ಬೆಂಗಳೂರು (ಸೆ. 27): ರಿಷಬ್ ಶೆಟ್ಟಿ ನಿರ್ದೇಶನದ ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರ ಹೊಸ ದಾಖಲೆ ಬರೆದಿದೆ. ಅಂಡಮಾನ್ ನಿಕೋಬಾರ್‌ನಲ್ಲಿ ಪ್ರದರ್ಶನವಾಗುವ ಮೊತ್ತಮೊದಲ ಚಿತ್ರ ಎಂಬ ದಾಖಲೆ ‘ಸಹಿಪ್ರಾ ಶಾಲೆ ಕಾಸರಗೋಡು’ ಪಾಲಾಗಿದೆ.

ಕರ್ನಾಟಕದಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿದ ಈ ಚಿತ್ರ ನಂತರ ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ದೇಶಗಳಲ್ಲಿ ಕನ್ನಡಿಗರ ಮೆಚ್ಚುಗೆ ಗಳಿಸುತ್ತಾ ಸಾಗಿದೆ. ಅಮೆರಿಕಾ, ಯುರೋಪ್‌ಗಳಲ್ಲಿ ತನ್ನ ದಿಗ್ವಿಜಯವನ್ನು ಮುಂದುವರಿಸಿದೆ. ಅಮೆರಿಕಾದ ಕೆಲವು ಕಡೆಗಳಲ್ಲಿ ಕಿರಿಕ್‌ಪಾರ್ಟಿ ಮತ್ತು ರಂಗಿತರಂಗ ಚಿತ್ರದ ಗಳಿಕೆಯ ದಾಖಲೆಯನ್ನು ರಿಷಬ್ ಶೆಟ್ಟಿ ಸಹಿಪ್ರಾ ಶಾಲೆ ಕಾಸರಗೋಡು ಮುರಿದಿದೆ.

ಇದೀಗ ಅಂಡಮಾನ್- ನಿಕೋಬಾರ್‌ನಲ್ಲಿ ತನ್ನ ಯಶಸ್ಸನ್ನು ದಾಖಲಿಸಲು ಮುಂದಾಗಿದೆ. ಸೆ.29 ಮತ್ತು 30 ರಂದು ಪೋರ್ಟ್‌ಬ್ಲೇರ್ನ ದಿವ್ಯಂ ಟಾಕೀಸಿನಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಅಲ್ಲಿನ ಕನ್ನಡ ಸಂಘದವರು ಈ ಚಿತ್ರವನ್ನು ನೋಡಲು ತೀವ್ರ ಕುತೂಹಲಿಗಳಾಗಿದ್ದಾರೆ.

ಈ ಮಧ್ಯೆ ಕನ್ನಡ ಚಿತ್ರ ಇದುವರೆಗೆ ಪ್ರದರ್ಶನ ಕಾಣದ ಬೇರೆ ಬೇರೆ ದೇಶಗಳಿಂದ ಈ ಚಿತ್ರಕ್ಕೆ ಬೇಡಿಕೆ ಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.