ಕಲರ್ಸ್ ಸೂಪರ್‌ನಲ್ಲಿ ಸೂಪರ್ ಹಿಟ್ ಹಾಸ್ಯ ಧಾರಾವಾಹಿ!
ಹತ್ತು ವರ್ಷಗಳ ಹಿಂದೆ ಹಾಸ್ಯಪ್ರಿಯರನ್ನ ನಗಿಸಿ ಯಶಸ್ವಿಯಾಗಿ 1162 ಕಂತುಗಳನ್ನು ಪೂರೈಸಿದ ಸಿಲ್ಲಿ ಲಲ್ಲಿ ಮತ್ತೆ ಕಿರುತೆರೆಯ ಮೇಲೆ ಮೇ 20ರಂದು ರಾತ್ರಿ 9.00 ಗಂಟೆಗೆ ಕಲರ್ ಸೂಪರ್ ಚಾನಲ್‌ನಲ್ಲಿ ಪ್ರಸಾರವಾಗಲಿದೆ.
ದಿನಕ್ಕೆ ಒಂದು ಕತೆಯಂತೆ ವಿವಿಧ ಘಟನೆಗಳ ಮೂಲಕ ರಂಜಿಸುವ ‘ಸಿಲ್ಲಿ ಲಲ್ಲಿ’ ಈ ಮೊದಲು ಪ್ರಸಾರವಾದಾಗ ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಇಲ್ಲಿ ಇರುವ ಪಾತ್ರಗಳು ಒಟ್ಟು ಒಂಭತ್ತು. ಇವರನ್ನು ನವರತ್ನಗಳು ಎನ್ನಿ, ನವಗ್ರಹಗಳು ಎನ್ನಿ ಅಥವಾ ನವರಸಗಳನ್ನು ನೀಡುವ ಕಲಾವಿದರು ಎನ್ನಿ.
ಇಲ್ಲಿ ಮುಖ್ಯ ಪಾತ್ರಡಾ. ವಿಠಲ್‌ರಾವ್ ಎಂಬಿಬಿಎಸ್. ಇವರ ಕ್ಲಿನಿಕ್‌ಗೆ ಯಾರೇ ಬಂದರೂ ಡಾಕ್ಟರ್ ಕೇಳುವುದು ‘ಐ ಆ್ಯಮ್ ವಿಠಲ್‌ರಾವ್ ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿ, ವಾಟ್ಸ್ ಯುವರ್ ಪ್ರಾಬ್ಲಂ? ಓಪನ್ ಯುವರ್ ಮೌತ್ ಆ್ಯಂಡ್ ಷೋ ಮೀ ಯುವರ್ ಲಾಂಗ್ ಟಂಗ್ !’ ಇದು ಮ್ಯಾನರಿಸಂ ಡೈಲಾಗ್. ಕಂತೆಗೆ ತಕ್ಕ ಬೊಂತೆ ಎಂಬಂತೆ ಕಾಂಪೌಂಡರ್ ಗೋವಿಂದ ‘ಅರ್ಥವಾಯ್ತು’ ಎನ್ನುತ್ತಾ ಡಾಕ್ಟರ್ ಪರಿಸ್ಥಿತಿಯನ್ನು, ರೋಗಿಗಳ ಗ್ರಹಚಾರವನ್ನು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿರುತ್ತಾನೆ.
ಇನ್ನು ನರ್ಸ್ ಮೇಡ್ ಲಲ್ತಾಗೆ ಮನೆಯಲ್ಲೂ ಕೆಲಸ, ಕ್ಲಿನಿಕ್‌ನಲ್ಲೂ ಕೆಲಸ. ಈಕೆ ಸಹಾಯಕಿ. ಡಾಕ್ಟರ್ ಸ್ಟೆಥಾಸ್ಕೋಪ್ ಮೇಲಿರುವ ಧೂಳನ್ನು ಒರೆಸಿ ಕೊಡುವವಳು ಇವಳೇ. ಮನೆಯಲ್ಲಿ ಯಜಮಾನಮ್ಮ ಇದ್ದಾಳೆ. ಹೆಸರು ‘ಲಲಿತಾಂಬ’. ‘ಲಲ್ತಾ’ ಅಂತ ಡಾಕ್ಟರ್ ಕರೆದಾಗ ಮನೆ ಯಜಮಾನಿ ಲಲ್ತಾ ಜೊತೆಗೆ ‘ಎನ್ನೆಮ್ಮೆಲ್’ ಸಹ ಓಗೊಡುತ್ತಾಳೆ. ಇಬ್ಬರದೂ ಒಂದೇ ಹೆಸರು. ಹೆಸರಿನ ಕನ್‌ಫä್ಯಷನ್ನಲ್ಲಿ ಡಾಕ್ಟರ್‌ಗೆ ಸಿಟ್ಟು ಬಂದು ಇದರಿಂದ ಇತರರಿಗೆ ತೊಂದರೆಯಾಗುತ್ತದೆ.
