‘ಸಿಲಿಕಾನ್‌ ಸಿಟಿ', ಹೀಗೆ ಯಾವುದೇ ಮೆಟ್ರೋ ಸಿಟಿಯ ಮಧ್ಯಮ ವರ್ಗದ ಒಳಗೆ ಹೊಕ್ಕ ಆಸೆಯ ಭೂತದ ಕತೆ, ಆಸೆಯ ಭೂತ ಹೊಕ್ಕು ಮನುಷ್ಯರನ್ನು ಅಮಾನವೀಯವಾಗಿ ಬದಲಿ​ಸುವ ಕತೆ, ತಣ್ಣನೆ ಕ್ರೌರ್ಯವೊಂದು ಸುತ್ತಿ ಸುಳಿ​ದಾಡಿ ಅಪರಾಧವನ್ನು ಹೆರುವ ಕತೆ. ತಮಿಳಿನ ‘ಮೆಟ್ರೋ' ಸಿನಿಮಾವನ್ನು ಹೆಚ್ಚುಕಡಿಮೆ ಅದೇ ಫೀಲ್‌'ನೊಂದಿಗೆ, ತೀವ್ರವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಮರಳಿ ಗುರಪ್ಪ.

ಚಿತ್ರ: ಸಿಲಿಕಾನ್‌ ಸಿಟಿ
ತಾರಾಗಣ: ಶ್ರೀನಗರ ಕಿಟ್ಟಿ, ಕಾವ್ಯ ಶೆಟ್ಟಿ, ಸೂರಜ್‌ ಗೌಡ, ಸಿದ್ಧು, ಚಿಕ್ಕಣ್ಣ ಮತ್ತಿತರರು.
ನಿರ್ಮಾಣ: ಮಂಜುಳಾ ಸೋಮಶೇಖರ್‌, ರವಿ ಎಂ, ಶ್ರೀನಗರ ಕಿಟ್ಟಿ, ಸಿಆರ್‌ ಸುರೇಶ್‌
ನಿರ್ದೇಶನ: ಮುರಳಿ ಗುರಪ್ಪ
ಸಂಗೀತ: ಅನೂಪ್‌ ಸೀಳಿನ್‌, ಜೋಹನ್‌
ಛಾಯಾಗ್ರಹಣ: ಶ್ರೀನಿವಾಸ ರಾಮಯ್ಯ

ರೇಟಿಂಗ್‌: *** 

ರಾಕ್ಷಸರು ಕೋರೆಹಲ್ಲು, ಕೆಂಪು ಕಣ್ಣು ಇಟ್ಟುಕೊಂಡು ಹುಟ್ಟುವುದಿಲ್ಲ, ಅವರು ಎಲ್ಲರಂತೇ ಹುಟ್ಟಿಕ್ರಮೇಣ ರಾಕ್ಷಸರಾಗುತ್ತಾ ಹೋಗುತ್ತಾರೆ... ಮಧ್ಯಮವರ್ಗದಲ್ಲಿ ಎಲ್ಲರಂತೇ ಹುಟ್ಟಿದ ಆ ಹುಡುಗ ಕೂಡ ಹಾಗೇ, ಅಮ್ಮನೇ ತುತ್ತಿಟ್ಟ ಮುದ್ದಿನ ಮಗ. ಅಣ್ಣನ ಬೈಕ್‌ ಹಿಂದೆ ಕುಳಿತು ಗಾಳಿಯನ್ನು ಕುಡಿಯುತ್ತಿದ್ದ ಮುಗ್ದ ಹುಡುಗ. ಬೆಂಗಳೂರಿನ ಬೀದಿ ಹಾದಿಗಳಲ್ಲಿ ಮಸುಕು ಬೆಳಕಿನ ಮಬ್ಬಿನಲ್ಲಿ ಕ್ರಮೇಣ ಅವನ ಸ್ವಭಾವಕ್ಕೆ ಕೋರೆಹಲ್ಲು ಬರುತ್ತದೆ, ಅವನ ಕಣ್ಣೊಳಗೆ ಆಸೆಯ ಕೆಂಪು ಒಸರುತ್ತದೆ, ಉಗುರು ಕತ್ತರಿಸಿಕೊಂಡ ಅವನ ಕೈ ಬೆರಳುಗಳು ಉದ್ದ ಉದ್ದವಾಗಿ ಮನುಷ್ಯರನ್ನೇ ಹಸಿಹಸಿ ಸಾಯಿಸತೊಡಗುತ್ತವೆ. ಬೈಕು ಕೊಡಿಸೋ ಅಂತ ಅಣ್ಣನ ಬೆನ್ನು ಬಿದ್ದವನು, ತುತ್ತು ತಿನ್ನಿಸು ಅಂತ ಪುಟ್ಟಹುಡುಗನಂತೆ ಅಮ್ಮನಿಗೆ ಆತುಕೊಂ​ಡವನು, ಫ್ಯಾಮಿಲಿ ಫೋಟೋದೊಳಗೆ ಅಪ್ಪನನ್ನು ತಬ್ಬಿಕೊಂಡವನು ಒಂದು ದಿನ ಬದಲಾಗುತ್ತಾನೆ. ಮಗ ಬೆಳೆದು ದೊಡ್ಡವನಾಗಿದ್ದನ್ನು ನೋಡಿದ ಅಪ್ಪಾಮ್ಮ, ಅಣ್ಣನಿಗೆ ಆತ ರಾಕ್ಷಸನಾಗಿದ್ದು ಗೊತ್ತೇ ಆಗುವುದಿಲ್ಲ.

