ಶ್ರದ್ಧಾ ಎದೆ ಮೇಲಿನ ಟ್ಯಾಟೂ ಕತೆ ಏನು?
ಶ್ರದ್ಧಾ ಶ್ರೀನಾಥ್ ಎಡ ಕತ್ತಿನ ಕೆಳಗಿನ ಟ್ಯಾಟೂ ಹಿಂದಿನ ಕತೆ ಹೀಗಿದೆ
'ಈ ಟ್ಯಾಟೂ ಹಾಕಿಸಿಕೊಂಡು ಹಲವು ವರ್ಷಗಳೇ ಆದವು. ನಾನು ಸಿನಿಮಾ ಜಗತ್ತಿಗೂ ಬರುವ ಮುನ್ನದಿನಗಳವು. ಆಗ ನಾನೊಂದು 'ದಿ ಬೀಟಲ್ಸ್' ಹೆಸರಿನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದೆ. ಸಂಗೀತ ನನ್ನ ಆಸಕ್ತಿಯ ಕ್ಷೇತ್ರ. ಹಾಗಾಗಿ ಬೀಟಲ್ಸ್ ಮ್ಯೂಸಿಕ್ ಬ್ಯಾಂಡ್ ಆಯೋಜಿಸುತ್ತಿದ್ದ ಸ್ಟೇಜ್ ಶೋಗಳಲ್ಲಿ ಆಗಾಗ ಹಾಡುವುದು ನನ್ನ ಅಭ್ಯಾಸ.
ಹಾಗೆ ಹಾಡಿದ ಕಾರಣಕ್ಕೆ ಮೊಟ್ಟ ಮೊದಲ ಬಾರಿಗೆ ದಿ ಬೀಟಲ್ಸ್ ಮ್ಯೂಸಿಕ್ ಟೀಮ್ ವತಿಯಿಂದ ನನಗೆ ಎರಡು ಸಾವಿರ ರೂಪಾಯಿ ಚೆಕ್ ಕೊಟ್ಟರು. ನನಗೆ ಆಗ ಟ್ಯಾಟೂ ಹುಚ್ಚು. ಮೊದಲ ಸಂಭಾವನೆ ಎನ್ನುವುದು ನನ್ನೊಳಗೆ ಸದಾ ಕಾಲ ಇರಬೇಕು ಅಂತಲೇ ಯೋಚಿಸುತ್ತಾ ಟ್ಯಾಟೋ ಹಾಕಿಸಿಕೊಳ್ಳಲು ಮುಂದಾದೆ. ಅದು ಸರಿ, ಅದು ಯಾವ ರೀತಿಯಲ್ಲಿರಬೇಕು ಎನ್ನುವುದು ನನಗೆ ಎದುರಾದ ಪ್ರಶ್ನೆ.
ಆಗ ನನಗೆ ಹೊಳೆದಿದ್ದು ಮ್ಯೂಜಿಕ್ ಮೇಲಿನ ಪ್ರೀತಿ ಮತ್ತು ಆಸಕ್ತಿ. ಆ ಟೀಮ್ ನೆನಪು ಸದಾ ಇರಬೇಕು, ಸಂಗೀತದ ಮೇಲಿನ ಪ್ರೀತಿಯೂ ಉಳಿಯಬೇಕು ಅಂತ ಯೋಚಿಸಿ,ಟ್ಯಾಟೂ ಹಾಕುವವನಿಗೆ ಹೇಳಿದಾಗ ಆತನ ಕುಂಚದಲ್ಲಿ ಅರಳಿದ್ದೇ ಈ ಚಿತ್ರ.