ಬೆಂಗಳೂರು (ಆ. 29): ನ್ಯೂಸ್ ರೀಡಿಂಗ್ ಮಾಡುವಾಗ ಆ್ಯಕ್ಟಿಂಗ್ ಮಾಡುತ್ತೇನೆ ಅಂತಿದ್ದರು. ಆ್ಯಕ್ಟಿಂಗ್ ಮಾಡಿದಾಗ ನ್ಯೂಸ್ ರೀಡಿಂಗ್ ಥರ ಇರುತ್ತದೆ ಎಂದಿದ್ದರು. ಪತಿಬೇಕು.com ಚಿತ್ರದಿಂದಾಗಿ ಆ ಅಪವಾದದಿಂದ ನಾನು ಆಚೆ ಬಂದಿದ್ದೇನೆ. ಮಧ್ಯಮ ವರ್ಗದ ಹುಡುಗಿಯೊಬ್ಬಳ ಕತೆಯಿದು.

ಇಂಟರೆಸ್ಟಿಂಗ್ ಪಾತ್ರ. ಡೋಂಟ್ ಕೇರ್ ಆ್ಯಟಿಟ್ಯೂಡ್. ಭಾರತೀಯರ ಮನಸ್ಥಿತಿ ಪ್ರಕಾರ ಮದುವೆ ವಯಸ್ಸು ದಾಟಿದ ಹುಡುಗಿ. ಅವಳ ಜೊತೆ ಮನೆಯವರು, ಸಮಾಜ, ನೆಂಟರು ಹೇಗೆ ವರ್ತಿಸುತ್ತಾರೆ ಅನ್ನುವುದನ್ನು ಈ ಕತೆಯಲ್ಲಿ ಹೇಳಲಾಗುತ್ತದೆ. ಮಧ್ಯಮ ವರ್ಗದವರಿಗೆ, ಅದರಲ್ಲೂ ಎಲ್ಲಾ ಹೆಣ್ಣು ಮಕ್ಕಳಿಗೂ ಈ ಕತೆ ಹತ್ತಿರ ಅನ್ನಿಸುತ್ತದೆ. ತುಂಬಾ ತಮಾಷೆಯಾಗಿಯೇ ಸಾಗುವ ಸಿನಿಮಾ ಇದು. ಆಳದಲ್ಲಿ ವಿಷಾದವಿದೆ.

ಮಹಿಳಾ ಪ್ರಧಾನ ಚಿತ್ರಗಳು ಜಾಸ್ತಿಯಾಗಬೇಕು

ಹೊಸತಾಗಿ ಏನನ್ನೋ ಮಾಡಬೇಕು ಅಂತ ನ್ಯೂಸ್ ನಟನೆಗೆ ಬಂದೆ. ನಾಯಕಿಯಾಗಬೇಕು ಅನ್ನೋ ಆಸೆ ಏನೂ ಇರಲಿಲ್ಲ. ಈಗಾಗಲೇ ಹತ್ತು ಸಿನಿಮಾ ಆಗಿದೆ. ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಈಗ ಪತಿಬೇಕು.com ಚಿತ್ರ. ಇಲ್ಲಿ ಕತೆಯೇ ಹೀರೋ. ನಂಗೆ ಈ ಚಿತ್ರ ಎರಡು ಕಾರಣಕ್ಕೆ ತುಂಬಾ ಇಷ್ಟ. ಒಂದು ನಾನು ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿರುವ ಚಿತ್ರ. 

ಇನ್ನೊಂದು ಇದೊಂದು ವಿಶಿಷ್ಟ ಮಹಿಳಾ ಪ್ರಧಾನ ಚಿತ್ರ. ತುಂಬಾ ಸಹಜವಾದ ಕತೆಯನ್ನು ಹೊಂದಿದೆ. ಇಂಥಾ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಹೆಣ್ಣನ್ನು ಬೇರೆ ಥರ ತೋರಿಸುವ ಪ್ರಯತ್ನ ನಡೆಯಬೇಕು. ಇಂಥಾ ಸಿನಿಮಾ ಮಾಡುವ ಧೈರ್ಯ ಬರಬೇಕು. ಆ ಕಾರಣಕ್ಕೆ ನಾನು ಈ ಚಿತ್ರದ ನಿರ್ದೇಶಕ ರಾಕೇಶ್ ಅವರ ಮೇಲೆ ನಂಗೆ ಹೆಮ್ಮೆ.

