ಇದೇ ವಾರ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕ ದೇವರಾಜ್‌ ಎಸ್‌ ಅವರು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಈಗಲೂ ಇದೇ ಯೂನಿವರ್ಸಿಟಿಯಲ್ಲಿ ಪಾಠ ಮಾಡುತ್ತಿರುವ ಮೇಸ್ಟು್ರ. ಅಲ್ಲದೆ ಚಿತ್ರದಲ್ಲಿ ಬರುವ ‘ಯೋಚಿಸಬೇಡ, ಚಿಂತಿಸಬೇಡ’ ಎಂದು ಸಾಗುವ ಹಾಡಿನ ಚಿತ್ರೀಕರಣ ಪೂರ್ತಿ ಶ್ರೀ ಸಿದ್ದಗಂಗಾ ಮಠದ ಅಂಗಳದಲ್ಲೇ ಚಿತ್ರೀಕರಣ ಮಾಡಿದ್ದಾರೆ. ಈ ಹಾಡಿನಲ್ಲಿ ಶ್ರೀ ಶಿವಕುಮಾರಸ್ವಾಮಿಗಳು ಸಹ ಕಾಣಿಸಿಕೊಂಡಿದ್ದಾರೆ. ಮಠದ ಸುತ್ತ ಹಾಗೂ ಮಠದಲ್ಲಿ ಶಾಲಾ ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡುವ ದೃಶ್ಯಗಳ ಮೂಲಕ ಇಡೀ ಹಾಡು ಮೂಡಿಬಂದಿದೆ.

‘ಹಾಡಿನಲ್ಲಿ ಮಾತ್ರವಲ್ಲ, ಇಡೀ ಸಿನಿಮಾ ಒಳ್ಳೆಯ ಸಂದೇಶದೊಂದಿಗೆ ಕೂಡಿದೆ. ಆ ಕಾರಣಕ್ಕೆ ನಮ್ಮ ಚಿತ್ರದ ಒಂದು ಹಾಡನ್ನು ಶ್ರೀ ಶಿವಕುಮಾರಸ್ವಾಮಿಗಳ ದರ್ಶನದೊಂದಿಗೆ ಚಿತ್ರೀಕರಣ ಮಾಡಿದ್ದೇವೆ. ಇದೇ ಶುಕ್ರವಾರ ಅವರು ನೀಡಿದ ಆಶೀರ್ವಾದದೊಂದಿಗೆ ಸಪ್ಲಿಮೆಂಟರಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ’ ಎನ್ನುತ್ತಾರೆ ದೇವರಾಜ್‌. ಹಾಡಿನಲ್ಲಿ ಸಮಾಜ ಸೇವಕ ಮಹೇಂದ್ರ ಮುನ್ನೋಟ್‌ ಹಾಗೂ ಚಿತ್ರದ ನಾಯಕ ಕುಶ್‌ ಕಾಣಿಸಿಕೊಂಡಿದ್ದಾರೆ.