ಕನ್ನಡ ಚಿತ್ರರಂಗದಲ್ಲಿ ‘ತ್ಯಾಗರಾಜ’ ಎಂದೇ ಜನಪ್ರಿಯರಾದ ರಮೇಶ್ ಅರವಿಂದ್ ಸೋಮವಾರ ಹುಟ್ಟುಹಬ್ಬ ಆಚರಿಸಿಕೊಂಡರು. ಕುಟುಂಬದವರು, ಅಭಿಮಾನಿಗಳ ಸಮ್ಮುಖದಲ್ಲಿ ಬೆಳಗ್ಗೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಹುಟ್ಟುಹಬ್ಬ ಸಂಭ್ರಮ ಹಂಚಿಕೊಂಡರು. ಯಾವುದೇ ವೈಭವದ ಸಂಭ್ರಮಾಚರಣೆ ಇಷ್ಟಪಡದ ರಮೇಶ್, ತಮ್ಮ ಹುಟ್ಟುಹಬ್ಬದ ಆಚರಣೆಗೆ ಹೇಳಿದಿಷ್ಟು..

‘ನಟನಾಗಿ ಬೆಳ್ಳಿತೆರೆಗೆ ಬರುವ ಮುಂಚೆ ನಾನು ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ. ಸಿನಿಮಾಕ್ಕೆ ಬಂದ ಮೇಲೆ ಇದೆಲ್ಲ ಶುರುವಾಯಿತು. ಅಲ್ಲಿಂದ ಪ್ರತಿ ವರ್ಷ ಅಭಿಮಾನಿಗಳಿಂದಲೇ ಹುಟ್ಟುಹಬ್ಬಕ್ಕೊಂದು ಕಳೆ. ಈಗಲೂ ಅಷ್ಟೇ ಅನೇಕ ಜನರು ಚಿತ್ರೋದ್ಯಮದ ಗಣ್ಯರು, ಹಿತೈಷಿಗಳು, ಅಭಿಮಾನಿಗಳು ಟ್ವಿಟ್ಟರ್, ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ಫೋನ್ ಕಾಲ್, ಮೆಸೇಜ್, ವಾಟ್ಸಾಪ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಶುಭಾಶಯ ಕೋರಿದ್ದಾರೆ. ಹಲವರು ನೇರವಾಗಿ ಬಂದು ವಿಶ್ ಮಾಡಿದ್ದಾರೆ. ಅವರ ಪ್ರೀತಿಗೆ ನಾನು ಚಿರಋಣಿ. ಉಳಿದಂತೆ ಭವಿಷ್ಯದ ಪ್ರಾಜೆಕ್ಟ್‌ಗಳ ಕುರಿತು ರಮೇಶ್ ಅರವಿಂದ್ ಹೇಳಿದ್ದು.

  • ‘ಬಟರ್ ಫ್ಲೈ’ ನನ್ನ ಸಿನಿಜರ್ನಿಯಲ್ಲಿ ವಿಶೇಷವಾದ ಸಿನಿಮಾ. ಕನ್ನಡದ ಜತೆಗೆ ತಮಿಳಿನಲ್ಲೂ ಈ ಚಿತ್ರಕ್ಕೆ ನಾನೇ ನಿರ್ದೇಶಕ. ಸದ್ಯಕ್ಕೀಗ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನವೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ. ತುಂಬಾ ಎಕ್ಸೈಟ್‌ಮೆಂಟ್ ಇದೆ.
  • ನಟನಾಗಿ ನಾನೀಗ ‘ಭೈರಾದೇವಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದು ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚಿತ್ರ. ಅವರೇ ಚಿತ್ರದ ನಾಯಕಿ. ಚಿತ್ರದಲ್ಲಿ ನಾನೊಬ್ಬ ಪೊಲೀಸ್ ಅಧಿಕಾರಿ. ಶಾಂತಿ ಕ್ರಾಂತಿ ನಂತರ ಇದೇ ಮೊದಲು ಖಾಕಿ ಯೂನಿಫಾರ್ಮ್ ತೊಟ್ಟಿದ್ದೇನೆ. ಡಿಸಿಪಿ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ.ಹಲವು ವರ್ಷಗಳ ನಂತರ ಖಾಕಿ ಆಗಿದ್ದೇನೆ ಎನ್ನುವ ವಿಶೇಷತೆ ಜತೆಗೆ ಇದೊಂದು ವಿಶೇಷ ಪಾತ್ರ ಅನ್ನೋದು ಹೌದು.