ಈ ವಾರ ಬಿಡುಗಡೆಯಾದ ‘ಸಿಲಿಕಾನ್‌ ಸಿಟಿ', ಹೀಗೆ ಯಾವುದೇ ಮೆಟ್ರೋ ಸಿಟಿಯ ಮಧ್ಯಮ ವರ್ಗದ ಒಳಗೆ ಹೊಕ್ಕ ಆಸೆಯ ಭೂತದ ಕತೆ, ಆಸೆಯ ಭೂತ ಹೊಕ್ಕು ಮನುಷ್ಯರನ್ನು ಅಮಾನವೀಯವಾಗಿ ಬದಲಿ​ಸುವ ಕತೆ, ತಣ್ಣನೆ ಕ್ರೌರ್ಯವೊಂದು ಸುತ್ತಿ ಸುಳಿ​ದಾಡಿ ಅಪರಾಧವನ್ನು ಹೆರುವ ಕತೆ. ತಮಿಳಿನ ‘ಮೆಟ್ರೋ' ಸಿನಿಮಾವನ್ನು ಹೆಚ್ಚುಕಡಿಮೆ ಅದೇ ಫೀಲ್‌'ನೊಂದಿಗೆ, ತೀವ್ರವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಮರಳಿ ಗುರಪ್ಪ. ಪ್ರೇಕ್ಷಕರ ಎದೆಯೊಳಗೊಂದು ಆಕ್ರೋಶದ ಮಡುವನ್ನು ಎಬ್ಬಿಸುತ್ತಾ ಹೋಗುವ ಈ ಕ್ರೈಮ್‌ ಥ್ರಿಲ್ಲರ್‌, ಅಪರೂಪದ ಸರಗಳ್ಳತನದ ಒಳಸುಳಿಗಳನ್ನು ಬಿಚ್ಚಿಡುತ್ತಾ, ಬೆಚ್ಚಿ ಬೀಳಿಸುತ್ತಾ ಹೋಗುತ್ತದೆ.

ಹಾಗಂತ ಈ ನಗರದ ಕತೆಯಲ್ಲಿ ಕೆಲವು ತಾಪತ್ರಯಗಳು ಇಲ್ಲವೆಂದಲ್ಲ. ಚಿತ್ರ ಟೇಕಾಫ್‌ ಆಗುವುದು ತಡವಾಗಿ; ಮಧ್ಯೆಮಧ್ಯೆ ಹಂಪ್‌'ಗಳ ಹಾಗೆ, ಹೊಂಡಗುಂಡಿಗಳ ಹಾಗೆ ಹಾಡು, ಫ್ಯಾಮಿಲಿ ಕತೆಗಳೆಲ್ಲಾ ಬರುತ್ತವೆ, ಇನ್ನೊಂಚೂರು ಟ್ರಿಮ್‌ ಮಾಡಬಹುದಿತ್ತು ಅನ್ನಿಸುತ್ತದೆ, ಬಹಳ ಆಮೆವೇಗ ಅನ್ನಿಸುತ್ತದೆ. ಆದರೆ ಇವ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಹಾಗೆ ಮಾಡುವುದು ಮುಖ್ಯ ಕತೆಯ ತಿರುವುಗಳು, ಚೇಸಿಂಗ್‌, ಕತೆಗೆ ಇರುವ ತೀವ್ರತೆ. ಮೂಲ ಚಿತ್ರಕತೆಯನ್ನೇ ಅನುಸರಿಸಿದ್ದಾರಾದರೂ ಸುಮನ್‌ ಜಾದೂಗಾರ್‌ ಅವರ ಖಡಕ್‌ ಸಂಭಾಷಣೆ, ಛಾಯಾಗ್ರಹಣ (ಶ್ರೀನಿವಾಸ್‌ ರಾಮಯ್ಯ), ಅಭಿನಯ, ಹಿನ್ನೆಲೆ ಸಂಗೀತ(ಎಸ್‌. ಚಿನ್ನ), ಸೌಂಡ್‌ ಡಿಸೈನಿಂಗ್‌'ಗಳೆಲ್ಲಾ ಸೇರಿ ಚಿತ್ರವನ್ನೊಂದು ಅದ್ಭುತ ಪ್ಯಾಕೇಜ್‌ ಆಗಿಸಿಬಿಟ್ಟಿವೆ.

