ಇವರ ಹೆಸರು ಮಾಸ್ತಿ; ಇವರು ಚಿತ್ರರಂಗದ ಆಸ್ತಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 11:38 AM IST
Script writer Masti exclusive interview with Kannada Prabha
Highlights

ಚಿತ್ರ ಸಾಹಿತಿಗಳ ಅಂತರಂಗ ಬಿಚ್ಚಿಡುವ ಕನ್ನಡ ಪ್ರಭದ ವಿನೂತನ ಪ್ರಯೋಗ ಸ್ಟಾರ್ ರೈಟಿಂಗ್ ಅಂಕಣದಲ್ಲಿ ಈ ಬಾರಿ ಸ್ಟಾರ್ ಆದವರು ಮಾಸ್ತಿ. ಇವರು ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗದ ಅದ್ಭುತ ಪ್ರತಿಭೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವರ ಬಗ್ಗೆ ಕುತೂಹಲಕಾರಿ ವಿಚಾರಗಳು ಇಲ್ಲಿವೆ ಓದಿ. 

ಬೆಂಗಳೂರು (ಸೆ. 07): ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹುಟ್ಟಿದ ಊರಲ್ಲಿ ಹುಟ್ಟಿದವರು. ಹಾಗಾಗಿ ಇವರ ಹೆಸರು ಮಾಸ್ತಿ. ಅವರು ಕನ್ನಡದ ಆಸ್ತಿ. ಇವರು ಚಿತ್ರರಂಗದ ಆಸ್ತಿ.

ಕೋಲಾರದ ಮಾಲೂರು ತಾಲೂಕಿನ ಉಪ್ಪಾರಹಳ್ಳಿಯಲ್ಲಿಯಲ್ಲಿ ಹುಟ್ಟಿ ಬೆಳೆದ ಜೀವ. ತೆಲುಗು ಸಿನಿಮಾಗಳು ಪ್ರಾಬಲ್ಯ ಸಾಧಿಸುತ್ತಿದ್ದ ವೇಳೆಯಲ್ಲಿ ಡಾ.ರಾಜ್‌ಕುಮಾರ್, ಅಂಬರೀಶ್ ಸಿನಿಮಾಗಳಿಗಾಗಿ ಹೋರಾಟ ನಡೆಸಿದವರು. ಸಿನಿಮಾ ವ್ಯಾಮೋಹಿ. ಆದರೆ ಸಿನಿಮಾ ಸಹವಾಸ ಸಿಕ್ಕಿದ್ದು ಎಲ್‌ಎಲ್‌ಬಿ ಓದೋಕೆ ಬೆಂಗಳೂರಿಗೆ ಬಂದಾಗ.

‘ಸುಂಟರಗಾಳಿ’ ಚಿತ್ರದ ಸ್ಕ್ರಿಪ್ಟ್ ಕೆಲಸ ಆಗುತ್ತಿತ್ತು. ಸಾಧುಕೋಕಿಲ ಅದರ ನಿರ್ದೇಶಕರು. ತುಷಾರ್ ರಂಗನಾಥ್, ಸೂರಿ ಸಹನಿರ್ದೇಶಕರು. ತುಷಾರ್ ಒಂದು ದಿನ ಮಾಸ್ತಿಯವರನ್ನು ಡಿಸ್ಕಷನ್‌ಗೆ ಕರೆದುಕೊಂಡು ಹೋದರು. ದರ್ಶನ್ ಇಂಟ್ರಡಕ್ಷನ್ ಸೀನ್ ಚರ್ಚೆ ಆಗುತ್ತಿತ್ತು. ಎಲ್ಲರ ಮಧ್ಯೆ ಕುಳಿತಿದ್ದ ಮಾಸ್ತಿ ಒಂದು ಸೀನ್ ಕಟ್ಟಿ ಹೇಳಿಬಿಟ್ಟರು. ಅದು ಓಕೆ ಆಯಿತು. ಅದರಿಂದ ಮಾಸ್ತಿ ಇಂಟ್ರಡಕ್ಷನ್ ಕೂಡ ನಡೆದುಹೋಯಿತು.