ಇನ್ನು ಕೆಲಸಕ್ಕೋಸ್ಕರ ಪರದಾಡುತ್ತಿರುವ ಸೋದರ ‘ಪಲ್ಲಿ’, ಕಾದಂಬರಿಯನ್ನು ಬರೆಯುವ ಹುಚ್ಚಿರುವ ಸೋದರಿ ‘ಸಿಲ್ಲಿ’ ವಿಶಿಷ್ಟರೀತಿಯಲ್ಲಿ ಹಾಸ್ಯವನ್ನ ಉಣಬಡಿಸುತ್ತಾರೆ. ನೆರೆಮನೆಯ ದಂಪತಿಗಳಾದ ‘ರಂಗನಾಥ್ ಮತ್ತು ವಿಶಾಲು’ ಡಾಕ್ಟರ್ ಮೇಲೆ ಪ್ಯಾರಾಸೈಟುಗಳಾಗಿ ಬದುಕುತ್ತಿದ್ದಾರೆ. ಯಾವುದೇ ಕೆಲಸವನ್ನು ವಹಿಸಿದರೂ ‘ಒಂದಿಷ್ಟುಹಣಕೊಡಿ, ಎಲ್ಲಾ ನಾನು ಮಾಡ್ತೀನಿ’ ಎನ್ನುತ್ತಾನೆ ರಂಗನಾಥ. ಲಲ್ತಾ ಮೇಡಂ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾಡಿದರೂ ‘ಚಪ್ಪಾಳೆ’ ಎಂದು ಸಭಿಕರನ್ನು ವಿಶಾಲು ಹುರಿದುಂಬಿಸುತ್ತಾಳೆ. ಇವರಿಗೆ ಇರುವ ಬೆಪ್ಪು ಮಗಳಾದ ಗುಡ್ ಫಾರ್ ನಥಿಂಗ್ ‘ಸೂಜಿ’ ಇವಿಷ್ಟುಪಾತ್ರಗಳು ಪ್ರಮುಖವಾಗಿವೆ.
ಡಾಕ್ಟರ್ ವಿಠಲ್‌ರಾವ್ ತನ್ನ ಗುರುವಾಗಿದ್ದ ಡಾ. ಬೇವಿನಳ್ಳಿ ಚಂದ್ರಶೇಖರ್‌ಗೆ ಶಸ್ತ್ರಚಿಕಿತ್ಸೆ ಮಾಡುವಾಗ ನಿಮ್ಮನ್ನು ನೆಟ್ಟಗೆ ನಿಲ್ಲಿಸುತ್ತೇನೆ ಎಂದು ಹೇಳಿದ್ದ. ಅದರಂತೆಯೇ ನೆಟ್ಟಗೆ ನಿಲ್ಲಿಸಿದ್ದಾನೆ. ಸ್ಕೆಲಿಟನ್ ರೂಪದಲ್ಲಿ! ಆದರೂ ಬಿಹೆಚ್‌ಸಿಗೆ ತನ್ನ ಶಿಷ್ಯನ ಮೇಲೆ ಸಿಟ್ಟಿಲ್ಲ. ಸ್ಕೆಲಿಟನ್ ಆಗಿ ತೂಗಾಡುತ್ತಾ ಡಾಕ್ಟರ್‌ಗೆ ವಿವಿಧ ಸಲಹೆಗಳನ್ನು ಗುರು ಕೊಡುತ್ತಾನೆ. ಈತನ ಮಾತು ಡಾಕ್ಟರ್‌ಗೆ ಮಾತ್ರ ಕೇಳಿಸುತ್ತದೆ.
’ಸಿಲ್ಲಿಲಲ್ಲಿ’ ಮತ್ತೊಮ್ಮೆ ನಿಮ್ಮ ಮುಂದೆ; ಕ್ಷಮೆ ಕೇಳಿದ ವಿಠ್ಠಲ್ ರಾವ್
ಸಮಾಜ ಸೇವಕಿ ಲಲಿತಾಂಬ ರಾಜ್ಯದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಆಗಬೇಕೆಂಬ ಕನಸನ್ನು ಹೊತ್ತಿದ್ದಾಳೆ. ಯಾರೇ ಸಿಕ್ಕರೂ ‘ನನ್ನ ನಂಬಿ, ನನ್ನ ನಂಬಿ’ ಎಂದು ನಮಸ್ಕಾರ ಮಾಡುವ ಈಕೆಯನ್ನುಡಾಕ್ಟರ್ ಮುದ್ದು ಮಾತಲ್ಲಿ ‘ನಂಬಿ ಡಾರ್ಲಿಂಗ್’ ಎಂದೇ ಕರೆಯುತ್ತಾನೆ.
ಸಿಹಿಕಹಿ ಚಂದ್ರು ಅವರು ನಿರ್ದೇಶಿಸುತ್ತಿರುವ ಈ ಸುಂದರ ಹಾಸ್ಯಧಾರಾವಾಹಿಗೆ ಎಂ.ಎಸ್. ನರಸಿಂಹಮೂರ್ತಿ ಕಚಗುಳಿ ಇಡುವ ಸಂಭಾಷಣೆಯನ್ನು ಬರೆದಿದ್ದಾರೆ. ಮನಸ್ಸಿಗೆ ಮುದ ನೀಡುವ ಎಲ್ಲಾ ವರ್ಗದ ಜನ, ಎಲ್ಲಾ ವರ್ಗದ ಪ್ರೇಕ್ಷಕರೂ ಆನಂದಿಸಬಹುದಾದ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಹತ್ತು ವರ್ಷಗಳ ನಂತರ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದೆ. ನುರಿತ ಹೊಸ ಕಲಾವಿದರನ್ನು ಹೊಂದಿರುವ ಈ ತಂಡ ವೀಕ್ಷಕರಿಗೆ ನಗೆಯ ರಸದೌತಣ ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.