UK07 ರೈಡರ್ ಅಂತಾನೇ ಫೇಮಸ್ ಆಗಿರುವ ಅನುರಾಗ್ ಡೋಭಾಲ್, ತಮ್ಮ ಕೊನೆಯ ವಿಡಿಯೋದಲ್ಲಿ ಅಂತರಜಾತಿ ಮದುವೆ ವಿಚಾರವಾಗಿ ತಂದೆ-ತಾಯಿ ಮತ್ತು ಸಹೋದರನ ಮೇಲೆ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ. ಖಿನ್ನತೆ ಹಾಗೂ ಆತ್ಮಹತ್ಯೆ ಯತ್ನದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಏನಿದು ಪೂರ್ತಿ ಪ್ರಕರಣ? ಇಲ್ಲಿದೆ ವಿವರ. 

UK07 ರೈಡರ್ ಅಂತಾನೇ ಜನಪ್ರಿಯರಾಗಿರುವ, ಬಿಗ್ ಬಾಸ್ 17ರಲ್ಲೂ ಕಾಣಿಸಿಕೊಂಡಿದ್ದ ಅನುರಾಗ್ ಡೋಭಾಲ್ ( bigg boss 17 Anurag Dobhal ) ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಭಾವುಕ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, ತಮ್ಮ ತಂದೆ-ತಾಯಿ ಮತ್ತು ಸಹೋದರನ ಮೇಲೆ ಮಾನಸಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಇದೇ ನನ್ನ ಕೊನೆಯ ವಿಡಿಯೋ, ನಾನು ಯೂಟ್ಯೂಬ್ ತೊರೆಯುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರೇನ್‌ ಟ್ಯೂಮರ್‌ ಗೆದ್ದರು

ಸುಮಾರು ಎರಡು ಗಂಟೆಗಳ ಈ ವಿಡಿಯೋದಲ್ಲಿ ಅನುರಾಗ್ ಡೋಭಾಲ್ ಕಣ್ಣೀರು ಹಾಕಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಹೀಗಾಗುತ್ತದೆ ಎಂದು ತಾನು ಎಂದಿಗೂ ಊಹಿಸಿರಲಿಲ್ಲ, ತನ್ನ ಜೀವನವೇ ಬದಲಾಗಿದೆ ಎಂದು ಅವರು ಹೇಳಿದ್ದಾರೆ. ಇವರಿಗೆ 14 ವರ್ಷ ವಯಸ್ಸಿದ್ದಾಗ ಬ್ರೈನ್ ಟ್ಯೂಮರ್ ಆಗಿತ್ತು, ಆದರೂ ಧೈರ್ಯ ಕಳೆದುಕೊಳ್ಳದೆ ತನ್ನ ಕನಸುಗಳನ್ನು ನನಸಾಗಿಸಲು ಶ್ರಮಿಸಿದ್ದಾಗಿ ಅನುರಾಗ್ ವಿವರಿಸಿದ್ದಾರೆ.

ಅಂತರ್ಜಾತಿ ಮದುವೆ

ಅನುರಾಗ್, ತಮ್ಮ ಪತ್ನಿ ರಿತಿಕಾಳನ್ನು ಸೋಶಿಯಲ್ ಮೀಡಿಯಾ ಮೂಲಕ ಭೇಟಿಯಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಈ ಸಂಬಂಧಕ್ಕೆ ತಮ್ಮ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು ಎಂದು ಅವರು ಆರೋಪಿಸಿದ್ದಾರೆ. ಮದುವೆಗೆ ಕೇವಲ ಆರು ದಿನಗಳ ಮೊದಲು, ಪೋಷಕರು ಮದುವೆಗೆ ಬರಲು ನಿರಾಕರಿಸಿದರು. ಸಂಬಂಧಿಕರ ಮುಂದೆ ಕೈಮುಗಿದು ಕ್ಷಮೆ ಕೇಳುವಂತೆ ಮಾಡಿ, ಮಾನಸಿಕವಾಗಿ ಹಿಂಸೆ ನೀಡಲಾಯಿತು. ಅಂತರಜಾತಿ ಮದುವೆ ಕಾರಣಕ್ಕೆ ಕುಟುಂಬವು ಅವರನ್ನು ಮನೆಗೂ ಸೇರಿಸಲಿಲ್ಲ ಎಂದು ಅನುರಾಗ್ ಹೇಳಿದ್ದಾರೆ.

ಏನೂ ತಿಂದಿಲ್ಲ

ಈ ಮಾನಸಿಕ ಒತ್ತಡದಿಂದಾಗಿ ತಾನು ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಅನುರಾಗ್ ಡೋಭಾಲ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ತಾನು ಸದ್ಯ ತೀವ್ರ ಖಿನ್ನತೆಯಲ್ಲಿದ್ದು, ಹಲವು ದಿನಗಳಿಂದ ಏನನ್ನೂ ತಿಂದಿಲ್ಲ ಮತ್ತು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಹೆಂಡ್ತಿ ಬಿಟ್ಟು ಹೋದಳು

ಈ ಕಷ್ಟದ ಸಮಯದಲ್ಲಿ ತನ್ನ ಪತ್ನಿ ರಿತಿಕಾ ಕೂಡ ತನ್ನಿಂದ ದೂರವಾದರು ಎಂದು ಅನುರಾಗ್ ಡೋಭಾಲ್ ಹೇಳಿದ್ದಾರೆ. ತನ್ನ ಸಹೋದರ, ಸೋಶಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಬಯಲು ಮಾಡುವುದಾಗಿ ಬೆದರಿಸಿ, ತನ್ನ ಆಸ್ತಿ ಮತ್ತು ಸಾಕು ನಾಯಿಯನ್ನು ಕೂಡ ತೆಗೆದುಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಸಂದೇಶ ಕಳಿಸಿದ ಬಿಗ್‌ ಬಾಸ್‌ ಸ್ಪರ್ಧಿ

ವಿಡಿಯೋದೊಂದಿಗೆ ಅನುರಾಗ್ ಡೋಭಾಲ್ ಒಂದು ಭಾವುಕ ಸಂದೇಶವನ್ನೂ ಬರೆದಿದ್ದಾರೆ. 'ನಾನು ಹೋದ ಮೇಲೆ ಜನರು ನನ್ನ ವಿರುದ್ಧ ಏನೇ ಹೇಳಿದರೂ, ನಾನು ತಪ್ಪು ಮಾಡಿರಲಿಲ್ಲ' ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ಕನಿಷ್ಠ ತಮ್ಮ ಮಗುವಿಗಾಗಿಯಾದರೂ ಸತ್ಯದ ಪರ ನಿಲ್ಲುವಂತೆ ಅವರು ಪತ್ನಿ ರಿತಿಕಾಗೆ ಮನವಿ ಮಾಡಿದ್ದಾರೆ. ಅಂದಹಾಗೆ, ಅನುರಾಗ್ ಡೋಭಾಲ್ ಮೇ 2025 ರಲ್ಲಿ ರಿತಿಕಾ ಅವರನ್ನು ಮದುವೆಯಾಗಿದ್ದರು ಮತ್ತು ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಗರ್ಭಧಾರಣೆಯ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಸದ್ಯ ಈ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು, ಅಭಿಮಾನಿಗಳು ಅವರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.