  • ಇಷ್ಟರಲ್ಲೇ ಮತ್ತೊಂದು ಚಿತ್ರ ಶುರುವಾಗುತ್ತಿದೆ. ಆಕಾಶ್ ಶ್ರೀವಾಸ್ತವ್ ಇದರ ನಿರ್ದೇಶಕರು. ಹಲವು ವರ್ಷ ಸಹಾಯಕ ನಿರ್ದೇಶಕರಾಗಿದ್ದರು. ಈಗ ಅವರೇ ಒಂದು ಚಿತ್ರ ನಿರ್ದೇಶಿಸಿ ತೆರೆಗೆ ತರಲು ಹೊರಟಿದ್ದಾರೆ. ಅಕ್ಟೋಬರ್‌ನಲ್ಲಿ ಈ ಚಿತ್ರಕ್ಕೆ ಮುಹೂರ್ತ. ಒಂದೊಳ್ಳೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆ ಎನ್ನುವ ಖುಷಿಯಿದೆ.
  • ಕಿರುತೆರೆ ಜರ್ನಿ ಮುಂದುವರೆದಿರುವುದು ಖುಷಿಯಿದೆ. ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಿಕ್ಕ ರೆಸ್ಪಾನ್ಸ್ ಕೋಟ್ಯಧಿಪತಿ ಶೋಗೂ ಸಿಕ್ಕಿದೆ. ಒಟ್ಟು 65 ಎಪಿಸೋಡ್‌ಗೆ ನಾನು ಕಾಲ್‌ಶೀಟ್ ಕೊಟ್ಟಿದ್ದು. ಈಗಾಗಲೇ 55 ಎಪಿಸೋಡ್
  • ಕಂಪ್ಲೀಟ್ ಆಗಿದೆ. ನಟನೆ, ನಿರ್ದೇಶನದ ಆಚೆ ನನ್ನನ್ನು ನಾನು ಇನ್ನೊಂದು ಬಗೆಯಲ್ಲಿ ಗುರುತಿಸಿಕೊಳ್ಳಲು ಇದರಿಂದ ಸಾಧ್ಯವಾಗಿದೆ.
  • ಸಿನಿಮಾ, ಕಿರುತೆರೆ ನಡುವೆ ಒಂದಷ್ಟು ಓದು, ಪ್ರವಾಸ ಇತ್ಯಾದಿ ಕೆಲಸಗಳು ಬಾಕಿ ಉಳಿದಿವೆ. ನಟನೆ, ನಿರ್ದೇಶನದ ಜತೆಗೆ ನಾನು ಹೆಚ್ಚು ಇಷ್ಟಪಡುವುದು ಓದು ಮತ್ತು ಪ್ರವಾಸ. ಇವೆಲ್ಲವೂ ಹೊಸ ಜ್ಞಾನಕ್ಕೆ ನಮ್ಮನ್ನು ಮತ್ತಷ್ಟು ತೆರೆದುಕೊಳ್ಳಲು ಸಾಧ್ಯವಾಗಿಸುತ್ತವೆ ಅನ್ನೋದು ನನ್ನ ನಂಬಿಕೆ. ಮತ್ತಷ್ಟು ಓದಬೇಕು. ಒಳ್ಳೆಯ ಕತೆ ಸಿಕ್ಕರೆ ಸಿನಿಮಾ ಮಾಡುವುದಕ್ಕೂ ಕಾರಣವಾಗುತ್ತೆ ಎನ್ನುವ ಆಸೆಯೂ ಇದೆ.