ಈ ನಡುವೆಯೇ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲಕ್ಕೂ ಬಹುತೇಕ ತೆರೆಬಿದ್ದಿದೆ. ಬಾಲಿವುಡ್‌ ಹುಡುಗಿ ಸಯ್ಯೇಷಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೆಲುಗಿನ ‘ಅಖಿಲ್‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮುಂಬೈ ಮೂಲದ ಈ ಚೆಲುವೆ ಈಗಾಗಲೇ ತೆಲುಗು ಚಿತ್ರರಂಗದ ಮೂಲಕವೇ ಹಿಂದಿ ಹಾಗೂ ತಮಿಳು ಚಿತ್ರೋದ್ಯಮಕ್ಕೂ ಪರಿಚಯವಾಗಿದ್ದಾರೆ. ಹಾಗೆಯೇ ಬಾಲಿವುಡ್‌ನ ಹೆಸರಾಂತ ತಾರಾ ಜೋಡಿ ಸೈರಾ ಭಾನು ಹಾಗೂ ದಿಲೀಪ್‌ ಕುಮಾರ್‌ ಕುಟುಂಬದ ಕುಡಿಯೂ ಹೌದು. ಆ ನಂಟಿನ ಮೂಲಕವೇ ಬೆಳ್ಳಿತೆರೆಗೆ ಬಂದು ಬಹುಭಾಷೆಗಳಲ್ಲಿ ಮಿಂಚುತ್ತಿರುವ ಈ ಸುಂದರಿಯನ್ನ ಈಗ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಕನ್ನಡಕ್ಕೆ ಕರೆತರುತ್ತಿದ್ದಾರೆನ್ನಲಾಗಿದೆ.

ಆದರೆ ಈ ಸುದ್ದಿಯನ್ನು ಸಂತೋಷ್‌ ಆನಂದ್‌ರಾಮ್‌ ಅಲ್ಲಗಳೆದಿದ್ದಾರೆ. ‘ಅದೆಲ್ಲ ಆಧಾರ ರಹಿತ ಸುದ್ದಿ. ನಾವಿನ್ನು ಚಿತ್ರದ ನಾಯಕಿ ಪಾತ್ರಕ್ಕೆ ಬೇಕಾದಂತಹ ಸೂಕ್ತ ನಟಿಯ ಹುಡುಕಾಟದಲ್ಲಿರುವುದು ನಿಜ. ಆದರೆ ಯಾರನ್ನು ಇನ್ನು ಫೈನಲ್‌ ಮಾಡಿಲ್ಲ. ಕನ್ನಡದ ನಟಿಯರೇ ಚಿತ್ರಕ್ಕೆ ನಾಯಕಿಯಾದರೆ ಒಳ್ಳೆಯದು ಎನ್ನುವುದು ನಮ್ಮ ನಿರ್ಧಾರ. ಅದಕ್ಕೆ ತಕ್ಕಂತೆ ಈಗಲೂ ಶೋಧನೆಯಲ್ಲಿದ್ದೇವೆ. ಈ ಮಧ್ಯೆ ಕೇಳಿಬರುತ್ತಿರುವ ಸುದ್ದಿಗಳು ಯಾವುದು ಖಚಿತವಲ್ಲ. ಇಷ್ಟರಲ್ಲಿ ಚಿತ್ರತಂಡವೇ ನಾಯಕಿ ಯಾರೆಂಬುದನ್ನು ರಿವೀಲ್‌ ಮಾಡಲಿದೆ’ ಎನ್ನುತ್ತಾರೆ.