ಎರಡು ಅದ್ದೂರಿ ಸೀರಿಯಲ್ಲಿನ ಹೀರೋಯಿನ್'ಗಳನ್ನು ಬಿಗ್'ಬಾಸ್ ತನ್ನ ಮನೆಯಲ್ಲಿಟ್ಟುಕೊಂಡಿದೆ. ಈ ಪರಿಣಾಮ ಒಂದು ಧಾರಾವಾಹಿ ನಿಂತರೆ, ಮತ್ತೊಂದು ಬೇರೆ ನಟಿಯನ್ನು ಆರಿಸಿಕೊಂಡಿದೆ. ಈ ಇಬ್ಬರು ನಟಿಯರು 'ಬಿಗ್' ಸುಳ್ಳನ್ನೇ ಹೇಳಿ ಹೋಗಿದ್ದಾರಂತೆ..!

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

ಬಿಗ್‌ ಶೋ ಒಂದು ಧಾರಾವಾಹಿಯನ್ನು ನುಂಗಿದ ಕತೆಯಿದು! ಕನ್ನಡದ ‘ಬಿಗ್‌ಬಾಸ್‌' ಈಗ ಎರಡು ಧಾರಾವಾಹಿಗಳಿಗೆ ಬಿಸಿ ಮುಟ್ಟಿಸಿದೆ. ಎರಡು ಅದ್ಧೂರಿ ಸೀರಿಯಲ್ಲಿನ ಹೀರೋಯಿನ್‌ಗಳನ್ನು ಬಿಗ್‌ಬಾಸ್‌ ತನ್ನ ಮನೆಯಲ್ಲಿಟ್ಟುಕೊಂಡಿದೆ. ಈ ಪರಿಣಾಮ ಎರಡು ಚಾನೆಲ್‌ಗಳಿಗೆ ಬಿಗ್‌ಬಾಸ್‌ ಬಿಸಿತುಪ್ಪವಾಗಿದೆ. ಒಂದು ಧಾರಾವಾಹಿ ಅನ್ಯ ಮಾರ್ಗವಿಲ್ಲದೆ ವೈಂಡಪ್‌ ಆಗಿದೆ. ಮತ್ತೊಂದಕ್ಕೆ ಹೊಸ ನಾಯಕಿ ಬಂದಿದ್ದಾಳೆ. ಆದರೆ, ಆಕೆಯನ್ನು ಹುಡುಕಿ ತಂದು ಮತ್ತೆ ಸೀರಿಯಲ್‌ ಶೂಟ್‌ ಮಾಡುವುದಕ್ಕೆ ಪರದಾಡುತ್ತಿದೆ ಚಿತ್ರತಂಡ!
ಆ ಇಬ್ಬರು ನಟಿಯರೇ ಕಾವ್ಯಾ ಶಾಸ್ತ್ರಿ, ಸಂಜನಾ ಚಿದಾನಂದ್‌. ಧಾರಾವಾಹಿ ನಿರ್ದೇಶಕರಿಗೆ ಇವರಿಬ್ಬರೂ ಅಲ್ಲಿಗೆ ಹೋಗುವ ಸುಳಿವನ್ನೇ ಕೊಟ್ಟಿರಲಿಲ್ಲ. ಬಿಗ್‌ಬಾಸ್‌ ಮನೆಗೆ ಪ್ರವೇಶ ಕೊಟ್ಟಾಗಲೇ ನಿರ್ದೇಶಕರಿಗೆ ನಿಜಾಂಶ ಗೊತ್ತಾಗಿದೆ. ಇವರನ್ನೇ ನಂಬಿಕೊಂಡಿದ್ದ ‘ಶುಭ ವಿವಾಹ', ‘ಜೀವನಚೈತ್ರ' ಧಾರಾವಾಹಿ ತಂಡಗಳಿಗೆ ಶಾಕ್‌ ಆಗಿದೆ. ‘ಝೀ' ಕನ್ನಡದ ‘ಶುಭವಿವಾಹ'ಕ್ಕೆ ಕಾವ್ಯಾ ಶಾಸ್ತ್ರಿ ನಾಯಕಿ ಆಗಿದ್ದರು. ಎರಡೂವರೆ ವರ್ಷಗಳಿಂದ ಅದು ಪ್ರಸಾರವಾಗುತ್ತಿದೆ. ಆದರೆ ರಹಸ್ಯವಾಗಿ ‘ಬಿಗ್‌ಬಾಸ್‌'ಗೆ ಕಮಿಟ್‌ ಆಗಿದ್ದ ಕಾವ್ಯಾ ಶಾಸ್ತ್ರಿ , ವೈಯಕ್ತಿಕ ಕಾರಣ ಹೇಳಿ ಎರಡು ವಾರದ ಹಿಂದಷ್ಟೇ ಆ ಧಾರಾವಾಹಿಯಿಂದ ಹೊರಗೆ ಕಾಲಿಟ್ಟರಂತೆ. ಇವರ ಪಾತ್ರದ ಜನಪ್ರಿಯತೆಯೇ ‘ಶುಭವಿವಾಹ'ಕ್ಕೆ ಟಿಆರ್‌ಪಿ ಆಗಿತ್ತು. ಹೊಸ ನಾಯಕಿ ಹುಡುಕಾಟವನ್ನು ಕೈಬಿಟ್ಟು, ಧಾರಾವಾಹಿಯನ್ನೇ ಅರ್ಧದಲ್ಲಿ ನಿಲ್ಲಿಸಲಾಗಿದೆ!
