ಬೆಂಗಳೂರು (ಜ. 03): ತುಂಬಾ ಹಿಂದೆಯೇ ಹುಬ್ಬಳ್ಳಿಯಲ್ಲಿ ಸೆಟ್ಟೇರಿದ್ದ ‘ಬಾದ್‌ಷಾ’ ಸಿನಿಮಾ ನಿಂತಿದೆ. ಈ ಮಾತು ಹೇಳಿದ್ದು ಸ್ವತಃ ಶಿವರಾಜ್‌ಕುಮಾರ್‌. ಜತೆಗೆ ಮತ್ತೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ. ಆರ್‌ ಚಂದ್ರು ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಸೆಟ್ಟೇರುತ್ತಿದೆ.

ಚಿತ್ರದ ಹೆಸರು ಸೇರಿದಂತೆ ತಾರಾಗಣ ಯಾವುದೂ ಇನ್ನೂ ಪಕ್ಕಾ ಆಗಿಲ್ಲ. ಆದರೆ, ಆರ್‌ ಚಂದ್ರು ಶಿವಣ್ಣ ಅವರಿಗೆ ಮತ್ತೊಂದು ಸಿನಿಮಾ ಮಾಡುವುದು ಖಚಿತ. ಅದು ಬಹುಭಾಷಾ ಚಿತ್ರ ಎಂಬುದು ಮತ್ತೊಂದು ವಿಶೇಷ. ಇದೇ ವರ್ಷ ಸೆಟ್ಟೇರಲಿರುವ ಈ ಸಿನಿಮಾ ಮೈಥಾಲಜಿಕಲ್‌ ನೆರಳಿನಲ್ಲಿ ಮೂಡಿಬರಲಿದೆ ಎಂಬುದು ಮತ್ತೊಂದು ಹೈಲೈಟ್‌.

ಬಾದ್‌ಷಾನನ್ನು ಕೈ ಬಿಟ್ಟಮೇಲೆ ಶಿವಣ್ಣ ಅವರಿಗಾಗಿಯೇ ಆರ್‌ ಚಂದ್ರು ಮತ್ತೊಂದು ಕತೆ ಮಾಡಿಕೊಂಡಿದ್ದು ಬಹುತೇಕ ಅದು ಓಕೆ ಆಗಿದೆ. ನಿರ್ದೇಶಕರಾಗಿ ತೆಲುಗು ಪ್ರೇಕ್ಷಕರಿಗೂ ಪರಿಚಯವಾಗಿರುವುದರಿಂದ ಎಂದನಂತೆ ಕನ್ನಡದ ಜತೆಗೆ ಬೇರೆ ಭಾಷೆಯಲ್ಲೂ ಈ ಚಿತ್ರವನ್ನು ರೂಪಿಸುವುದಕ್ಕೆ ಚಂದ್ರು ಪ್ಲಾನ್‌ ಮಾಡಿಕೊಂಡಿದ್ದಾರೆ.

‘ಬಾದ್‌ಷಾ ಹೆಸರಿನಲ್ಲಿ ಈಗಾಗಲೇ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಂದಿವೆ. ಅಲ್ಲದೆ ಸದ್ಯಕ್ಕೆ ಈ ಹೆಸರಿನಲ್ಲಿ ಮಾಡಿಕೊಂಡಿರುವ ಕತೆ ಇನ್ನೂ ಅಂತಿಮವಾಗಿಲ್ಲ. ಹೀಗಾಗಿ ಬಾದ್‌ಷಾ ಶುರುವಾಗಲ್ಲ. ಅದರ ಬದಲಿಗೆ ನಮ್ಮಿಬ್ಬರಿಂದ ಬಿಗ್‌ ಬಜೆಟ್‌ ಸಿನಿಮಾ ಶುರುವಾಗಲಿದೆ. ಅದು ಮೈಥಾಲಜಿಕಲ್‌ ಕತೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ಮಾತ್ರ ಸದ್ಯಕ್ಕೆ ಹೇಳಬಹುದಾದ ವಿವರಣೆ’ ಎನ್ನುತ್ತಾರೆ ಶಿವಣ್ಣ.

ಆರ್‌ ಚಂದ್ರು ನಿರ್ದೇಶನದ ಎಲ್ಲ ಚಿತ್ರಗಳಿಗೂ ಶಿವಣ್ಣ ಅವರೇ ಕ್ಲಾಪ್‌ ಮಾಡುವುದು. ಯಾಕೆಂದರೆ ಸೆಂಚುರಿ ಸ್ಟಾರ್‌ ಕ್ಲಾಪ್‌ ಮಾಡಿದರೆ ಸಿನಿಮಾ ಹಿಟ್‌ ಆಗುತ್ತದೆಂಬ ನಂಬಿಕೆ ಚಂದ್ರು ಅವರದ್ದು. ಹೀಗಾಗಿ ಉಪೇಂದ್ರ ನಟನೆಯ ‘ಐ ಲವ್‌ ಯೂ’ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲೂ ಶಿವಣ್ಣ ಜತೆ ಮತ್ತೊಂದು ಸಿನಿಮಾ ಮಾಡುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ದೇಶಕರು.