ರಿಶಿಕ್‌ ಸಂಗೀತ ನೀಡಿದರು.

ಹಾಗೆಯೇ ನವೀನ್‌ ಅವರ ಧ್ವನಿ ಸೊಗಸಾಗಿ ಮೂಡಿ ಬಂತು. ಅದರ ಪ್ರತಿಫಲ ಈಗ ಗೊತ್ತಾಗುತ್ತಿದೆ. ಲಿರಿಕಲ್‌ ವಿಡಿಯೋಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕುಮಾರ್‌. ಇದೇ ಖುಷಿಯಲ್ಲೀಗ ಚಿತ್ರ ತಂಡ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟ್ರೇಲರ್‌ ಲಾಂಚ್‌ಗೆ ಸಿದ್ಧತೆ ನಡೆಸಿದೆ.