ದುನಿಯಾ ಸೂರಿ ಪರಿಚಯ ಆಯಿತು. ಅನೇಕ ಸಿನಿಮಾಗಳಲ್ಲಿ ಕೆಲಸ ಸಿಕ್ಕಿತು. ಆದರೆ ಜಗತ್ತಿನ ಗಮನ ಸೆಳೆಯುವಂತಹ ಕೆಲಸ ಆಗಲಿಲ್ಲ. ಒನ್ ಫೈನ್ ಡೇ ‘ಬಾಲ್‌ಪೆನ್’ ಕಥೆ ಬರೆದು ಶ್ರೀನಗರ ಕಿಟ್ಟಿಯನ್ನು ಭೇಟಿ ಮಾಡಿದರು. ಕಿಟ್ಟಿಗೆ ಕಥೆ ಇಷ್ಟವಾಯಿತು. ಶಶಿಕಾಂತ್ ನಿರ್ದೇಶನ ಮಾಡಿದರು. ಸಿನಿಮಾ ಜನಮೆಚ್ಚುಗೆ ಗಳಿಸಿತು. ಮಾಸ್ತಿಗೆ ಆ ಚಿತ್ರ ಹೆಸರು ತಂದಿತು. ದುನಿಯಾ ಸೂರಿ ಜೊತೆಗೆ ಕೆಲಸ ಮಾಡಿದರು. ಸೂರಿ ಗುರುವಿನಂತೆ ದಾರಿ ತೋರಿದರು.

ಒಂದೊಳ್ಳೆ ದಿನ ‘ಟಗರು’ ಚಿತ್ರಕ್ಕೆ ಸ್ವತಂತ್ರವಾಗಿ ಸಂಭಾಷಣೆ ಬರೆಯೋ ಅವಕಾಶ ಕೊಟ್ಟರು. ಯಾವಾಗ ಟಗರು ರಿಲೀಸಾಯಿತೋ ಮಾಸ್ತಿ ಎಂಬ ರೈಟಿಂಗ್ ಸ್ಟಾರ್ ಮನೆಮಾತಾಗಿಬಿಟ್ಟ. ‘ನಾನು ಕನ್ನಡ ಮೀಡಿಯಂನಲ್ಲಿ ಓದಿದವನು. ಚಂದಮಾಮ, ಬಾಲಮಿತ್ರ ಓದುತ್ತಾ ಬೆಳೆದವನು. ಅಕ್ಷರವನ್ನೇ ನಂಬಿಕೊಂಡವನು’ ಎನ್ನುವ ಮಾಸ್ತಿ ಚಿತ್ರರಂಗಕ್ಕೆ ಬಂದು 14 ವರ್ಷ ಕಳೆದಿವೆ. ಸೂರಿ, ಯೋಗರಾಜ ಭಟ್ಟರ ಸಹವಾಸದಲ್ಲಿದ್ದು ಬರವಣಿಗೆ ಮೊನಚಾಗಿದೆ.

ಚಿತ್ರರಂಗ ಅರ್ಥವಾಗಿದೆ. ಬರೆದುಕೊಂಡೇ ಬದುಕುವೆ, ನಿರ್ದೇಶನಕ್ಕೆ ಆತುರವಿಲ್ಲ ಎಂಬ ನಿರ್ಧಾರ ಅಚಲವಾಗಿದೆ. ಯಾರಾದರೂ ಇವರನ್ನು ಸರಸ್ವತಿ ಪುತ್ರ ಎಂದರೆ ಇವರಿಗೆ ಖುಷಿಯಾಗುತ್ತದೆ. ಯಾಕೆಂದರೆ ಇವರ ತಾಯಿ ಹೆಸರು ಸರಸ್ವತಮ್ಮ. ತಂದೆ ಹೆಸರು ಚಿನ್ನಪ್ಪ. ‘ನಿರ್ದೇಶಕರು ಹೇಳುವ ಕತೆಯನ್ನು ಗಮನವಿಟ್ಟು ಕೇಳಿ, ಅವರ ಪಾಯಿಂಟ್ ಆಫ್ ವ್ಯೆ ಗ್ರಹಿಸ್ತೀನಿ. ಅನಂತರ ಆಯಾಯ ಪಾತ್ರಗಳಿಗೆ ತಕ್ಕ ಹಾಗೆ ಹೋಂವರ್ಕ್ ಮಾಡಿಕೊಳ್ಳುತ್ತೇನೆ.

ಸಿನಿಮಾದ ಬಲವಾದ ಬೆನ್ನೆಲುಬು ಪೆನ್ನು’ ಎನ್ನುವ ಮಾಸ್ತಿಯ ಗಮನ ಇರುವುದು ಕತೆಗಳನ್ನು ಬರೆಯುವ ಕಡೆಗೆ. ಇವರನ್ನು ಸಂಭಾಷಣೆ ಹೇಗಿರಬೇಕು ಎಂದು ಕೇಳಿದರೆ ಅವರು ‘ಮಳೆಯಲ್ಲಿ ನೆನೆಯದೆ ಮಳೆಯ ಬಗ್ಗೆ ಬರೆಯಬಾರದು. ಸಂಭಾಷಣೆಯಲ್ಲಿ ಬುದ್ಧಿಮಾತು ಹೇಳಬಾರದು’ ಎನ್ನುತ್ತಾರೆ. 

-ರಾಜೇಶ್ ಶೆಟ್ಟಿ 

loader