ಇಡೀ ಚಿತ್ರವನ್ನು ಹೆಗಲ ಮೇಲೆ ಇಟ್ಟು ನಡೆಸುವುದು ಸೂರಜ್‌ ಗೌಡ. ಈಗಾಗಲೇ ‘ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ಲವ್ವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದ ಸೂರಜ್‌ ಗೌಡ ಇಲ್ಲಿ ಮಧ್ಯಮವರ್ಗದ ಮಹತ್ವಾಕಾಂಕ್ಷೆಯ ಹುಡುಗನಾಗಿ, ಕ್ರಮೇಣ ಕ್ರಿಮಿನಲ್‌ ಆಗಿ ಬದಲಾಗುವ ಮೊಂಡು ಹುಡುಗನಾಗಿ ತನ್ಮಯನಾಗಿ ಅಭಿನಯಿಸಿದ್ದಾರೆ. ತಣ್ಣನೆಯ ಕ್ರೌರ್ಯ, ಕಳ್ಳಮನಸ್ಸು, ಇಡೀ ಅಂಡರ್‌'ವರ್ಲ್ಡ್ ಜಗತ್ತನ್ನೇ ಆಳುವುದಕ್ಕೆ ಹೊರಡುವ ಹುಂಬನಾಗಿ ಅವರು ಬೆಸ್ಟ್‌. ಇಡೀ ಚಿತ್ರವನ್ನು ತನಿಖೆ ಆಧಾರದಲ್ಲಿ ನೋಡುವ ಪಾತ್ರವಾಗಿ ಶ್ರೀನಗರ ಕಿಟ್ಟಿ ಚೆನ್ನಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌'ನಲ್ಲಿ ಅವರ ಮತ್ತು ಸೂರಜ್‌ ನಡುವಿನ ಹೊಡೆದಾಟ ಇಡೀ ಚಿತ್ರದ ಹೈಲೈಟ್‌. ಕಾವ್ಯ ಶೆಟ್ಟಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮಣಿ ಎಂಬ ಪಾತ್ರದಲ್ಲಿ ಸಿದ್ಧು, ಸಹಚರರಾಗಿ ವಿಶ್ವರಾಜ್‌, ಗಿರಿ, ಸ್ನೇಹಿತನಾಗಿ ಚಿಕ್ಕಣ್ಣ, ತಂದೆ ತಾಯಿಯಾಗಿ ಅಶೋಕ್‌ ಮತ್ತು ತುಳಸಿ- ಹೀಗೆ ಪ್ರತಿಯೊಬ್ಬರೂ ಚಿತ್ರಕ್ಕೆ ಅದ್ಭುತವಾಗಿ ದುಡಿದಿದ್ದಾರೆ.

ಒಂದು ನಗರ ಭಸ್ಮಾಸುರನಂತೆ ನಗರದ ಜನರಿಂದಲೇ ಉಪಕೃತವಾಗಿ, ಆ ನಗರದ ಮಧ್ಯಮ ವರ್ಗದವರ ತಲೆ ಮೇಲೇ ಕೈ ಇಡುವ ಅಪಾಯವನ್ನು ಹೇಳುವ ಇಂಥ ಸಿನಿಮಾಗಳು ಬರುವುದು ಅಪರೂಪ. ಕ್ರೈಮ್‌ ಜಾನರ್‌'ನ ಅತ್ಯಂತ ಭಯಾನಕ ಚಿತ್ರರೂಪವಾಗಿ ಸಿಲಿಕಾನ್‌ ಸಿಟಿ ಬೆಸ್ಟ್.

- ವಿಕಾಸ್ ನೇಗಿಲೋಣಿ, ಕನ್ನಡಪ್ರಭ