‘ನಟಿ ಕಾವ್ಯಾ ಶಾಸ್ತ್ರಿ ಧಾರಾವಾಹಿಯಿಂದ ಹೊರ ಹೋಗುವಾಗ ಬಿಗ್‌ಬಾಸ್‌ ಕಾರಣ ಹೇಳಿರಲಿಲ್ಲ. ಪರ್ಸನಲ್‌ ಕಾರಣವನ್ನು ಮುಂದಿಟ್ಟಿದ್ದರು. ಅವರ ಕೋರಿಕೆಯಿಂದಾಗಿ ಒಪ್ಪಿಗೆ ಹೇಳಿದ್ದೆವು. ಆದರೆ ಈಗ ಅವರು ಬಿಗ್‌ಬಾಸ್‌ ಮನೆಯಲ್ಲಿದ್ದಾರೆ. ಅಲ್ಲಿಗೆ ಹೋಗುವುದಕ್ಕಾಗಿ ಅವರು ಸುಳ್ಳು ಹೇಳುವ ಅಗತ್ಯ ಇರಲಿಲ್ಲ' ಎನ್ನುವುದು ಧಾರಾವಾಹಿ ತಂಡದ ಮಾತು.
ನಟಿ ಸಂಜನಾ ಚಿದಾನಂದ್‌ ಅವರದ್ದೂ ಇದೇ ಕತೆ. ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ‘ಜೀವನಚೈತ್ರ' ಧಾರಾವಾಹಿಯ ನಾಯಕಿ ಸಂಜನಾ. ಈ ಧಾರಾವಾಹಿಯಲ್ಲಿ ಸಂಜನಾ ಸೆಕೆಂಡ್‌ ಹೀರೋಯಿನ್‌. ಈ ಪಾತ್ರಕ್ಕೆ ನೆಗೇಟಿವ್‌ ಶೇಡ್‌ ಇದ್ದಿದ್ದರಿಂದ ಪ್ರಮುಖ ಆಕರ್ಷಣೆ ಅವರೇ ಆಗಿದ್ದರು. ಆದರೆ ಈಗವರು ಬಿಗ್‌'ಬಾಸ್‌ ಅತಿಥಿ. ‘ಜೀವನಚೈತ್ರ' ತಂಡಕ್ಕೆ ಇದು ಗೊತ್ತಾಗಿದ್ದೇ ಬಿಗ್‌'ಬಾಸ್‌ ಶುರುವಾದ ಮೇಲೆ. ನಟಿ ಕಾವ್ಯಾಶಾಸ್ತ್ರಿ ‘ಶುಭ ವಿವಾಹ' ತಂಡವನ್ನು ಯಾಮಾರಿಸಿದ ಹಾಗೆಯೇ, ಸಂಜನಾ ಕೂಡ ‘ಜೀವನಚೈತ್ರ' ಸದಸ್ಯರ ಕಿವಿಗೆ ಹೂವಿಟ್ಟಿದ್ದಾರೆ. ‘ಆರೋಗ್ಯ ಸರಿಯಿಲ್ಲ. ನಿತ್ಯವೂ ಸೀರಿಯಲ್‌ ಚಿತ್ರೀಕರಣಕ್ಕೆ ಬರಲು ಕಷ್ಟವಾಗುತ್ತಿದೆ. ಹೀಗಾಗಿ ಧಾರಾವಾಹಿಯಿಂದ ಹೊರ ಹೋಗುತ್ತಿದ್ದೇನೆ' ಎಂದಿದ್ದರಂತೆ ಸಂಜನಾ. ಹೀಗೆ ಹೇಳಿದ್ದು ಕೂಡ ಬಿಗ್‌ಬಾಸ್‌ಗೆ ಹೋಗುವುದಕ್ಕಿಂತ ಮೂರು ದಿನಗಳ ಮುಂಚೆ!
ಇದು ನಿಜವೆಂದು ನಂಬಿದ ಧಾರಾವಾಹಿ ತಂಡ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಹೊರಟಿತು. ತಕ್ಷಣವೇ ಆಡಿಷನ್‌ ನಡೆಸಿ, ಅವರ ಜಾಗಕ್ಕೆ ಲಾಸ್ಯಾ ಎನ್ನುವ ನಟಿಯನ್ನು ಪರಿಚಯಿಸಿತು. ಸಂಜನಾ ನೀಡಿದ ಕಾರಣ ಸುಳ್ಳು ಎನ್ನುವುದು ಬಯಲಾದ ನಂತರ ‘ಜೀವನಚೈತ್ರ' ತಂ​ಡಕ್ಕೆ ಈಗ ಆಘಾತವಾಗಿದೆ. ಧಾರಾವಾಹಿ ಒಪ್ಪಂದದ ಪ್ರಕಾರ, ಇನ್ನೂ ಆರು ತಿಂಗಳು ಅವರು ಕೆಲಸ ಮಾಡಬೇಕಿತ್ತು. ಈ ಬಗ್ಗೆ ನಟಿಯರಿಬ್ಬರ ಮೊಬೈಲ್‌'ಗೆ ಸಂಪರ್ಕಿಸಿದರೆ, ಉತ್ತರ ಒಂದೇ ‘ಸ್ವಿಚ್ಡ್ ಆಫ್‌'! ಕಾರಣ, ಬಿಗ್‌'ಬಾಸ್‌ ಮನೆಯ ರಿಸ್ಟ್ರಿಕ್ಷನ್‌!