ನನ್ನ ತಂಡ ನನ್ನ ಹೆಮ್ಮೆ

ನಿರ್ದೇಶಕ ರಾಕೇಶ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಅವರ ಜೊತೆ ಅರು ಗೌಡ, ಸಲ್ಮಾನ್, ಯೋಗಿ ಈ ಚಿತ್ರ ಚೆಂದಗೊಳಿಸಲು ತುಂಬಾ ಶ್ರಮಿಸಿದ್ದಾರೆ. ಇನ್ನು ನಿಜ ಹೇಳಬೇಕೆಂದರೆ ಈ ಚಿತ್ರದಲ್ಲಿ ನನಗಿಂತ ಕೃಷ್ಣ ಅಡಿಗ ಮತ್ತು ಹರಿಣಿ ಅವರ ಪಾತ್ರಗಳನ್ನು ನೋಡಬೇಕು. ಎಷ್ಟು ಚೆಂದ ನಟಿಸಿದ್ದಾರೆ ಅಂದ್ರೆ, ನೋಡೋಕೆ ಖುಷಿ. ಈ ಸಿನಿಮಾ ಜನ ಮೆಚ್ಚಿಕೊಂಡರೆ ಇನ್ನೂ ಇಂಥಾ ಪ್ರಯತ್ನಗಳು ಜಾಸ್ತಿಯಾಗುತ್ತವೆ.
ಫೀಮೇಲ್ ಓರಿಯೆಂಟೆಡ್ ಸಿನಿಮಾಗಳು ಜಾಸ್ತಿ ಬರುತ್ತವೆ. ಹಾಗಾಗಬೇಕು ಅನ್ನೋದು ನನ್ನ ಆಸೆ.

ಶೀತಲ್ ಶೆಟ್ಟಿ ಹೇಳಿದ ಕತೆ

ಒಬ್ಬ ರಾಜ ಒಂದು ದ್ವೀಪಕ್ಕೆ ಮುತ್ತಿಗೆ ಹಾಕಿದ್ದಾನೆ. ಆ ದ್ವೀಪವನ್ನು ತಮ್ಮದಾಗಿಸಲು ಸೈನಿಕರೆಲ್ಲಾ ಹೋರಾಡುತ್ತಿದ್ದಾರೆ. ಒಂದು ಹಂತದಲ್ಲಿ ರಾಜನ ಸೈನ್ಯ ಸೋಲತೊಡಗಿತು. ರಾಜನಿಗೆ ಚಿಂತೆಯಾಯಿತು. ದ್ವೀಪವನ್ನು ಗೆಲ್ಲಬೇಕು ಅನ್ನುವುದು ಅವನ ಆಸೆ.

ಆದರೆ ಸೈನಿಕರೆಲ್ಲಾ ಸೋಲುವ ಭಯದಲ್ಲಿದ್ದರು. ರಾಜ ಒಂದು ಐಡಿಯಾ ಮಾಡಿದ. ತನ್ನ ಸೈನಿಕನನ್ನು ಕರೆದು ದಡದಲ್ಲಿ ನಿಲ್ಲಿಸಿರುವ ನಮ್ಮ ಹಡಗುಗಳನ್ನೆಲ್ಲಾ ಸುಟ್ಟುಬಿಡು ಎಂದ. ಸೈನಿಕನಿಗೆ ಅಚ್ಚರಿ. ನಾವು ಮರಳಿ ಹೋಗಬೇಕಲ್ಲಾ ಎಂದು ಪ್ರಶ್ನಿಸಿದ. ರಾಜ ಸಿಟ್ಟಾಗಿ ಹೇಳಿದ ಕೆಲಸ ಮಾಡಿಕೊಂಡು ಬಾ, ಇದು ರಾಜಾಜ್ಞೆ ಎಂದ. ಸೈನಿಕ ಹಡಗುಗಳನ್ನೆಲ್ಲಾ ಸುಟ್ಟು ಹಾಕಿ ಬಂದಾಗ ರಾಜ ಹೇಳಿದ. ಈಗ ನಾವು ವಾಪಸ್
ಹೋಗುವ ದಾರಿ ಮುಚ್ಚಿಹೋಗಿದೆ. ಮುಂದೆ ಸಾಗದೆ ವಿಧಿಯಿಲ್ಲ.

ಹೊಸ ದಾರಿ ಸಿಗುವವರೆಗೆ ಹೋರಾಡಿ ಎಂದ. ಸೈನಿಕರು ವಾಪಸ್ ಹೋಗುವ ದಾರಿ ಇಲ್ಲ ಎಂದು ತಿಳಿದು ಬದುಕುವ ಅನಿವಾರ್ಯತೆಯಲ್ಲಿ ಹೋರಾಡಿದರು. ಹಾಗೇ ನಾನೂ. ಹಾದು ಬಂದ ಎಲ್ಲಾ ದಾರಿಗಳ ಬಾಗಿಲನ್ನು ಮುಚ್ಚಿದ್ದೇನೆ. ಮುಂದೆ ಹೋಗಲೇಬೇಕು. ಹೊಸ ಹೊಸ ದಾರಿಗಳು ಗೋಚರಿಸುತ್ತಿವೆ