ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಬಹುಕಾಲದ ಗೆಳೆಯ, ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಬಹುಕಾಲದ ಗೆಳೆಯ, ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರಂದು ರಾಜಸ್ಥಾನದ ಜೈಪುರದಲ್ಲಿರುವ ಐತಿಹಾಸಿಕ ಸಮೋದ್ ಪ್ಯಾಲೇಸ್‌ನಲ್ಲಿ ಕುಟುಂಬದವರು, ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಅದ್ಧೂರಿ ವಿವಾಹ ಸಮಾರಂಭ ನೆರವೇರಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಮನೆತನದ ವೈಭವವನ್ನು ನೆನಪಿಸುವ ಸಮೋದ್ ಪ್ಯಾಲೇಸ್‌ನಲ್ಲಿ ಅದ್ಭುತ ಲೈಟಿಂಗ್, ಹೂವಿನ ಅಲಂಕಾರ ಮತ್ತು ಸಾಂಪ್ರದಾಯಿಕ ಸೊಬಗಿನ ನಡುವೆ ನಡೆದ ಮದುವೆ ಸಮಾರಂಭ ಕಣ್ಮನ ಸೆಳೆಯುವಂತಿತ್ತು. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ಸೆಲೆಬ್ರಿಟಿಗಳು ಮದುವೆಗೆ ಆಯ್ಕೆ ಮಾಡಿಕೊಳ್ಳುವ ಈ ಡೆಸ್ಟಿನೇಶನ್‌ನಲ್ಲಿ ಶರ್ಮಿಳಾ-ಸುಧನ್ ಜೋಡಿಯ ಮದುವೆಯೂ ಅದ್ದೂರಿಯಾಗಿ ಜರುಗಿದ್ದು, ಅದರ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಜೂನ್ 25, 2026ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ದಕ್ಷಿಣ ಭಾರತದ ವೈದಿಕ ಸಂಪ್ರದಾಯದಂತೆ ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದೆ. ಎರಡು ದಿನಗಳ ಕಾಲ ನಡೆದ ಮದುವೆ ಸಂಭ್ರಮದಲ್ಲಿ ಜುಲೈ 11ರಂದು ಹಳದಿ, ಮೆಹೆಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರು ಸಂಭ್ರಮದಲ್ಲಿ ಭಾಗಿಯಾಗಿ ಈ ವಿಶೇಷ ಕ್ಷಣವನ್ನು ಇನ್ನಷ್ಟು ನೆನಪಿನಲ್ಲಿರುವಂತೆ ಮಾಡಿದರು.

ಮದುವೆಯ ಕ್ಷಣಗಳು ವೈರಲ್

ಈ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಸಾಕ್ಷಿಯಾದರು. ನಟಿ ರಮ್ಯಾ, ದೊಡ್ಮನೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಹಾಗೂ ಅವರ ಪುತ್ರಿ ಧನ್ಯಾ ರಾಮ್‌ಕುಮಾರ್ ಸೇರಿದಂತೆ ಹಲವು ಆಪ್ತರು ಜೈಪುರಕ್ಕೆ ತೆರಳಿ ನವಜೋಡಿಗೆ ಶುಭ ಹಾರೈಸಿದರು. ಧನ್ಯಾ ರಾಮ್‌ಕುಮಾರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮದುವೆಯ ಕ್ಷಣಗಳು ಅಭಿಮಾನಿಗಳ ಗಮನ ಸೆಳೆದಿದ್ದು, ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶರ್ಮಿಳಾ ಮಾಂಡ್ರೆ ಅವರ ಜೀವನದ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಹೊಸ ಬದುಕು ಆರಂಭಿಸಿರುವ ಶರ್ಮಿಳಾ ಮತ್ತು ಸುಧನ್ ಸುಂದರಂ ದಂಪತಿಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.